₹ 25ರಂತೆ ಎಲ್‌ಪಿಜಿ ಸಿಲಿಂಡರ್ ಬೆಲೆ ಏರಿಕೆ

ನವದೆಹಲಿ: ಮನೆಗಳಲ್ಲಿ ಬಳಸುವ ಅಡುಗೆ ಅನಿಲ (ಎಲ್‌ಪಿಜಿ) ದರವನ್ನು 14.2 ಕೆ.ಜಿ.ಯ ಸಿಲಿಂಡರ್‌ಗೆ ₹ 25ರಂತೆ ಹೆಚ್ಚಿಸಲಾಗಿದೆ. ಹಿಂದಿನ ತಿಂಗಳಲ್ಲಿಯೂ ಎಲ್‌ಪಿಜಿ ಬೆಲೆ ಹೆಚ್ಚಳ ಆಗಿತ್ತು.
ಈಗಿನ ಹೆಚ್ಚಳದ ನಂತರ ಬೆಂಗಳೂರಿನಲ್ಲಿ 14.2 ಕೆ.ಜಿ. ತೂಕದ ಎಲ್‌ಪಿಜಿ ಸಿಲಿಂಡರ್ ಬೆಲೆ ₹ 862 ಆಗಿದೆ.
ಜುಲೈ 1ರಂದು ಎಲ್‌ಪಿಜಿ ಬೆಲೆಯನ್ನು ₹ 25ರಷ್ಟು ಹೆಚ್ಚಿಸಲಾಗಿತ್ತು. ವಾಣಿಜ್ಯ ಬಳಕೆಯ (19 ಕೆ.ಜಿ. ತೂಕದ) ಎಲ್‌ಪಿಜಿ ಸಿಲಿಂಡರ್ ಬೆಲೆಯನ್ನು ಆಗಸ್ಟ್ 1ರಂದು ಹೆಚ್ಚಿಸಲಾಗಿತ್ತು. ಆದರೆ ಆಗ, ಮನೆಬಳಕೆಯ ಎಲ್‌ಪಿಜಿ ಸಿಲಿಂಡರ್ ಬೆಲೆ ಜಾಸ್ತಿ ಮಾಡಿರಲಿಲ್ಲ.
ಈಗ ಮಾಡಿರುವ ಬೆಲೆ ಹೆಚ್ಚಳವನ್ನೂ ಪರಿಗಣಿಸಿದರೆ, ಜನವರಿ 1ರ ನಂತರ ಆಗಿರುವ ಒಟ್ಟು ಬೆಲೆ ಹೆಚ್ಚಳವು ₹ 165 ಆಗಿದೆ. ಕಳೆದ ಏಳು ವರ್ಷಗಳ ಅವಧಿಯಲ್ಲಿ ಎಲ್‌ಪಿಜಿ ಸಿಲಿಂಡರ್ ಬೆಲೆಯು ಎರಡು ಪಟ್ಟಿಗಿಂತ ಹೆಚ್ಚಾಗಿದೆ. 2014ರ ಮಾರ್ಚ್ 1ರಂದು 14.2 ಕೆ.ಜಿ. ಸಿಲಿಂಡರ್ ಬೆಲೆಯು ₹ 410.5 ಆಗಿತ್ತು.