ಶಾಸಕ ಹರೀಶ್ ಪೂಂಜಾಗೆ ಬೆದರಿಕೆ: ಕೇರಳ ರಿಜಿಸ್ಟ್ರೇಷನ್ ಕಾರಲ್ಲಿ ಗಡ್ಡಧಾರಿ ವ್ಯಕ್ತಿ ಇದ್ದ, ಮತ್ತೊಬ್ಬ ತಲ್ವಾರ್ ಹಿಡಿದಿದ್ದ.
ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ಕ್ಷೇತ್ರದ ಶಾಸಕ ಹರೀಶ್ ಪೂಂಜಾ ಅವರು ಪ್ರಯಾಣಿಸುತ್ತಿದ್ದ ಕಾರನ್ನು ಗುರುವಾರ ರಾತ್ರಿ ಅಡ್ಡಗಟ್ಟಿದ ದುಷ್ಕರ್ಮಿಗಳು ತಲ್ವಾರ್ ತೋರಿಸಿ ಬೆದರಿಕೆ ಹಾಕಿದ್ದಾರೆ ಎಂದು ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಶಾಸಕರ ಕಾರು ಚಾಲಕ ನವೀನ್ ದೂರು ನೀಡಿದ್ದಾರೆ.
'ನಿನ್ನೆ ಸಂಜೆ ಬೆಂಗಳೂರಿಂದ ವಿಮಾನದಲ್ಲಿ ಮಂಗಳೂರಿಗೆ ಹೊರಟು ಬಂದೆ. ಬಳಿಕ ನನ್ನ ಸಂಬಂಧಿಯೊಬ್ಬರ ಕಾರಿನಲ್ಲಿ ತೆರಳುತ್ತಿದ್ದೆ. ನಮ್ಮ ಹಿಂದೆ ನನ್ನ ಕಾರನ್ನು ಚಲಾಯಿಸಿಕೊಂಡು ಚಾಲಕ ನವೀನ್ ಬರುತ್ತಿದ್ದ. ನನ್ನ ಕಾರನ್ನು ಸ್ಕಾರ್ಪಿಯೋ ಕಾರೊಂದು ಹಿಂಬಾಲಿಸಿಕೊಂಡೇ ಬಂದಿದೆ. ಅನುಮಾನಗೊಂಡು ಪೊಲೀಸರಿಗೆ ಮಾಹಿತಿ ನೀಡಿದೆವು. ಆ ಕಾರಿನಲ್ಲಿ ನಾನಿಲ್ಲ ಎಂದು ಗೊತ್ತಾಗಿ ನಾನಿದ್ದ ಕಾರಿನ ಬಳಿ ಬಂದು ತಲ್ವಾರ್ ತೋರಿಸುತ್ತಾ ಬೈಯ್ಯುತ್ತಿದ್ದರು. ಅದು ಕೇರಳ ರಿಜಿಸ್ಟ್ರೇಷನ್ ಕಾರಾಗಿತ್ತು. ಅದರಲ್ಲಿ ಒಬ್ಬ ಗಡ್ಡಧಾರಿ ವ್ಯಕ್ತಿ ಇದ್ದ. ಮತ್ತೊಬ್ಬ ತಲ್ವಾರ್ ಹಿಡಿದಿದ್ದ. ಜೋರಾಗಿ ನಿಂದಿಸುತ್ತಲೇ ಇದ್ದರು. ಅವರ ಫೋಟೋ ಸಿಕ್ಕರೂ ನಾನು ಗುರುತಿಸುವೆ. ಪೊಲೀಸರು ಇನ್ನೇನು ಬರಬೇಕು ಅನ್ನುವಷ್ಟರಲ್ಲಿ ಸ್ಕಾರ್ಪಿಯೋವನ್ನ ವೇಗವಾಗಿ ಚಲಾಯಿಸಿಕೊಂಡು ಪರಾರಿಯಾದರು' ಎಂದು ಘಟನೆ ಬಗ್ಗೆ ಶಾಸಕರು ವಿವರಿಸಿದರು.
'ನಾವು ಹಿಂದುತ್ವ, ಹಿಂದು ಕಾರ್ಯಕರ್ತರು, ಹಿಂದು ಸಮಾಜದ ಪರವಾಗಿ ಇರುವುವರು. ಅವರು ಯಾಕೆ ನನ್ನನ್ನು ಟಾರ್ಗೆಟ್ ಮಾಡಿದರು ಎಂದು ಗೊತ್ತಾಗಿಲ್ಲ. ತನಿಖೆ ನಂತರ ಗೊತ್ತಾಗುತ್ತೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆಯುತ್ತಿರುವ ಘಟನೆಗಳನ್ನು ಗಮನಿಸಿದರೆ ಇದರ ಹಿಂದೆ ಬೇರೆ ಬೇರೆ ವ್ಯವಸ್ಥೆಗಳು ಅಡಗಿರಬಹುದು ಎಂದು ನನಗೆ ಬಲವಾಗಿ ಅನ್ನಿಸುತ್ತಿದೆ. ಇಂದು ಬೆಳಗ್ಗೆ ಗೃಹಸಚಿವರು ನನಗೆ ಕರೆ ಮಾಡಿ ಘಟನೆ ಬಗ್ಗೆ ಮಾಹಿತಿ ಪಡೆದಿದ್ದಾರೆ ಎಂದು ಶಾಸಕರು ತಿಳಿಸಿದರು.