ದುಬಾರಿ ಕಾರ್ಗೆ ತೆರಿಗೆ ವಿನಾಯಿತಿ ಕೇಳಿದ್ದ ಚಿತ್ರನಟ ವಿಜಯ್ಗೆ 1 ಲಕ್ಷ ರೂ. ದಂಡ!
ನವದೆಹಲಿ: ತಮ್ಮ ದುಬಾರಿ ಕಾರಿಗೆ ಸಂಬಂಧಿಸಿದಂತೆ ತೆರಿಗೆ ವಿನಾಯಿತಿ ಕೋರಿರುವ ತಮಿಳು ಚಿತ್ರನಟ ವಿಜಯ್ಗೆ ಮದ್ರಾಸ್ ಹೈಕೋರ್ಟ್ 1 ಲಕ್ಷ ರೂ. ದಂಡ ವಿಧಿಸಿ ಆದೇಶ ಹೊರಡಿಸಿದೆ. ತೆರಿಗೆ ವಿನಾಯಿತಿ ಕೋರಿ ವಿಜಯ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಸ್.ಎಂ. ಸುಬ್ರಮಣಿಯಂ ವಜಾಗೊಳಿಸಿದ್ದಾರೆ.
ವಿಜಯ್ ಇಂಗ್ಲೆಂಡ್ನಿಂದ ಆಮದು ಮಾಡಿಕೊಂಡಿರುವ ಸುಮಾರು 7ರಿಂದ 8 ಕೋಟಿ ರೂ. ಮೌಲ್ಯದ ರೋಲ್ಸ್ ರೋಯ್ಸ್ ಘೋಸ್ಟ್ ಕಾರಿಗೆ ಸಂಬಂಧಿಸಿದಂತೆ ತೆರಿಗೆ ವಿನಾಯಿತಿ ನೀಡುವಂತೆ 2012ರಲ್ಲೇ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಗೆ ಸಂಬಂಧಿಸಿದ ವಿಚಾರಣೆ ವೇಳೆ ನ್ಯಾಯಮೂರ್ತಿ ಈ ಆದೇಶ ನೀಡಿದ್ದಾರೆ.
ಸಿನಿಮಾಗಳಲ್ಲಿ ಸಮಾಜಸೇವೆಯ ಚಾಂಪಿಯನ್ ಎಂಬಂತೆ ಹಾಗೂ ಭ್ರಷ್ಟಾಚಾರದ ವಿರೋಧಿಯಂತೆ ಕಾಣಿಸಿಕೊಳ್ಳುವ ನಟ ಪ್ರವೇಶ ತೆರಿಗೆ ಪಾವತಿಸುವಲ್ಲಿ ವಿಫಲರಾಗಿದ್ದಾರೆ. ತೆರಿಗೆ ಪಾವತಿಸುವುದು ಪ್ರತಿ ನಾಗರಿಕನ ಕರ್ತವ್ಯ ಹಾಗೂ ಅದು ಕಡ್ಡಾಯ ಎಂದಿರುವ ನ್ಯಾಯಮೂರ್ತಿಯವರು, ದಂಡದ ಮೊತ್ತವನ್ನು ತಮಿಳುನಾಡು ಮುಖ್ಯಮಂತ್ರಿಯವರ ಕೋವಿಡ್ ಪರಿಹಾರ ನಿಧಿಗೆ ನೀಡುವಂತೆ ಸೂಚಿಸಿದ್ದಾರೆ.