ಜೀವ ಉಳಿಸಲು ಕಠಿಣ ಕ್ರಮ ಅಗತ್ಯ, ಜೀವದ ಜತೆ ಜೀವನವೂ ಮುಖ್ಯ; ಸಿಎಂ ಸಭೆಯಲ್ಲಿ ಮಹತ್ವದ ನಿರ್ಧಾರ: ಆರ್. ಅಶೋಕ್

ಬೆಂಗಳೂರು: ನಾಳೆ ಸಿಎಂ ಬೊಮ್ಮಾಯಿ ನೇತೃತ್ವದಲ್ಲಿ ಮಹತ್ವದ ಕೋವಿಡ್ ಸಭೆ ನಡೆಯಲಿದ್ದು, ವೀಕೆಂಡ್ ಕರ್ಫ್ಯೂ, ನೈಟ್ ಕರ್ಫ್ಯೂ ಬಗ್ಗೆ ಚರ್ಚೆ ನಡೆಯಲಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಅಶೋಕ್, ಶಾಲಾ ಕಾಲೇಜುಗಳಲ್ಲಿ ಕೋವಿಡ್ ಕೇಸ್ ಹೆಚ್ಚುತ್ತಿದೆ.
ಕೇಂದ್ರದವರು ವಿದೇಶಿ ವಿಮಾನ ರದ್ದು ಮಾಡಿದ್ದಾರೆ. ಕೆಲವರು ವೀಕೆಂಡ್ ಕರ್ಫ್ಯೂ ಮಾಡಿ ಎಂದಿದ್ದಾರೆ. ಇನ್ನು ಕೆಲವರು ಬೇಡ ಎಂದಿದ್ದಾರೆ. ಯಾರು ಏನೇ ಹೇಳಿಕೆ ಕೊಟ್ಟರೂ ಅದು ಅವರ ವೈಯಕ್ತಿಕ ಅಭಿಪ್ರಾಯಗಳಷ್ಟೇ. ವಿಶ್ವ ಆರೋಗ್ಯ ಸಂಸ್ಥೆ ನೀಡಿರುವ ಸಲಹೆ, ಕೇಂದ್ರ ಸರ್ಕಾರದ ಮಾರ್ಗಸೂಚಿ ಹಾಗೂ ನಮ್ಮ ರಾಜ್ಯದ ಸ್ಥಿತಿಗತಿ ಪರಿಶೀಲಿಸಿ ಯಾವ ಕ್ರಮ ಕೈಗೊಂಡರೆ ಅನುಕೂಲವಾಗಲಿದೆ ಆ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು. ರಾಜ್ಯದಲ್ಲಿ ಕೋವಿಡ್ ಕೇಸ್ ಹೆಚ್ಚಾಗಲು ಕಾಂಗ್ರೆಸ್ ನಾಯಕರೇ ಕಾರಣ ಎಂದು ಆರೋಪಿಸಿರುವ ಸಚಿವರು, ಮೇಕೆದಾಟು ಪಾದಯಾತ್ರೆ ಮಾಡುವ ಮೂಲಕ ಕಾಂಗ್ರೆಸ್ ನಾಯಕರು ಕೊರೊನಾ ಹಂಚಿದ್ದಾರೆ. ಹಲವು ನಾಯಕರಿಗೂ ಸೋಂಕು ಬಂದಿದೆ. ಪಾದಯಾತ್ರೆಯಲ್ಲಿ ಪಾಲ್ಗೊಂಡ ಅನೇಕರು ಕೋವಿಡ್ ಟೆಸ್ಟ್ ಮಾಡಿಸಿಕೊಂಡಿಲ್ಲ. ಟೆಸ್ಟ್ ಮಾಡಿಸದಂತೆ ಕಾಂಗ್ರೆಸ್ ನವರು ಸೂಚಿಸಿದ್ದಾರೆ. ಕೊರೊನಾ ದೃಢವಾದರೆ ಕಾಂಗ್ರೆಸ್ ನವರಿಗೆ ಕೆಟ್ಟ ಹೆಸರು ಹಾಗಾಗಿ ಟೆಸ್ಟ್ ಗೆ ಹಿಂದೇಟು ಹಾಕುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.