ಮೊದಲ ಆಹ್ವಾನ ದೇವೇಗೌಡರಿಗೆ ನೀಡಲಾಗಿದೆ: ಬಿಜೆಪಿ

ಮೊದಲ ಆಹ್ವಾನ ದೇವೇಗೌಡರಿಗೆ ನೀಡಲಾಗಿದೆ: ಬಿಜೆಪಿ

ಬೆಂಗಳೂರು: ಕೆಂಪೇಗೌಡರ ಪ್ರತಿಮೆ ಲೋಕಾರ್ಪಣೆ ಕಾರ್ಯಕ್ರಮಕ್ಕೆ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರನ್ನು ಆಹ್ವಾನಿಸಿಲ್ಲ ಎಂದು ಜೆಡಿಎಸ್‌ ಸಾಮಾಜಿಕ ಜಾಲತಾಣಗಳಲ್ಲಿ ಅಸಮಾಧಾನ ಹೊರ ಹಾಕಿದ ಬೆನ್ನಲ್ಲೇ ಈ ಬಗ್ಗೆ ಟ್ವೀಟ್‌ ಮಾಡಿರುವ ಬಿಜೆಪಿ, ಮೊದಲ ಆಹ್ವಾನ ಪತ್ರಿಕೆಯನ್ನು ಎಚ್‌.ಡಿ.ದೇವೇಗೌಡರಿಗೆ ನೀಡಿದ್ದೇವೆ ಎಂದು ಸ್ಪಷ್ಟನೆ ನೀಡಿದೆ.

ಪ್ರಧಾನಿಯಾಗಿದ್ದ ಏಕೈಕ ಕನ್ನಡಿಗ ಎಚ್‌.ಡಿ.ದೇವೇಗೌಡರಿಗೆ ಮೊದಲ ಆಹ್ವಾನ ಪತ್ರ ಹೋಗಿದ್ದು, ಮಾತ್ರವಲ್ಲ ಖುದ್ದು ಸಿಎಂ ಬಸವರಾಜ ಬೊಮ್ಮಾಯಿ ದೂರವಾಣಿ ಕರೆ ಮಾಡಿ ಆಹ್ವಾನಿಸಿದ್ದಾರೆ.

ಈ ವಿಷಯದಲ್ಲೂ ಸುಳ್ಳಾಡುವ ಜೆಡಿಎಸ್‌ ತನ್ನ ಸಮಯಸಾಧಕ ಬುದ್ಧಿ ಪ್ರದರ್ಶಿಸಿದೆ ಎಂದು ಟ್ವೀಟ್‌ ಮೂಲಕ ಬಿಜೆಪಿ ತಿರುಗೇಟು ನೀಡಿದೆ.

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ನ.11 ರಂದು ಬೆಳಗ್ಗೆ 11ಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ನಾಡಪ್ರಭು ಕೆಂಪೇಗೌಡರ 108 ಅಡಿ ಎತ್ತರದ ಕಂಚಿನ ಭವ್ಯ ಪ್ರತಿಮೆ ಅನಾವರಣಗೊಳಿಸಲಿದ್ದಾರೆ. ಇದು ಆಧುನಿಕ ಕರ್ನಾಟಕದ ಇತಿಹಾಸದಲ್ಲಿ ಒಂದು ಸುವರ್ಣ ಘಳಿಗೆ, ಕೆಂಪೇಗೌಡರು ಐದು ನೂರು ವರ್ಷಗಳ ಹಿಂದೆ ನಿರ್ಮಿಸಿದ ಬೆಂಗಳೂರು ನಗರ ಈಗ ಎಲ್ಲಾ ಕ್ಷೇತ್ರಗಳ ಸೃಜನಶೀಲ ಮನಸ್ಸುಗಳಿಗೆ, ಸಾಧಕರಿಗೆ ಮತ್ತು ಕನಸುಗಾರರಿಗೆ ಅವಕಾಶ ಕಲ್ಪಿಸುವ ಒಂದು ಅನನ್ಯ ತಾಣವಾಗಿದೆ.

ಇಂತಹ ದೂರದೃಷ್ಟಿಯ ಮಹಿಮಾನ್ವಿತರಿಗೆ ಸೂಕ್ತ ಮತ್ತು ಭವ್ಯ ಸ್ಮಾರಕ ಎನ್ನುವುದು ಇದುವರೆಗೆ ಇರಲಿಲ್ಲ. ಇದು ನಮ್ಮ ಸರ್ಕಾರದ ಅವಧಿಯಲ್ಲಿ ನಿಮ್ಮೆಲ್ಲರ ಸಹಕಾರದಿಂದ ಸಾಧ್ಯವಾಗಿದೆ. ನಮ್ಮೆಲ್ಲರ ಕನಸು ಕೈಗೂಡಿದಂತೆ ಎದ್ದು ನಿಂತಿರುವ ಪ್ರಗತಿಯ ಅನಾವರಣದ ಸುಮುಹೂರ್ತದಲ್ಲಿ ತಾವು ಭಾವಗಹಿಸಬೇಕು ಎಂದು ಈ ಪತ್ರದ ಮೂಲಕ ವಿನಂತಿಸುತ್ತಿರುವೆ.

ತಮ್ಮ ಉಪಸ್ಥಿತಿಯು ಸಮಾರಂಭದ ಶೋಭೆ ಹೆಚ್ಚಿಸಲಿದ್ದು, ತಮ್ಮ ಆಗಮನದ ನಿರೀಕ್ಷೆಯಲ್ಲಿರುತ್ತೇನೆ. ಬನ್ನಿ ನಾಡ ಕಟ್ಟೋಣ ಎಂದು ದೇವೇಗೌಡರಿಗೆ ನ.10 ರಂದು ಬರೆದಿರುವ ಪತ್ರ ಟ್ವೀಟ್‌ನಲ್ಲಿ ಹಾಕಲಾಗಿದೆ