ಆಸ್ಕರ್ ಕ್ಯಾಂಪೇನ್​ಗೆ ಅಸಲಿಗೆ ಖರ್ಚಾದ ಹಣವೆಷ್ಟು? ಕೊನೆಗೂ ಮೌನ ಮುರಿದ ರಾಜಮೌಳಿ ಮಗ

ಆಸ್ಕರ್ ಕ್ಯಾಂಪೇನ್​ಗೆ ಅಸಲಿಗೆ ಖರ್ಚಾದ ಹಣವೆಷ್ಟು? ಕೊನೆಗೂ ಮೌನ ಮುರಿದ ರಾಜಮೌಳಿ ಮಗ
ಸ್ಕರ್ ಗೆಲ್ಲಲು 'ಆರ್​ಆರ್​ಆರ್​' ನಿರ್ದೇಶಕ ರಾಜಮೌಳಿ ಹಣವನ್ನು ನೀರಿನಂತೆ ಖರ್ಚು ಮಾಡಿದ್ದಾರೆ ಎನ್ನಲಾಗಿತ್ತು. ಈಗ ಕಾರ್ತಿಕೇಯ ಅವರು ಅಸಲಿ ಲೆಕ್ಕ ನೀಡಿದ್ದಾರೆ.

'ಆರ್​ಆರ್​ಆರ್​' (RRR Movie) ಚಿತ್ರದ 'ನಾಟು ನಾಟು..'

ಹಾಡು ಆಸ್ಕರ್ ಪ್ರಶಸ್ತಿ ಗೆದ್ದು ಹೊಸ ದಾಖಲೆ ಬರೆದಿದೆ. ಈ ಸಿನಿಮಾ ಮಾಡಿದ ದಾಖಲೆಗಳು ಹಲವು. ಹಾಡು ಆಸ್ಕರ್ ಗೆದ್ದ ವಿಚಾರದಲ್ಲಿ ಕೆಲ ಚರ್ಚೆಗಳು ಹುಟ್ಟಿಕೊಂಡಿವೆ. ಆಸ್ಕರ್ ಕ್ಯಾಂಪೇನ್​ಗೆ ರಾಜಮೌಳಿ 80 ಕೋಟಿ ರೂಪಾಯಿ ವ್ಯಯಿಸಿದ್ದಾರೆ ಎಂದೆಲ್ಲ ವರದಿ ಆಗಿತ್ತು. ಇದರ ಜೊತೆಗೆ ಚಿತ್ರದ ನಿರ್ಮಾಪಕ ದಾನಯ್ಯ ಅವರು ಎಲ್ಲಿಯೂ ಕಾಣಿಸಿಕೊಂಡಿರಲಿಲ್ಲ. ತಂಡದ ಜೊತೆ ಅವರು ವೈಮನಸ್ಸು ಹೊಂದಿದ್ದಾರೆ ಎಂದೆಲ್ಲ ಸುದ್ದಿ ಬಿತ್ತರ ಆಗಿತ್ತು. ಈಗ ಆಸ್ಕರ್ ಕ್ಯಾಂಪೇನ್ ಬಗ್ಗೆ ರಾಜಮೌಳಿ ಮಗ ಎಸ್‌ಎಸ್​ ಕಾರ್ತಿಕೇಯ (SS Karthikeya) ಅವರು ಮಾತನಾಡಿದ್ದಾರೆ. ಅವರು ಅಸಲಿ ಲೆಕ್ಕ ನೀಡಿದ್ದಾರೆ.

ಆಸ್ಕರ್​, ಗೋಲ್ಡನ್ ಗ್ಲೋಬ್ಸ್ ಮೊದಲಾದ ಪ್ರಶಸ್ತಿಗಳು ಹಾಲಿವುಡ್​ ಅವಾರ್ಡ್​ಗಳು. ಇಲ್ಲಿ ಭಾರತದ ಸಿನಿಮಾಗಳು ರೇಸ್​ಗೆ ಇಳಿಯೋದು, ಪ್ರಶಸ್ತಿ ಬಾಚಿಕೊಳ್ಳೋದು ಅಷ್ಟು ಸುಲಭದ ಮಾತಲ್ಲ. ಆದಾಗ್ಯೂ, 'ಆರ್​ಆರ್​ಆರ್​' ಸಿನಿಮಾ ಸಾಲು ಸಾಲು ಪ್ರಶಸ್ತಿಗಳನ್ನು ಗೆಲ್ಲುತ್ತಿದೆ. 'ಹಾಲಿವುಡ್​ ಕ್ರಿಟಿಕ್ಸ್ ಅಸೋಸಿಯೇಷನ್ ಅವಾರ್ಡ್​', 'ಗೋಲ್ಡನ್​ ಗ್ಲೋಬ್ ಅವಾರ್ಡ್', ಆಸ್ಕರ್​ ಅವಾರ್ಡ್​​​​ಗಳನ್ನು ಚಿತ್ರ ಪಡೆದಿದೆ. ಇದಕ್ಕಾಗಿ 'ಆರ್​ಆರ್​ಆರ್​' ನಿರ್ದೇಶಕ ರಾಜಮೌಳಿ ಹಣವನ್ನು ನೀರಿನಂತೆ ಖರ್ಚು ಮಾಡಿದ್ದಾರೆ ಎನ್ನಲಾಗಿತ್ತು. ಈಗ ಕಾರ್ತಿಕೇಯ ಅವರು ಅಸಲಿ ಲೆಕ್ಕ ನೀಡಿದ್ದಾರೆ.

ಆಸ್ಕರ್ ಕ್ಯಾಂಪೇನ್​ಗೆ ಖರ್ಚಾದ ಮೊತ್ತ ಕೇವಲ 8 ಕೋಟಿ ರೂಪಾಯಿ ಅಂತೆ. 'ಆರಂಭದಲ್ಲಿ ನಾವು 5 ಕೋಟಿ ರೂಪಾಯಿಯಲ್ಲಿ ಸಿನಿಮಾಗೆ ಕ್ಯಾಂಪೇನ್ ಮಾಡಬಹುದು ಎಂದುಕೊಂಡಿದ್ದೆವು. ಆದರೆ, ನಾವು ಅಂದುಕೊಂಡಿದ್ದಕ್ಕಿಂತ 3.5 ಕೋಟಿ ರೂಪಾಯಿ ಹೆಚ್ಚಾಗಿ ಖರ್ಚಾಯಿತು. ಹಲವು ಕಡೆಗಳಲ್ಲಿ ಸಿನಿಮಾ ಸ್ಕ್ರೀನಿಂಗ್ ಮಾಡಬೇಕಿತ್ತು. ಒಟ್ಟಾರೆ ಖರ್ಚಾದ ಹಣ 8.5 ಕೋಟಿ ರೂಪಾಯಿ. ಇದಕ್ಕೆ ಯಾರ ಸಹಾಯವನ್ನೂ ನಾವು ಪಡೆದಿಲ್ಲ. ನಮ್ಮ ಜೇಬಿನಿಂದ ಖರ್ಚು ಮಾಡಿದ್ದೇವೆ' ಎಂದು ಕಾರ್ತಿಕೇಯ ಹೇಳಿದ್ದಾರೆ.

ಜನರ ಪ್ರೀತಿಯನ್ನು ಖರೀದಿಸಲು ಸಾಧ್ಯವಿಲ್ಲ. ಜೇಮ್ಸ್ ಕ್ಯಾಮೆರೂನ್ ಮತ್ತು ಸ್ಟೀವನ್ ಸ್ಪೀಲ್‌ಬರ್ಗ್‌ ಅಂತಹ ಖ್ಯಾತ ನಾಮರು ಚಿತ್ರದ ಬಗ್ಗೆ ಮಾತನಾಡಿದ್ದಾರೆ. ಇದಕ್ಕೆ ಬೆಲೆಕಟ್ಟಲಾಗದು. ಈ ರೀತಿ ಮಾತನಾಡಲು ದುಡ್ಡು ಕೊಡೋಕೆ ಆಗಲ್ಲ. ನಾವು ಆ ಗೌರವವನ್ನು ಗಳಿಸಿದ್ದಕ್ಕಾಗಿ ನನಗೆ ಸಂತೋಷವಿದೆ' ಎಂದಿದ್ದಾರೆ ಅವರು.