ಪೋಕ್ಸೋ ಕೇಸ್: ಸಂತ್ರಸ್ತೆ ಮದುವೆಯಾಗಲು ಒಪ್ಪಿದ ಆರೋಪಿಗೆ ಸಿಕ್ತು ಜಾಮೀನು!

ಬೆಂಗಳೂರು, ಅ.29: ಪೋಕ್ಸೋ ಪ್ರಕರಣದಲ್ಲಿ ಅತ್ಯಾಚಾರ ಆರೋಪ ಎದುರಿಸುತ್ತಿದ್ದ ಆರೋಪಿ, ತಾನು ಅಪ್ರಾಪ್ತೆ ವಯಸ್ಕಳಾಗುತ್ತಿದ್ದಂತೆಯೇ ವಿವಾಹ ಮಾಡಿಕೊಳ್ಳುವುದಾಗಿ ಒಪ್ಪಿದ ಹಿನ್ನೆಲೆಯಲ್ಲಿ ಹೈಕೋರ್ಟ್ ಆತನಿಗೆ ಜಾಮೀನು ನೀಡಿದೆ.
ಇಂತಹ ಒಂದು ಅಪರೂಪದ ಪ್ರಕರಣಕ್ಕೆ ಹೈಕೋರ್ಟ್ ಸಾಕ್ಷಿಯಾಗಿದೆ.
ಆರೋಪಿಯ ಜೊತೆ ಸಂಬಂಧ ಹೊಂದಿರುವುದಾಗಿ ಸಂತ್ರಸ್ತೆಯು ಹೇಳಿಕೆಯಲ್ಲಿ ತಿಳಿಸಿದ್ದಾಳೆ. ಆಕೆ ಅಪ್ರಾಪ್ತೆಯಾಗಿದ್ದು, ಸ್ವಇಚ್ಛೆಯಿಂದ ದೈಹಿಕ ಸಂಬಂಧ ಬೆಳೆಸಿರುವುದಾಗಿ ತಿಳಿಸಿದ್ದಾಳೆ. ದೈಹಿಕ ಸಂಬಂಧಕ್ಕೆ ಸಂಬಂಧಿಸಿದಂತೆ ಆಕೆಯ ಹೇಳಿಕೆಯು ಅಪ್ರಸ್ತುತ. 17 ವರ್ಷದ ಆಕೆಗೆ ಯಾವುದು ಸರಿ ಮತ್ತು ತಪ್ಪು ಎಂಬುದನ್ನು ಅರ್ಥ ಮಾಡಿಕೊಳ್ಳುವ ಸಾಮರ್ಥ್ಯವಿದೆ. ಸಂತ್ರಸ್ತೆಯು ಪ್ರಾಪ್ತ ವಯಸ್ಸಿಗೆ ಬಂದ ತಕ್ಷಣ ಆಕೆಯನ್ನು ಮದುವೆಯಾಗುವುದಾಗಿ ಆರೋಪಿ ಹೇಳಿದ್ದಾನೆಂಬುದನ್ನು ನ್ಯಾಯಪೀಠವು ಆದೇಶದಲ್ಲಿ ದಾಖಲಿಸಿದೆ.
ದ 22 ವರ್ಷದ ಯುವಕ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ರಾಜೇಂದ್ರ ಬಾದಾಮಿಕರ್ ಅವರಿದ್ದ ನ್ಯಾಯಪೀಠ ಜಾಮೀನು ಮಂಜೂರು ಮಾಡಿದೆ.
ನ್ಯಾಯಾಲಯದ ಆದೇಶವೇನು?: ಅಲ್ಲದೆ, ಸಂತ್ರಸ್ತೆ ಪ್ರಾಪ್ತ ವಯಸ್ಸಿಗೆ ಬಂದ ತಕ್ಷಣ ಆರೋಪಿಯು ಆಕೆಯನ್ನು ವಿವಾಹವಾಗಬೇಕು. ವಿವಾಹ ನೋಂದಣಿ ಮಾಡಿಸಿ, ನೋಂದಣಿ ದಾಖಲೆಯನ್ನು ವಿಚಾರಣಾಧೀನ ನ್ಯಾಯಾಲಯಕ್ಕೆ ಸಲ್ಲಿಸಬೇಕು ಎಂಬ ಷರತ್ತನ್ನು ನ್ಯಾಯಾಲಯ ವಿಧಿಸಿದೆ.
ಪ್ರಾಸಿಕ್ಯೂಷನ್ ಪರ ವಕೀಲರು ವಾದ ಮಂಡಿಸಿ, ಆರೋಪಿಯು ಸಂತ್ರಸ್ತೆಯನ್ನು ವಿವಾಹವಾಗಬೇಕು ಎಂಬ ಷರತ್ತು ವಿಧಿಸಬೇಕು. ಇದು ಇಬ್ಬರು ವಿವಾಹ ಬಂಧನಕ್ಕೆ ಒಳಗಾಗುವುದನ್ನು ಕಡ್ಡಾಯಗೊಳಿಸಲಿದೆ ಎಂದು ನ್ಯಾಯಪೀಠ ವಿವರಿಸಿದರು.
ಪ್ರಕರಣದ ವಿವರ: ಸಂತ್ರಸ್ತೆಯ ಸಂಬಂಧಿಕರಾಗಿದ್ದ ಆರೋಪಿಯ ನಡುವೆ ಸ್ನೇಹ ಬೆಳೆದಿದ್ದು, ಪ್ರೇಮಾಂಕುರವಾಗಿತ್ತು. ಈ ನಡುವೆ ಆರೋಪಿಯ ಮನೆಯಲ್ಲಿ ಯಾರೂ ಇಲ್ಲದ ಸಂದರ್ಭದಲ್ಲಿ ಸಂತ್ರಸ್ತೆಯನ್ನು ಮನೆಗೆ ಕರೆದುಕೊಂಡು ಹೋಗಿದ್ದು ದೈಹಿಕ ಸಂಪರ್ಕ ಬೆಳೆಸಿದ್ದರು. ಪರಿಣಾಮ ಸಂತ್ರಸ್ತ ಅಪ್ರಾಪ್ತೆ ಗರ್ಭಿಣಿಯಾಗಿತ್ತು.
ಘಟನೆ ನಡೆದ ಕೆಲ ದಿನಗಳ ಬಳಿಕ ಬಾಲಕಿಗೆ ಹೊಟ್ಟೆ ನೋವು ಕಾಣಿಸಿಕೊಂಡು ಪರೀಕ್ಷೆಗೆ ಒಳಪಡಿಸಿದಾಗ ಗರ್ಭಿಣಿಯಾಗಿರುವ ಅಂಶ ಬೆಳಕಿಗೆ ಬಂದಿತ್ತು.
ತಕ್ಷಣ ಸಂತ್ರಸ್ತೆಯ ಪೊಷಕರು ರಾಮನಗರದ ಮಹಿಳಾ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದು. ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿತ್ತು. ಜಾಮೀನು ಕೋರಿ ಆರೋಪಿ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣಾ ನ್ಯಾಯಾಲಯ ತಿರಸ್ಕರಿಸಿತ್ತು. ಇದನ್ನು ಪ್ರಶ್ನಿಸಿ ಆರೋಪಿ ಹೈಕೋರ್ಟ್ ಮೆಟ್ಟಿಲೇರಿದ್ದರು