ಅತ್ಯುತ್ತಮ ಸಂಯೋಜನಾಧಿಕಾರಿ ರಾಜ್ಯ ಪ್ರಶಸ್ತಿಗೆ ಡಾ. ದಳಪತಿ ಆಯ್ಕೆ

ಹುಬ್ಬಳ್ಳಿ: ವಿದ್ಯಾರ್ಥಿಗಳಿಗೆ ಶಿಸ್ತು, ನಾಯಕತ್ವದ ಗುಣಗಳನ್ನು ಬೆಳೆಸುತ್ತ, ಸಾಮಾಜಿಕ ಕಳಕಳಿಯ ಮಾಹಿತಿ ನೀಡುತ್ತಾ ಬಂದಿರುವ ಡಾ.ಎಂ.ಬಿ.ದಳಪತಿ ಅವರಿಗೆ ಪ್ರಶಸ್ತಿಯೊಂದು ಅರಸಿಕೊಂಡು ಬಂದಿದೆ.
ಕರ್ನಾಟಕ ವಿಶ್ವವಿದ್ಯಾಲಯದ ಎನ್.ಎಸ್.ಎಸ್, ಕಾರ್ಯಕ್ರಮ ಸಂಯೋಜನಾಧಿಕಾರಿಯಾಗಿ ಕಾರ್ಯ
ನಿರ್ವಹಿಸುತ್ತಿರುವ ಅವರಿಗೆ ರಾಜ್ಯ ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆಯು ನೀಡುವ 2019-20ನೇ ಸಾಲಿನ 'ಅತ್ಯುತ್ತಮ ಎನ್.ಎಸ್.ಎಸ್, ಕಾರ್ಯಕ್ರಮ ಸಂಯೋಜನಾಧಿಕಾರಿ ರಾಜ್ಯ ಪ್ರಶಸ್ತಿ' ಲಭಿಸಿದೆ.
ವಿ.ವಿಯ ಎನ್‌ಎಸ್‌ಎಸ್ ಘಟಕದಲ್ಲಿ ದಳಪತಿ ಅವರು 15ನೇ ಎನ್.ಎಸ್.ಎಸ್ ಕಾರ್ಯಕ್ರಮ ಸಂಯೋಜನಾಧಿಕಾರಿಯಾಗಿ 2017 ರಿಂದ ಕಾರ್ಯನಿರ್ವಹಿಸುತ್ತಿದ್ದಾರೆ. 2007-08ರಲ್ಲಿ 'ಅತ್ಯುತ್ತಮ ಎನ್‌ಎಸ್‌ಎಸ್ ಕಾರ್ಯಕ್ರಮಾಧಿಕಾರಿ' ರಾಜ್ಯ ಪ್ರಶಸ್ತಿಗೂ ಭಾಜನರಾಗಿದ್ದರು.
ವಿ.ವಿ ವ್ಯಾಪ್ತಿಯ ಧಾರವಾಡ, ಗದಗ, ಹಾವೇರಿ ಹಾಗೂ ಉತ್ತರಕನ್ನಡ ಜಿಲ್ಲೆಗಳ 187 ಕಾಲೇಜುಗಳಲ್ಲಿ 209 ಎನ್.ಎಸ್.ಎಸ್ ಘಟಕಗಳಿವೆ. 209 ಎನ್.ಎಸ್.ಎಸ್ ಕಾರ್ಯಕ್ರಮ ಅಧಿಕಾರಿಗಳು ಹಾಗೂ 21,000 ವಿದ್ಯಾರ್ಥಿಗಳು ಸ್ವಯಂಸೇವಕರು ಕಾರ್ಯನಿರ್ವಹಿಸುತ್ತಿದ್ದಾರೆ.
'ನಾವು 445 ರಕ್ತದಾನ ಶಿಬಿರಗಳನ್ನು ಸಂಘಟಿಸಿದ್ದೇವೆ. 848 ಆರೋಗ್ಯ ತಪಾಸಣೆ ಶಿಬಿರ ಹಾಗೂ ಅರಿವು ಕಾರ್ಯಕ್ರಮಗಳನ್ನು ಆಯೋಜಿಸಿ 97,168 ಜನರಿಗೆ ಉಚಿತವಾಗಿ ವೈದ್ಯಕೀಯ ತಪಾಸಣೆ ನಡೆಸಲಾಗಿದೆ. ದುಶ್ಚಟಗಳನ್ನು ನಿಯಂತ್ರಿಸಲು ಯುವಕರಿಗಾಗಿ 6014 ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಿ ಯಶಸ್ವಿಯಾಗಿದ್ದೇವೆ' ಎನ್ನುತ್ತಾರೆ ಡಾ.ಎಂ.ಬಿ.ದಳಪತಿ.
2017-18ನೇ ಸಾಲಿನಲ್ಲಿ ದತ್ತು ಗ್ರಾಮಗಳಲ್ಲಿ ವಾರ್ಷಿಕ ವಿಶೇಷ ಶಿಬಿರಗಳನ್ನು ಸಂಘಟಿಸಲಾಗಿದೆ. ಅಲ್ಲಿ 3,558 ಶೌಚಾಲಯಗಳನ್ನು ಸ್ವಯಂ ಸೇವಕರೇ ಕಟ್ಟಿದ್ದಾರೆ. ಬಯಲು ಶೌಚಮುಕ್ತ ಗ್ರಾಮಗಳನ್ನಾಗಿ ಮಾಡಲು ಸ್ವಯಂ ಸೇವಕರು ಮನೆ ಮನೆಗೆ ತೆರಳಿ ಅರಿವು ಮೂಡಿಸಿದ್ದಾರೆ. 23,000 ಕುಟುಂಬಗಳನ್ನು ಸಮೀಕ್ಷೆ ಮಾಡಿ, ಸ್ವಚ್ಛತೆಯ ಅರಿವು ಮೂಡಿಸಿದ್ದಾರೆ. ಇಲ್ಲಿಯವರೆಗೆ 4635 ಶೌಚಾಲಯಗಳನ್ನು ನಿರ್ಮಿಸುವಲ್ಲಿ ಸ್ವಯಂ ಸೇವಕರಿಗೆ ಮಾರ್ಗದರ್ಶನ ನೀಡಿದ್ದಾರೆ.
ಕರ್ನಾಟಕ ವಿಶ್ವವಿದ್ಯಾಲಯಕ್ಕೆ ರಾಜ್ಯ ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆಯು ನೀಡುವ 2019-20ನೇ ಸಾಲಿನ ಅತ್ಯುತ್ತಮ 'ಎನ್.ಎಸ್.ಎಸ್ ವಿಶ್ವವಿದ್ಯಾಲಯ' ಪ್ರಶಸ್ತಿಯೂ ಸಂದಿದೆ.
ವಿಶ್ವವಿದ್ಯಾಲಯವು ನಾಲ್ಕು ವರ್ಷಗಳಿಂದ ರಾಷ್ಟ್ರೀಯ ಸೇವಾ ಯೋಜನೆಯ ಮೂಲಕ ಸಂಘಟಿಸಿದ ರಚನಾತ್ಮಕ ಹಾಗೂ ಸಮಾಜ ಸೇವೆಯ ಚಟುವಟಿಕೆಗಳನ್ನು ಗುರುತಿಸಿ ಈ ಪ್ರಶಸ್ತಿಯನ್ನು ನೀಡಲಾಗಿದೆ.
2017ರಿಂದ 2020ರವರೆಗೆ ರಾಷ್ಟ್ರೀಯ ಸೇವಾ ಯೋಜನೆಯ ಮೂಲಕ ಪ್ರತಿ ವರ್ಷ 209 ಗ್ರಾಮಗಳನ್ನು ದತ್ತು ಪಡೆದು ವಾರ್ಷಿಕ ವಿಶೇಷ ಶಿಬಿರಗಳನ್ನು ಆಯೋಜಿಸಿದೆ. ಪರಿಸರ ಸಂರಕ್ಷಣೆಗಾಗಿ ವಿಶೇಷ ಕಾರ್ಯಕ್ರಮಗಳನ್ನು ನಡೆಸಿದೆ. 61,580 ಸಸಿಗಳನ್ನು ಸ್ವಯಂ ಸೇವಕರು ನೆಟ್ಟು ಪೋಷಿಸಿದ್ದಾರೆ. ಪರಿಸರದ ಉಳಿವಿವಾಗಿ 2,650 ಜಾಗೃತಿ ಕಾರ್ಯಕ್ರಮಗಳನ್ನು ನಡೆಸಲಾಗಿದೆ.
ಮೂರು ವರ್ಷಗಳ ಸಾಧನೆ ಪರಿಗಣಿಸಿ ವಿಶ್ವವಿದ್ಯಾಲಯಕ್ಕೆ ರಾಜ್ಯ ಪ್ರಶಸ್ತಿ ಲಭಿಸಿದೆ. ರಾಷ್ಟ್ರ ಮಟ್ಟದ ಪ್ರಶಸ್ತಿ ಬರುವ ನಿರೀಕ್ಷೆಯೂ ಇದೆ.
-ಪ್ರೊ.ಕೆ.ಬಿ.ಗುಡಸಿ, ಕುಲಪತಿ, ಕರ್ನಾಟಕ ವಿಶ್ವವಿದ್ಯಾಲಯ