ಚೋಲಾದೋರಾ ಧರಿಸಿ ಕೇದಾರನಾಥನ ದರ್ಶನ ಪಡೆದ ಪ್ರಧಾನಿ ಮೋದಿ

ರುದ್ರಪ್ರಯಾಗ್, ಅ.21- ಪ್ರಧಾನಮಂತ್ರಿ ನರೇಂದ್ರ ಮೋದಿ ಇಂದು ಮುಂಜಾನೆ ಉತ್ತರಾಖಂಡ್‍ನ ಕೇದಾರನಾಥ ದೇವಸ್ಥಾನದಲ್ಲಿ ಸಾಂಪ್ರದಾಯಿಕ ಉಡುಗೆ ಚೋಲಾದೋರಾ ಧರಿಸಿ ವಿಶೇಷ ಪೂಜೆ ಸಲ್ಲಿಸಿದರು.
ಎರಡು ದಿನಗಳ ಭೇಟಿಗಾಗಿ ಉತ್ತರಾಖಂಡ್‍ಗೆ ಆಗಮಿಸಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಗೌರಿಕುಂಡ ಕೇದಾರನಾಥ ನಡುವಿನ 9.7ಕಿ.ಮೀ. ಉದ್ದದ ರೋಪ್‍ವೇ ಯೋಜನೆ, ರಾಷ್ಟ್ರೀಯ ಹೆದ್ದಾರಿ-7ರ ವಿಸ್ತರಣೆ, ಋಷಿಕೇಷ್, ಜೋಷಿಮಠ್, ಬದ್ರಿನಾಥ್, ಡೆಹ್ರಾಡೂನ್, ಚಂಡೀಗಢ ನಡುವಿನ ರಾಷ್ಟ್ರೀಯ ಹೆದ್ದಾರಿ-107ರಿಂದ ರುದ್ರಪ್ರಯಾಗ್ ಮತ್ತು ಗೌರಿಕುಂಡ ನಡುವೆ ರಸ್ತೆ ಸುಧಾರಣೆಗೆ ಕಾಮಗಾರಿ ಕೈಗೊಳ್ಳಲಾಗುತ್ತಿದೆ.
ಪ್ರಧಾನಿಯವರ ಭೇಟಿ ಹಿನ್ನೆಲೆಯಲ್ಲಿ ಕೇದಾರನಾಥ ದೇವಸ್ಥಾನ ಪುಷ್ಪಾಲಂಕಾರಗಳಿಂದ ಕಂಗೊಳಿಸುತ್ತಿತ್ತು.
ಇತ್ತೀಚೆಗೆ ಪ್ರಧಾನಿಯವರು ಹಿಮಾಚಲ ಪ್ರದೇಶ ಪ್ರವಾಸದಲ್ಲಿದ್ದಾಗ ಚಂಬಾ ಜಿಲ್ಲೆಯ ಮಹಿಳೆಯೊಬ್ಬರು ಕಸೂತಿ ಮಾಡಿದ ಚೋಲಾದೋರಾ ಉಡುಪನ್ನು ಉಡುಗೊರೆ ನೀಡಿದ್ದರು.
ಅಪ್ಪಟ ಶ್ವೇತಬಣ್ಣದ ಈ ಉಡುಗೆ ವಿವಿಧ ಕಸೂತಿ ಕಲೆಗಳಿಂದ ಕೂಡಿತ್ತು. ಇದನ್ನು ಮೊದಲ ಬಾರಿ ಧರಿಸಿದ ಪ್ರಧಾನಿಯವರು ಕೇದಾರನಾಥದಲ್ಲಿ ಪೂಜೆ ಸಲ್ಲಿಸುವ ಮೂಲಕ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಉತ್ತರಾಖಂಡ್ ಮುಖ್ಯಮಂತ್ರಿ ಪುಷ್ಕರ್‍ಸಿಂಗ್ ದಾಮಿ ಈ ಸಂದರ್ಭದಲ್ಲಿ ಹಾಜರಿದ್ದರು. ಪ್ರಧಾನಮಂತ್ರಿಯವರು ಕೇದಾರನಾಥದ ಆದಿಗುರು ಶಂಕರಾಚಾರ್ಯರ ಪುಣ್ಯಭೂಮಿಗೂ ಭೇಟಿ ನೀಡಿ ನಮನ ಸಲ್ಲಿಸಿದರು.ಬಳಿಕ 3400 ಕೋಟಿ ರೂ.ಗೂ ಹೆಚ್ಚು ಮೊತ್ತದ ವಿವಿಧ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು. ಬದ್ರಿನಾಥ, ಕೇದಾರನಾಥ ಹಾಗೂ ವಿವಿಧ ಕಡೆ ಪ್ರಧಾನಿಯವರ ಪ್ರವಾಸದ ಹಿನ್ನೆಲೆಯಲ್ಲಿ ಬಿಗಿ ಭದ್ರತೆ ಆಯೋಜಿಸಲಾಗಿತ್ತು.