ಆಸ್ಟ್ರೇಲಿಯಾದಲ್ಲಿ ನಡೆದ ಟಿ20 ವಿಶ್ವಕಪ್ ಟೂರ್ನಿಯ ಸೆಮಿ ಫೈನಲ್ ಪಂದ್ಯದಲ್ಲಿ ಹೀನಾಯವಾಗಿ ಸೋತು ಟೂರ್ನಿಯಿಂದ ಹೊರಬಿದ್ದಿರುವ ಟೀಂ ಇಂಡಿಯಾದಲ್ಲಿ ಮೇಜರ್ ಸರ್ಜರಿ ಮಾಡುವ ಕುರಿತು ಬಿಸಿಸಿಐ ಮೂಲಗಳು ಮಾಹಿತಿ ನೀಡಿದ್ದು, ತಂಡದ ಹಿರಿಯ ಆಟಗಾರರಾದ ಕೊಹ್ಲಿ, ರೋಹಿತ್, ದಿನೇಶ್ ಕಾರ್ತಿಕ್ ಸೇರಿದಂತೆ ಹಲವು 'ಹಿರಿಯ ಆಟಗಾರರು ಚುಟುಕು ಕ್ರಿಕೆಟ್ ಗೆ ವಿದಾಯ ಹೇಳುವ ಸಾಧ್ಯತೆ ಇ ನವದೆಹಲಿ: ಆಸ್ಟ್ರೇಲಿಯಾದಲ್ಲಿ ನಡೆದ ಟಿ20 ವಿಶ್ವಕಪ್ ಟೂರ್ನಿಯ ಸೆಮಿ ಫೈನಲ್ ಪಂದ್ಯದಲ್ಲಿ ಹೀನಾಯವಾಗಿ ಸೋತು ಟೂರ್ನಿಯಿಂದ ಹೊರಬಿದ್ದಿರುವ ಟೀಂ ಇಂಡಿಯಾದಲ್ಲಿ ಮೇಜರ್ ಸರ್ಜರಿ ಮಾಡುವ ಕುರಿತು ಬಿಸಿಸಿಐ ಮೂಲಗಳು ಮಾಹಿತಿ ನೀಡಿದ್ದು, ತಂಡದ ಹಿರಿಯ ಆಟಗಾರರಾದ ಕೊಹ್ಲಿ, ರೋಹಿತ್, ದಿನೇಶ್ ಕಾರ್ತಿಕ್ ಸೇರಿದಂತೆ ಹಲವು 'ಹಿರಿಯ ಆಟಗಾರರು ಚುಟುಕು ಕ್ರಿಕೆಟ್ ಗೆ ವಿದಾಯ ಹೇಳುವ ಸಾಧ್ಯತೆ ಇದೆ ಎನ್ನಲಾಗಿದೆ.
ಟಿ20 ವಿಶ್ವಕಪ್ ಸೋಲಿನ ಬಳಿಕ ಟೀಂ ಇಂಡಿಯಾದ ಹಿರಿಯ ಆಟಗಾರರು ಚುಟುಕು ಕ್ರಿಕೆಟ್ ಮಾದರಿಯಲ್ಲಿ ಸುರಕ್ಷಿತವಾಗಿಲ್ಲ ಎಂದು ಹೇಳಲಾಗುತ್ತಿದ್ದು, ಪ್ರಮುಖವಾಗಿ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ದಿನೇಶ್ ಕಾರ್ತಿಕ್, ಆರ್ ಅಶ್ವಿನ್, ಮಹಮದ್ ಶಮಿ, ಭುವನೇಶರ್ ಕುಮಾರ್, ಉಮೇಶ್ ಯಾದವ್ ಸೇರಿದಂತೆ ಹಲವು ಹಿರಿಯ ಆಟಗಾರರ ಮೇಲೆ ತೂಗುಗತ್ತಿ ನೇತಾಡುತ್ತಿದೆ ಎನ್ನಲಾಗಿದೆ. ಹೀಗಾಗಿ 2024 ರಲ್ಲಿ ಯುನೈಟೆಡ್ ಸ್ಟೇಟ್ಸ್ ಮತ್ತು ವೆಸ್ಟ್ ಇಂಡೀಸ್ನಲ್ಲಿ ಮುಂದಿನ ಬಾರಿ T20 ವಿಶ್ವಕಪ್ ಬಂದಾಗ ಭಾರತ ತಂಡವು ತುಂಬಾ ವಿಭಿನ್ನವಾಗಿ ಕಾಣಿಸಬಹುದು.ವಿಶ್ವದ ಎರಡನೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶದಲ್ಲಿ ಕ್ರಿಕೆಟ್ ಅತ್ಯಂತ ಜನಪ್ರಿಯ ಕ್ರೀಡೆಯಾಗಿದೆ, ಆದರೆ 2013 ರ ಚಾಂಪಿಯನ್ಸ್ ಟ್ರೋಫಿಯ ಬಳಿಕ ಭಾರತ ತಂಡವು ಈ ವರೆಗೂ ಯಾವುದೇ ಐಸಿಸಿ ಪ್ರಶಸ್ತಿಯನ್ನು ಗೆದ್ದಿಲ್ಲ. ಇಂಗ್ಲೆಂಡ್ ವಿರುದ್ಧದ ಸೆಮಿ ಫೈನಲ್ ಸೋಲಿನ ಮೂಲಕ ಭಾರತ ತಂಡದ ನೋವಿನ ಕಾಯುವಿಕೆ ಮುಂದುವರೆದಿದ್ದು, ಇದೇ ಕಾರಣಕ್ಕೆ ತಂಡದಲ್ಲಿ ಮೇಜರ್ ಸರ್ಜರಿ ಮಾಡಲು ಬಿಸಿಸಿಐ ಚಿಂತಿಸುತ್ತಿದೆ.
ಮುಂದಿನ ಒಂದು ವರ್ಷದ ಅವಧಿಯೊಳಗೆ ತಂಡದಲ್ಲಿನ ಪ್ರಮುಖ ಹಿರಿಯ ಆಟಗಾರರನ್ನು ಟಿ20 ಕ್ರಿಕೆಟ್ ನಿಂದ ದೂರ ಮಾಡಿ ಅವರ ಸ್ಥಾನಕ್ಕೆ ಯುವ ಆಟಗಾರರಿಗೆ ಸ್ಥಾನ ಕಲ್ಪಿಸುವುದು ಬಿಸಿಸಿಐ ಉದ್ದೇಶವಾಗಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಭಾರತದ T20 ತಂಡವು ಪ್ರಮುಖ ಪರಿವರ್ತನೆಗೆ ಒಳಗಾಗಲಿದೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ. ಇದಕ್ಕೆ ಇಂಬು ನೀಡುವಂತೆ ಭಾರತ ಕ್ರಿಕೆಟ್ ನ ದಂತಕಥೆ ಸುನಿಲ್ ಗವಾಸ್ಕರ್ ಕೂಡ ಇದೇ ವಿಚಾರವಾಗಿ ಮಾತನಾಡಿದ್ದು, ಕೆಲವು ಹಿರಿಯ ಆಟಗಾರರ ನಿವೃತ್ತಿ ಸರಣಿ ಇರಲಿದೆ. ಆಟಗಾರರು ಅದರ ಬಗ್ಗೆ ಸಾಕಷ್ಟು ಯೋಚಿಸುತ್ತಿದ್ದಾರೆ ಎಂದು ಹೇಳಿದ್ದರು.ಅಲ್ಲದೆ "ಮುಂದಿನ ವರ್ಷ ಹೆಚ್ಚಿನ ಹಿರಿಯ ಆಟಗಾರರು ಟಿ20 ಆಡುವುದನ್ನು ನೀವು ನೋಡುವುದಿಲ್ಲ" ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮೂಲವನ್ನು ಉಲ್ಲೇಖಿಸಿ ಪ್ರೆಸ್ ಟ್ರಸ್ಟ್ ಆಫ್ ಇಂಡಿಯಾ (PTI) ಸುದ್ದಿಸಂಸ್ಥೆ ವರದಿ ಮಾಡಿದ್ದು, ಇದು ಇದೀಗ ಕ್ರಿಕೆಟ್ ಜಗತ್ತಿನಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ. ಆದರೆ ಇದಕ್ಕೆ ತದ್ವಿರುದ್ಧ ಎಂಬಂತೆ ಟೀಂ ಇಂಡಿಯಾ ಪ್ರಧಾನ ಕೋಚ್ ರಾಹುಲ್ ದ್ರಾವಿಡ್ ಹೇಳಿಕೆ ನೀಡಿದ್ದು, ಈ ವಿಷಯದ ಬಗ್ಗೆ ಮಾತನಾಡಲು ಅಥವಾ ಇದೀಗ ಈ ವಿಷಯದ ಬಗ್ಗೆ ಯೋಚಿಸಲು ಇದು ಸರಿಯಾದ ಸಮಯವಲ್ಲ ಎಂದು ಹೇಳುವ ಮೂಲಕ ಹಿರಿಯರ ನಿವೃತ್ತಿ ವಿಚಾರವನ್ನು ತಳ್ಳಿ ಹಾಕಿದ್ದಾರೆ.