ಮಾಸ್ಕ್ ಹಾಕದೆ ರಸ್ತೆಗಿಳಿದ ಮಹಿಳೆಯ ಕಪಾಳಕ್ಕೆ ಹೊಡೆದ ಪೊಲೀಸ್! ಪೆಟ್ಟನ್ನು ವಾಪಸು ಕೊಟ್ಟ ಮಹಿಳೆ

ಭೋಪಾಲ್: ದೇಶಾದ್ಯಂತ ಕರೊನಾ ಸೋಂಕಿತರ ಸಂಖ್ಯೆ ಏರಿಕೆ ಕಾಣುತ್ತಿದೆ. ಸೋಂಕಿನ ನಿಯಂತ್ರಣಕ್ಕೆಂದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹರಸಾಹಸ ಪಡುತ್ತಿದ್ದು, ಅನೇಕ ರಾಜ್ಯಗಳಲ್ಲಿ ಲಾಕ್ಡೌನ್ ಜಾರಿಗೊಳಿಸಲಾಗಿದೆ. ಆದರೆ ಕರೊನಾ ನಿಯಮಗಳನ್ನೆಲ್ಲವನ್ನು ಗಾಳಿಗೆ ತೂರಿ, ಮಾಸ್ಕ್ ಹಾಕದೆಯೇ ರಸ್ತೆಗಿಳಿದಿದ್ದ ಮಹಿಳೆಗೆ ಪೊಲೀಸ್ ಪೇದೆಯೊಬ್ಬರು ಕಪಾಳಮೋಕ್ಷ ಮಾಡಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಸಿಟ್ಟಿಗೆದ್ದ ಮಹಿಳೆ ವಾಪಾಸು ಪೊಲೀಸರಿಗೆ ಹೊಡೆದಿದ್ದಾಗಿ ಹೇಳಲಾಗಿದೆ.
ಈ ರೀತಿಯ ಘಟನೆಯೊಂದು ಸಾಗರ ಜಿಲ್ಲೆಯ ರಾಹ್ಲಿ ಪೊಲೀಸ್ ಠಾಣಾ ಪ್ರದೇಶದಲ್ಲಿ ನಡೆದಿದೆ. ನಗರದಲ್ಲಿ ಸೆಕ್ಷನ್ 144 ಜಾರಿಯಿದ್ದು, ಯಾರೊಬ್ಬರೂ ಅನಗತ್ಯವಾಗಿ ಮನೆಯಿಂದ ಹೊರ ಬಾರದಿರುವಂತೆ ಎಚ್ಚರಿಸಲಾಗಿತ್ತು. ಆದರೆ ಅಮ್ಮ ಮಗಳು ಮನೆಯಿಂದ ಹೊರಬಂದು ಮಾಸ್ಕ್ ಇಲ್ಲದೆಯೇ ಅಡ್ಡಾಡುತ್ತಿದ್ದರು. ಅವರನ್ನು ತಡೆದ ಪೊಲೀಸರು ಸುತ್ತಾಡುತ್ತಿರುವುದಕ್ಕೆ ಕಾರಣ ಕೇಳಿದ್ದಾರೆ. ದಂಡ ವಿಧಿಸಲು ಮುಂದಾಗಿದ್ದಾರೆ. ಆಗ ಅಮ್ಮ ಮಗಳ ಜೋಡಿ ಪೊಲಿಸರೊಂದಿಗೆ ಜಗಳಕ್ಕೆ ಮುಂದಾಗಿದೆ. ಜಗಳ ತಾರಕಕ್ಕೇರಿದ್ದು, ಮಹಿಳಾ ಪೊಲೀಸ್ ಪೇದೆ, ಆ ಮಹಿಳೆಯ ಕೆನ್ನೆಗೆ ಒಂದೇಟು ಬಾರಿಸಿದ್ದಾರೆ.
ಪೇದೆಯಿಂದ ಪೆಟ್ಟು ತಿಂದ ಸಿಟ್ಟಿನಲ್ಲಿ ಮಹಿಳೆ ವಾಪಸು ಮಹಿಳಾ ಪೇದೆಯ ಕೆನ್ನೆಗೆ ಬಾರಿಸಿದ್ದಾಳೆ. ಈ ರೀತಿ ಆಗುವಾಗ ಮಧ್ಯ ಪ್ರವೇಶಿಸಿದ ಇತರ ಪೊಲೀಸರು ಜಗಳವನ್ನು ನಿಲ್ಲಿಸಿದ್ದಾರೆ. ಪೊಲೀಸರ ಮೇಲೆ ಕೈ ಮಾಡಿದ ಮಹಿಳೆ ಮತ್ತು ಆಕೆಯನ್ನು ವಶಕ್ಕೆ ಪಡೆದಿರುವ ಪೊಲೀಸರು ಅವರ ಮೇಲೆ ವಿವಿಧ ಸೆಕ್ಷನ್ಗಳಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.