ಸಮಗ್ರ ಕರ್ನಾಟಕ ಅಭಿವೃದ್ಧಿಗೆ ಪಂಚರತ್ನ ಪರಿಪೂರ್ಣ ಪರಿಹಾರ: ಎಚ್‌ಡಿಕೆ

ಬೆಂಗಳೂರು: ರಾಜ್ಯ ಮತ್ತು ರಾಷ್ಟ್ರದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಹೇಳುವುದು ಒಂದು, ಮಾಡುವುದು ಇನ್ನೊಂದು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಆರೋಪಿಸಿದ್ದಾರೆ.
ಪಂಚರತ್ನ ಯಾತ್ರೆ ಸಂಬಂಧ ಕೂಡುಮಲೆಯಲ್ಲಿ ಪೂಜೆ ಸಲ್ಲಿಸಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ನಡವಳಿಕೆಯನ್ನು ಎಲ್ಲರೂ ಗಮನಿಸುತ್ತಿದ್ದಾರೆ.
ಪಂಚರತ್ನ ರಥಯಾತ್ರೆಯನ್ನು ನವ ಕರ್ನಾಟಕ ನಿರ್ಮಾಣಕ್ಕಾಗಿ ಮಹಾಯಾತ್ರೆ ಎಂಬ ಹೆಸರಿನಲ್ಲಿ ಕೈಗೊಳ್ಳಲಾಗುತ್ತಿದೆ. ಸಮಗ್ರ ಕರ್ನಾಟಕ ಅಭಿವೃದ್ಧಿಗೆ ಪಂಚರತ್ನ ಪರಿಪೂರ್ಣ ಪರಿಹಾರ ಎಂದು ತಿಳಿಸಿದರು.
ಶಿಕ್ಷಣವೇ ಆಧುನಿಕ ಶಕ್ತಿ, ಆರೋಗ್ಯ ಸಂಪತ್ತು. ಕೃಷಿ ಚೈತನ್ಯ, ಯುವ ನವಮಾರ್ಗ ಮತ್ತು ಮಹಿಳಾ ಸಬಲೀಕರಣ ಹಾಗೂ ವಸತಿ ಆಸರೆ ಪಂಚರತ್ನ ಯೋಜನೆಗಳಾಗಿವೆ ಎಂದು ಹೇಳಿದರು.
ಮುಂದಿನ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಬೃಹತ್ ಸಮಾವೇಶದಲ್ಲಿ ಅಭ್ಯರ್ಥಿಗಳ ಮೊದಲ ಪಟ್ಟಿ ಘೋಷಣೆ ಮಾಡಲಾಗುವುದು ಎಂದು ಹೇಳಿದರು.
ನಮ್ಮ ಪಕ್ಷದಿಂದ ಸ್ಪರ್ಧೆ ಮಾಡುವ ಅಭ್ಯರ್ಥಿಗಳಿಗೆ ಪಕ್ಷ ನಿಷ್ಠೆಯ ಪ್ರಮಾಣ ವಚನ ಬೋಧಿಸುವ ಕಾರ್ಯಕ್ರಮ ಇತ್ತು. ಆದರೆ, ಯಾತ್ರೆ ರದ್ದಾದ ಕಾರಣ ವಾರದ ನಂತರದ ಸಮಾವೇಶದಲ್ಲಿ ಪಟ್ಟಿ ಘೋಷಣೆ, ಪ್ರಮಾಣ ವಚನ ಬೋಧನೆ ಎರಡನ್ನೂ ಮಾಡಲಾಗುವುದು ಎಂದು ತಿಳಿಸಿದರು.
ಪಕ್ಷದ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ, ಮಾಜಿ ಸಚಿವರಾದ ಜಿ.ಟಿ.ದೇವೇಗೌಡ,ಬಂಡೆಪ್ಪ ಕಾಶೆಂಪೂರ್, ವಿಧಾನ ಪರಿಷತ್ ಸದಸ್ಯರಾದ ಭೋಜೇಗೌಡ, ಟಿ. ಎ.ಶರವಣ, ಗೋವಿಂದರಾಜು , ಶಾಸಕ ಕೃಷ್ಣಾರೆಡ್ಡಿ ಮತ್ತಿತರರು ಹಾಜರಿದ್ದರು.
ಬಿಆರ್‌ಎಸ್ ಬೆಂಬಲ: ಪಂಚರತ್ನ ಯಾತ್ರೆಗೆ ಭಾರತ್ ರಾಷ್ಟ್ರ ಸಮಿತಿ ಪರ ಆಗಮಿಸಿದ್ದ ಶಾಸಕ ರಾಜೇಂದರ್ ರೆಡ್ಡಿ, ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ನಮ್ಮ ಪಕ್ಷವು ಜೆಡಿಎಸ್ ಪರ ಪ್ರಚಾರ ಮಾಡಲಿದೆ. ಜೆಡಿಎಸ್‌ಗೆ ತೆಲಂಗಾಣ ಮುಖ್ಯಮಂತ್ರಿ ಕೆ.ಸಿ.ಚಂದ್ರಶೇಖರ ರಾವ್ ಅವರು ಎಲ್ಲಾ ರೀತಿಯ ಬೆಂಬಲ ನೀಡಲಿದ್ದಾರೆ ಎಂದು ಹೇಳಿದರು.
ಕುಟುಂಬ ವರ್ಗ ಭಾಗಿ: ಇತಿಹಾಸ ಪ್ರಸಿದ್ಧ ಕೂಡುಮಲೆ ಮಹಾಗಣಪತಿ ದೇವಾಲಯದಲ್ಲಿ ಮಂಗಳವಾರ ಏರ್ಪಡಿಸಿದ್ದ ಪೂಜೆ ಹಾಗೂ ವಿಶೇಷ ಹೋಮದಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ನಿಖೀಲ್ ಕುಮಾರಸ್ವಾಮಿ, ಅನಿತಾ ಕುಮಾರಸ್ವಾಮಿ ಸೇರಿ ಕುಟುಂಬ ವರ್ಗದ ಸದಸ್ಯರು ಪಾಲ್ಗೊಂಡಿದ್ದರು.
ಗ್ರಾಮಸ್ಥರ ಜತೆ ಮಾತುಕತೆ
ಮಳೆಯಿಂದ ಪಂಚರತ್ನ ರಥಯಾತ್ರೆ ಮುಂದೂಡಿದ ನಂತರ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ತಾವು ವಾಸ್ತವ್ಯ ಹೂಡಬೇಕಿದ್ದ ಗ್ರಾಮಕ್ಕೆ ಭೇಟಿ ನೀಡಿ ಜನರ ಜತೆ ಮಾತುಕತೆ ನಡೆಸಿದರು. ಮುಳಬಾಗಿಲು ತಾಲೂಕಿನ ಬಟ್ಲಬಾವನಹಳ್ಳಿ ಗ್ರಾಮಕ್ಕೆ ಭೇಟಿ ನೀಡಿದ ಅವರು, ಗ್ರಾಮದ ಹಿರಿಯರು, ಕಿರಿಯರ ಜತೆ ಮಾತುಕತೆ ನಡೆಸಿ ಅಲ್ಲಿನ ಸಮಸ್ಯೆಗಳನ್ನು ಆಲಿಸಿದರು. ಸಾಧ್ಯವಾದರೆ ಇನ್ನೊಮ್ಮೆ ಗ್ರಾಮಕ್ಕೆ ಭೇಟಿ ನೀಡುವುದಾಗಿ ತಿಳಿಸಿದರು.