ಇಂದು ಸಿದ್ದರಾಮಯ್ಯ ನಿವಾಸಕ್ಕೆ ಮುತ್ತಿಗೆ

ಇಂದು ಸಿದ್ದರಾಮಯ್ಯ ನಿವಾಸಕ್ಕೆ ಮುತ್ತಿಗೆ

ಬೆಂಗಳೂರು: ಸಿದ್ದರಾಮಯ್ಯ ಕೋಲಾರದಿಂದಲೇ ಸ್ಪರ್ಧಿಸಬೇಕು ಎಂದು ಒತ್ತಾಯಿಸಿ ಅಲ್ಲಿನ ಕಾರ್ಯಕರ್ತರು ಹಾಗೂ ಮುಖಂಡರು ಮಂಗಳವಾರ ಬೆಂಗಳೂರು ಚಲೋ ಹಮ್ಮಿಕೊಂಡಿದ್ದಾರೆ.

ಬೆಂಗಳೂರಿಗೆ ವಾಹನಗಳಲ್ಲಿ ಆಗಮಿಸುವ ಕಾರ್ಯಕರ್ತರು, ಮುಖಂಡರು ಮೆರವಣಿಗೆ ನಡೆಸಿ ಸಿದ್ದರಾಮಯ್ಯ ನಿವಾಸಕ್ಕೆ ಮುತ್ತಿಗೆ ಹಾಕಲು ನಿರ್ಧರಿಸಿದ್ದಾರೆ. ಈ ಸಂಬಂಧ ರವಿವಾರ ಸಂಜೆ ಹಿಂದುಳಿದ ವರ್ಗಗಳ ಮುಖಂಡರ ಸಭೆ, ಸೋಮವಾರ ಒಕ್ಕಲಿಗ, ಮುಸ್ಲಿಂ ಹಾಗೂ ದಲಿತ ಮುಖಂಡರ ಸಭೆ ನಡೆಸಲಾಗಿದೆ.

ಎರಡೂ ಸಭೆಗಳಲ್ಲಿ ಸಿದ್ದರಾಮಯ್ಯ ಅವರನ್ನೇ ಅಭ್ಯರ್ಥಿ ಮಾಡಬೇಕೆಂದು ಹೈಕಮಾಂಡ್‌ಗೆ ಒತ್ತಡ ಹಾಕುವುದು. ಆಗತ್ಯ ಬಿದ್ದರೆ ದಿಲ್ಲಿಗೆ ನಿಯೋಗ ತೆರಳಿ ರಾಹುಲ್‌ ಗಾಂಧಿಗೆ ಮನವರಿಕೆ ಮಾಡಿಕೊಡಲು ನಿರ್ಧರಿಸಲಾಗಿದೆ. ಎರಡೂ ಸಭೆಗಳಲ್ಲಿ ಕೋಲಾರ ವಿಧಾನಸಭೆ ಕ್ಷೇತ್ರದ ಎಲ್ಲ ಸಮುದಾಯದ ಪ್ರಮುಖ ನಾಯಕರು ಭಾಗಿಯಾಗಿದ್ದರು.

ಈ ಮಧ್ಯೆ ದಿಲ್ಲಿಗೆ ಕರೆದೊಯ್ಯುವ ನಿಯೋಗದಲ್ಲಿ ಬರುವಂತೆ ಮಾಜಿ ಸಚಿವ ಕೃಷ್ಣಬೈರೇಗೌಡ, ಮಾಜಿ ಸ್ಪೀಕರ್‌ ರಮೇಶ್‌ ಕುಮಾರ್‌, ವಿಧಾನ ಪರಿಷತ್‌ ಸದಸ್ಯರಾದ ನಜೀರ್‌ ಅಹಮದ್‌, ಅನಿಲ್‌ಕುಮಾರ್‌, ಮಾಜಿ ಸಚಿವ ಎಂ.ಆರ್‌.ಸೀತಾರಾಂ, ಮಾಲೂರು ಶಾಸಕ ನಂಜೇಗೌಡ, ಬಂಗಾರಪೇಟೆ ಶಾಸಕ ಎಸ್‌.ಎನ್‌.ನಾರಾಯಣ ಸ್ವಾಮಿ, ಮುಳಬಾಗಿಲು ಮಾಜಿ ಶಾಸಕ ಕೊತ್ತೂರು ಮಂಜುನಾಥ್‌, ಚಿಂತಾಮಣಿಯ ಮಾಜಿ ಶಾಸಕ ಡಾ| ಎಂ.ಸಿ.ಸುಧಾಕರ್‌ ಅವರಿಗೆ ಆಹ್ವಾನ ನೀಡಲು ಮುಖಂಡರು ತೀರ್ಮಾನಿಸಿದ್ದಾರೆ ಎಂದು ಹೇಳಲಾಗಿದೆ.

ಆಕಾಂಕ್ಷಿಗಳು ಚುರುಕು
ಸಿದ್ದರಾಮಯ್ಯ ಸ್ಪರ್ಧೆಗೆ ಹಿಂದೇಟು ಹಾಕಿದ ಬೆನ್ನಲ್ಲೇ ಕೋಲಾರದಲ್ಲಿ ಆಕಾಂಕ್ಷಿಗಳು ಚುರುಕಾಗಿದ್ದು, ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ನಾನು ಪ್ರಬಲ ಆಕಾಂಕ್ಷಿಯಾಗಿದ್ದೇನೆ ಎಂದು ಬಹಿರಂಗವಾಗಿ ಘೋಷಿಸಿಕೊಂಡಿದ್ದಾರೆ. ಸಿದ್ದರಾಮಯ್ಯ ಸ್ಪರ್ಧಿಸದಿದ್ದರೆ ಒಕ್ಕಲಿಗ ಸಮುದಾಯಕ್ಕೆ ಅವಕಾಶ ಕೊಡಬೇಕು. ಜೆಡಿಎಸ್‌ ಮತ ವಿಭಜನೆ ಆದರೆ ಮಾತ್ರ ಕಾಂಗ್ರೆಸ್‌ ಗೆಲುವು ಸಾಧ್ಯ ಎಂದು ಕಾಂಗ್ರೆಸ್‌ನ ಒಕ್ಕಲಿಗ ಮುಖಂಡರು ಬೇಡಿಕೆ ಇಟ್ಟಿದ್ದಾರೆ. ಇದರ ಜತೆಗೆ, ಮಾಜಿ ಸಭಾಪತಿ ವಿ.ಆರ್‌.ಸುದರ್ಶನ್‌ , ಸಿ.ಎ.ಮನೋಹರ್‌, ಎಲ್‌.ಎ.ಮಂಜುನಾಥ್‌ ಅವರೂ ಆಕಾಂಕ್ಷಿಗಳಾಗಿದ್ದಾರೆ. ಇದರ ಜತೆಗೆ ಮುಸ್ಲಿಂ ಸಮುದಾಯಕ್ಕೆ ಅವಕಾಶ ಕೊಡಬೇಕು ಎಂಬ ಆಗ್ರಹವೂ ಇದೆ.