'ಅಲಾ ವೈಕುಂಠಪುರಂಲೋ' ಹಿಂದಿ ರಿಮೇಕ್‌ಗೆ ಎಂಟ್ರಿಯಾದ ಸ್ಟಾರ್ ನಟಿ?
ತೆಲುಗಿನ ಬ್ಲಾಕ್ ಬಸ್ಟರ್ ಸಿನಿಮಾ 'ಅಲಾ ವೈಕುಂಠಪುರಂಲೋ' ಹಿಂದಿಗೆ ರಿಮೇಕ್ ಆಗುತ್ತಿದೆ ಎಂಬ ಸುದ್ದಿ ಬಹಳ ದಿನಗಳಿಂದಲೂ ಚರ್ಚೆಯಲ್ಲಿದೆ. ಅಲ್ಲು ಅರ್ಜುನ್ ಮತ್ತು ಪೂಜಾ ಹೆಗ್ಡೆ ನಟಿಸಿದ್ದ ಪಾತ್ರಗಳಲ್ಲಿ ಕಾರ್ತಿನ್ ಆರ್ಯನ್ ಮತ್ತು ಕೃತಿ ಸನೂನ್ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ವರದಿಯಾಗಿದೆ.
ಏಕ್ತಾ ಕಪೂರ್ ಮತ್ತು ರೋಹಿತ್ ಧವನ್ ಈ ಚಿತ್ರವನ್ನು ಜಂಟಿಯಾಗಿ ನಿರ್ಮಾಣ ಮಾಡಲಿದ್ದಾರೆ ಎಂದು ಹೇಳಲಾಗಿದೆ. ಇದೀಗ, ಹಿಂದಿ ಚಿತ್ರರಂಗದ ಸ್ಟಾರ್ ನಟಿ ಮನಿಷಾ ಕೊಯಿರಾಲಾ ಅಲಾ ವೈಕುಂಠಪುರಂಲೋ ರಿಮೇಕ್‌ಗೆ ಪ್ರವೇಶವಾಗುತ್ತಿದ್ದಾರೆ ಎಂಬ ಸುದ್ದಿ ವೆಬ್‌ಸೈಟ್‌ಗಳಲ್ಲಿ ಪ್ರಕಟವಾಗಿದೆ.
ಅಲ್ಲು ಅರ್ಜುನ್ ತಾಯಿ ಪಾತ್ರದಲ್ಲಿ ಬಾಲಿವುಡ್ ನಟಿ ಟಬು ಅಭಿನಯಿಸಿದ್ದರು. ಹಿಂದಿಯಲ್ಲಿ ಆ ಪಾತ್ರಕ್ಕಾಗಿ ಮನಿಷಾ ಕೊಯಿರಾಲಾ ಅವರನ್ನು ಸಂಪರ್ಕಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಇದಕ್ಕೂ ಮುಂಚೆ ಹಿಂದಿ ರಿಮೇಕ್‌ನಲ್ಲೂ ಟಬು ಅವರನ್ನು ಆಯ್ಕೆ ಮಾಡಿಕೊಳ್ಳಲು ಚಿಂತನೆ ಇತ್ತು. ಆದರೆ, ಇದಕ್ಕೂ ಮುಂಚೆ 'ಭೂಲ್ ಭೂಲೈಯಾ-2' ಚಿತ್ರದಲ್ಲಿ ಕಾರ್ತಿಕ್ ಮತ್ತು ಟಬು ಸ್ಕ್ರೀನ್ ಶೇರ್ ಮಾಡಿದ್ದರು. ಹಾಗಾಗಿ, ಹೊಸ ನಟಿಯನ್ನು ನೋಡೋಣ ಎಂದು ಹುಡುಕಿದಾಗ ಮನಿಷಾ ಸೂಕ್ತ ಎನಿಸಿದೆ ಎಂಬ ವಿಚಾರ ತಿಳಿದಿದೆ.
ಈ ಮೂಲಕ ಅಲಾ ವೈಕುಂಠಪುರಂಲೋ ಚಿತ್ರದ ಹಿಂದಿ ರಿಮೇಕ್‌ಗೆ ಪ್ರಮುಖ ಕಲಾವಿದರ ಆಯ್ಕೆ ಬಹುತೇಕ ಮುಗಿದಿದೆ. ಪೂರ್ವ ತಯಾರಿ ಮುಗಿಯುತ್ತಿದ್ದಂತೆ ಚಿತ್ರೀಕರಣ ಆರಂಭಿಸಲು ನಿರ್ಮಾಪಕರು ನಿರ್ಧರಿಸಿದ್ದಾರೆ.
ಅಲಾ ವೈಕುಂಠಪುರಂಲೋ ಕುರಿತು
ತ್ರಿವಿಕ್ರಮ್ ಶ್ರೀನಿವಾಸ್ ನಿರ್ದೇಶನದಲ್ಲಿ ತಯಾರಾಗಿದ್ದ ಅಲಾ ವೈಕುಂಠಪುರಂಲೋ ಸಿನಿಮಾ ಜನವರಿ 12, 2020ರಲ್ಲಿ ರಿಲೀಸ್ ಆಗಿತ್ತು. 100 ಕೋಟಿ ಬಜೆಟ್‌ನಲ್ಲಿ ತಯಾರಾಗಿದ್ದ ಸಿನಿಮಾ 250 ಕೋಟಿಗೂ ಆಧಿಕ ಕಲೆಕ್ಷನ್ ಮಾಡಿತ್ತು.