ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ವೇಳೆ ಯಡಿಯೂರಪ್ಪ ಜೊತೆ ಪ್ರಧಾನಿ ಮೋದಿ ಪ್ರತ್ಯೇಕ ಸಭೆ, ಕುತೂಹಲ ಮೂಡಿಸಿದ ಮಾತುಕತೆ
ರಾಜ್ಯದ ಮುಖ್ಯಮಂತ್ರಿ ಸ್ಥಾನದಲ್ಲಿದ್ದ ಯಡಿಯೂರಪ್ಪ ಅವರನ್ನು ಪಕ್ಷದ ಹೈಕಮಾಂಡ್ ಏಕಾಏಕಿ ಕೆಳಗಿಳಿಸಿತು. ಕರ್ನಾಟಕದ ರಾಜಕಾರಣದಲ್ಲಿ ನಿರ್ಣಾಯಕ ಪಾತ್ರ ನಿರ್ವಹಿಸುವ ಲಿಂಗಾಯತ ಸಮುದಾಯಕ್ಕೆ ಸೇರಿದ ಯಡಿಯೂರಪ್ಪ ಅವರಿಗೆ ಜಾತಿಯ ಮಿತಿಯಲ್ಲದ ಬೆಂಬಲ ಇದೆ. ಕರ್ನಾಟಕದ ಬಹುತೇಕ ಎಲ್ಲ ಜಿಲ್ಲೆಗಳಲ್ಲಿ ಅವರಿಗೆ ಅಭಿಮಾನಿಗಳಿದ್ದಾರೆ. ಆದರೆ ಸ್ಥಾನಚ್ಯುತಿಯ ನಂತರ ಯಡಿಯೂರಪ್ಪ ಸಾರ್ವಜನಿಕ ವೇದಿಕೆಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರಲಿಲ್ಲ.
ಇದೀಗ ಚುನಾವಣೆ ಹತ್ತಿರಕ್ಕೆ ಬರುತ್ತಿರುವ ಹಿನ್ನೆಲೆಯಲ್ಲಿ ಯಡಿಯೂರಪ್ಪ ಅವರಿಗೆ ಬಿಜೆಪಿ ಮತ್ತೆ ಮುಖ್ಯ ಪಾತ್ರ ನೀಡಿತ್ತು. ಪಕ್ಷದ ಪ್ರಮುಖ ನಿರ್ಣಯಗಳನ್ನು ತೆಗೆದುಕೊಳ್ಳುವ ಸಂಸದೀಯ ಮಂಡಳಿಗೆ ಯಡಿಯೂರಪ್ಪ ಅವರನ್ನು ನೇಮಿಸಲಾಯಿತು. ಸಂಸದೀಯ ಸಮಿತಿಗೆ ಸೇರ್ಪಡೆಗೊಂಡ ಬಳಿಕ ಯಡಿಯೂರಪ್ಪ ಅವರು ರಾಜ್ಯಾದ್ಯಂತ ಸಕ್ರಿಯವಾಗಿ ಕೆಲಸ ಮಾಡುತ್ತಿದ್ದಾರೆ. 2023 ರ ವಿಧಾನಸಭಾ ಚುನಾವಣೆ ಮತ್ತು 2024 ರ ಲೋಕಸಭಾ ಚುನಾವಣೆಗಳೆರಡಕ್ಕೂ ಬಿಜೆಪಿ ಮಿಷನ್ ಸೌತ್ ಅನ್ನು ಪ್ರಾರಂಭಿಸಿದೆ, ದಕ್ಷಿಣ ರಾಜ್ಯಗಳಲ್ಲಿ ಗೆಲುವಿನ ತಂತ್ರ ರೂಪಿಸುವ ಎಲ್ಲಾ ಪ್ರಯತ್ನಗಳ ನಡುವೆ ಬಿಜೆಪಿಯ ಪ್ರಧಾನ ಗಮನ ಕರ್ನಾಟಕದಲ್ಲಿ ಅಧಿಕಾರವನ್ನು ಉಳಿಸಿಕೊಳ್ಳುವತ್ತ ಇದೆ.
ಲೋಕಸಭೆ ಚುನಾವಣೆಯ ದೃಷ್ಟಿಯಿಂದಲೂ ಈ ತಂತ್ರವು ನಿರ್ಣಾಯಕವಾಗಿರಲಿದೆ. "ಕರ್ನಾಟಕದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಯಡಿಯೂರಪ್ಪ ಅವರ ಪಾತ್ರವು ಹೆಚ್ಚಿನ ಜವಾಬ್ದಾರಿಗಳೊಂದಿಗೆ ಇರಲಿದೆ ಎಂದು ಪಕ್ಷದ ಹಿರಿಯ ನಾಯಕರೊಬ್ಬರು ತಿಳಿಸಿದ್ದಾರೆ.