ಗೃಹ ಇಲಾಖೆ ಏನು ಮಾಡುತ್ತಿತ್ತು? ಪೇ ಸಿಎಂ ವಿಚಾರಕ್ಕೆ ಅರುಣ್ ಸಿಂಗ್ ಫುಲ್ ಗರಂ

ಬೆಂಗಳೂರು: ಕಾಂಗ್ರೆಸ್ ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಭ್ರಷ್ಟಾಚಾರದ ಆರೋಪ ಹೊರಿಸಿ, ಇತ್ತೀಚೆಗೆ 'ಪೇ ಸಿಎಂ' ಎಂಬ ಅಭಿಯಾನ ಮಾಡಿತ್ತು. ಸಿಎಂ ಬಸವರಾಜ ಬೊಮ್ಮಾಯಿ ಅವರ ಫೋಟೋ ಹಾಗೂ ಕ್ಯೂಆರ್ ಕೋಡ್ ಪ್ರಕಟಿಸಿ ನಗರದ ವಿವಿಧ ಭಾಗಗಳಲ್ಲಿ ಪೋಸ್ಟರ್ ಅಂಟಿಸಿತ್ತು.
ಕಾಂಗ್ರೆಸ್ ಮಾಡಿದ ಪೇ ಸಿಎಂ ಅಭಿಯಾನ ರಾಜ್ಯದಲ್ಲಿ ಸಂಚಲನವನ್ನೇ ಎಬ್ಬಿಸಿತ್ತು. ಬೆಂಗಳೂರಿನಲ್ಲಿ ಆರಂಭವಾದ ಕ್ಯಾಂಪೇನ್, ರಾಜ್ಯದ ವಿವಿಧ ಕಡೆಗಳಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪೇ ಸಿಎಂ ಅಭಿಯಾನ ಮಾಡಿ, ಬಿಜೆಪಿ ರ್ಕಾರವನ್ನು ಟೀಕಿಸಿದ್ದರು.
ಕಳೆದ ತಗಳು ಮುಕ್ತಾಯವಾದ ಅಧಿವೇಶನದಲ್ಲೂ ಪೇ ಸಿಎಂ ವಿಚಾರವಾಗಿ ಆರೋಪ, ಪ್ರತ್ಯಾರೋಪಗಳು ನಡೆದಿದ್ದವು. ಕಾಂಗ್ರೆಸ್ನ ಈ ಅಭಿಯಾನ ಬಿಜೆಪಿ ಸರ್ಕಾರಕ್ಕೆ ಹಾಗೂ ಸಿಎಂ ಬೊಮ್ಮಾಯಿ ಅವರಿಗೆ ತೀವ್ರ ಮುಜುಗರ ತಂದಿತ್ತು.
ಇದೀಗ ಕಾಂಗ್ರೆಸ್ನ ಪೇ ಸಿಎಂ ಅಭಿಯಾನ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಚರ್ಚೆಯಾಗಿದೆ. ಪೋಸ್ಟರ್ ಅಂಟಿಸುವವರೆಗೆ ಗೃಹ ಇಲಾಖೆ ಹಾಗೂ ಗುಪ್ತಚರ ಇಲಾಖೆ ಏನು ಮಾಡುತ್ತಿತ್ತು? ಇಂತಹ ಕೃತ್ಯಕ್ಕೆ ಅವಕಾಶ ಮಾಡಿಕೊಡಬಾರದಿತ್ತು. ಪೇ ಸಿಎಂ ಅಭಿಯಾನದಿಂದ ಸರ್ಕಾರಕ್ಕೆ ತೀವ್ರ ಮುಜುಗರವಾಗಿದೆ ಎಂದು ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಗರಂ ಆಗಿದ್ದಾರೆ.