ಪದ್ಮಶ್ರೀ ಪುರಸ್ಕಾರಗೊಂಡ ಹಾಜಬ್ಬ ಕಟ್ಟಿ ಬೆಳೆಸಿದ ಶಾಲೆ ಹಾಗೂ ಮನೆಯಲ್ಲಿ ಸಂಭ್ರಮ

ಉಳ್ಳಾಲ : ಅಕ್ಷರ ಸಂತ ಹರೇಕಳ ಹಾಜಬ್ಬ ಅವರು ದೆಹಲಿಯಲ್ಲಿ ದೇಶದ ಅತ್ಯುನ್ನತ ನಾಲ್ಕನೇಯ ಪ್ರತಿಷ್ಠಿತ ಪದ್ಮಶ್ರೀ ಪುರಸ್ಕಾರ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಂದ ಪಡೆಯುತ್ತಿದ್ದಂತೆ ಹಾಜಬ್ಬ ಅವರ ಶ್ರಮದಿಂದ ಅಭಿವೃದ್ಧಿಯಾದ ನ್ಯೂಪಡು³ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳು ಹಾಜಬ್ಬ ಪ್ರಶಸ್ತಿ ಪಡೆಯುತ್ತಿರುವ ವಿಡಿಯೋ ಚಿತ್ರಣವನ್ನು ಡಿಜಿಟಲ್ ಪರದೆಯಲ್ಲಿ ವೀಕ್ಷಿಸಿ ಸಂಭ್ರಮಿಸಿದರೆ, ಹಾಜಬ್ಬ ಅವರ ಮನೆಯಲ್ಲಿ ಮೊಬೈಲ್ ಮೂಲಕ ಪತ್ನಿ ಅವರು ಪ್ರಶಸ್ತಿ ಸ್ವೀಕರಿಸುವ ಚಿತ್ರಣವನ್ನು ವೀಕ್ಷಣೆ ಮಾಡಿದರು.
ಸರಕಾರಿ ಶಾಲೆಯಲ್ಲಿ ವಿದ್ಯಾರ್ಥಿಗಳು ಮತ್ತು ಶಾಲಾ ಶಿಕ್ಷಕರು, ಹರೇಕಳ ಗ್ರಾಮದ ಅಧ್ಯಕ್ಷ ಬದ್ರುದ್ದೀನ್, ಸತ್ತಾರ್ ಸೇರಿದಂತೆ ಸ್ಥಳೀಯರು ಪ್ರಶಸ್ತಿ ಪ್ರಧಾನ ನಡೆಯುವ ವೇಳೆ ಬ್ಯಾಂಡ್ ಹಾಗೂ ಚಪ್ಪಾಳೆ ಮೂಲಕ ಹಾಜಬ್ಬರನ್ನು ಹಾಡಿ ಹೊಗಳುವ ಮೂಲಕ ಗೌರವ ಸಮರ್ಪಿಸಿದರು. ಮನೆಯಲ್ಲಿ ಪತ್ನಿ , ಮೂವರು ಮಕ್ಕಳು ಹಾಗೂ ಸಂಬಂಧಿಕರು ಮೊಬೈಲ್ ಮೂಲಕ ಮನೆ ಯಜಮಾನ ಪದ್ಮಶ್ರೀ ಪುರಸ್ಕಾರ ಪಡೆಯುವುದನ್ನು ನೋಡಿ ಸಂಭ್ರಮಿಸಿದರು.
ಶಾಲಾ ವಿದ್ಯಾರ್ಥಿಗಳಿಗೆ ಹರೇಕಳ ಹಾಜಬ್ಬನವರು ಪದ್ಮಶ್ರೀ ಪುರಸ್ಕಾರ ಪಡೆಯುವ ವೀಡಿಯೋವನ್ನು ಪ್ರಾಜೆಕ್ಟರ್ ಮೂಲಕ ವೀಕ್ಷಿಸಲು ಅವಕಾಶ ಮಾಡಿಕೊಡಲಾಯಿತು. ಪತ್ನಿ ಮೈಮುನಾ , ಪುತ್ರ ಇಸ್ಮಾಯಿಲ್ ಹಾಗೂ ಸಂಬಂಧಿ ನಾಸಿರ್ ಹಾಗೂ ಇಬ್ಬರು ಪುತ್ರಿಯರು ದೇಶದ ಅತ್ಯುನ್ನತ ಪ್ರಶಸ್ತಿಯನ್ನು ಪಡೆಯುವುದನ್ನು ನೋಡಿ ಆನಂದಿಸಿದರು
ಶಾಲಾ ಮುಖ್ಯ ಶಿಕ್ಷಕ ಲಕ್ಷ್ಮಣ್ ಪೊದುವಾಳ್ ಮಾತನಾಡಿ ಹಾಜಬ್ಬರವರು ಪದ್ಮಶ್ರೀ ಪುರಸ್ಕಾರ ಪಡೆದಿರುವುದು ಈ ನಾಡಿಗೆ ಸಂದ ಗೌರವ ಇದರಿಂದ ಶಾಲೆಯೊಂದಿಗೆ ಇಲ್ಲಿ ಕಲಿತ ವಿದ್ಯಾರ್ಥಿಗಳು, ಮತ್ತು ಇಲ್ಲಿ ಕಾರ್ಯ ನಿರ್ವಹಿಸಿದ ಶಿಕ್ಷಕರಿಗೆ ಒಂದು ಹೆಮ್ಮೆಯ ಸಂಗತಿ ಎಂದರು