ಲಂಚ ಪಡೆಯುತ್ತಿದ್ದಾಗಲೇ ಸಿಕ್ಕಿಬಿದ್ದ ಬೆಸ್ಕಾಂ ಅಧಿಕಾರಿ; ಖಾಸಗಿ ಹೋಟೆಲ್ನಲ್ಲಿ ಲೋಕಾಯುಕ್ತ ಕಾರ್ಯಾಚರಣೆ

ಬೆಂಗಳೂರು: ವಿದ್ಯುತ್ ಸಂಪರ್ಕ ಕಲ್ಪಿಸಿಕೊಡಲು 50 ಸಾವಿರ ರೂ. ಲಂಚ ನೀಡುವಂತೆ ಹೇಳಿದ್ದ ಬೆಸ್ಕಾಂ ಅಧಿಕಾರಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾನೆ. ಬೆಂಗಳೂರಿನ ಬಿಳೇಕಹಳ್ಳಿ ಬೆಸ್ಕಾಂ ಸಬ್ ಡಿವಿಷನ್ ಎ.ಇ.ನಾಗರಾಜ್ ಬಂಧಿತ ಆರೋಪಿ.
ಈತ ಗುತ್ತಿಗೆದಾರನಿಂದ ಲಂಚ ಪಡೆಯುತ್ತಿದ್ದ ವೇಳೆ ಲೋಕಾಯಕ್ತ ಅಧಿಕಾರಿಗಳು ಬಲೆಗೆ ಬೀಳಿಸಿಕೊಂಡಿದ್ದಾರೆ.
ಎಲೆಕ್ಟ್ರಿಕಲ್ ಗುತ್ತಿಗೆದಾರ ಎಚ್.ಎಸ್.ಕುಮಾರ್ ಎಂಬವರು ಬೇಗೂರು ಹೋಬಳಿ ಕೋಡಿಚಿಕ್ಕನಹಳ್ಳಿ ಗ್ರಾಮದ ಅಬ್ದುಲ್ ರಹೀಮ್ ಎಂಬುವರಿಗೆ ಸಂಬಂಧಿಸಿದ ಕಟ್ಟಡದ ಎಲೆಕ್ಟ್ರಿಕಲ್ ಕೆಲಸದ ಗುತ್ತಿಗೆ ಪಡೆದುಕೊಂಡಿದ್ದು, ಅದರಂತೆ 2017ರ ಅಕ್ಟೋಬರ್‌ನಲ್ಲಿ ಅವರ ಬಹುಮಹಡಿ ಕಟ್ಟಡಕ್ಕೆ 37 ಕಿಲೋ ವ್ಯಾಟ್ ವಿದ್ಯುತ್ ಮಂಜೂರಾತಿ ನೀಡಿದ್ದು, ವಿದ್ಯುತ್ ಸಂಪರ್ಕ ಪಡೆಯಲು ಲೈನ್ ಕ್ಲಿಯರೆನ್ಸ್ (ಎಲ್.ಸಿ) ನೀಡಲು ಎ.ಇ ನಾಗರಾಜ್ 50 ಸಾವಿರಕ್ಕೆ ಲಂಚಕ್ಕೆ ಬೇಡಿಕೆ ಇಟ್ಟಿದ್ದರು.
ಲಂಚಕ್ಕೆ ಬೇಡಿಕೆ ಇಟ್ಟಿದ್ದ ಕುರಿತು ಮೊಬೈಲ್ಫೋನ್ ಸಂಭಾಷಣೆಯನ್ನು ರೆಕಾರ್ಡ್ ಮಾಡಿಕೊಂಡ ಕುಮಾರ್ ಈ ಬಗ್ಗೆ ಅ.20ರಂದು ಲೋಕಾಯುಕ್ತ ಪೊಲೀಸ್ ಠಾಣೆಗೆ ಹಾಜರಾಗಿ ದೂರು ನೀಡಿದ್ದರು. ದೂರಿನನ್ವಯ ಶುಕ್ರವಾರ ಕಾರ್ಯಾಚರಣೆ ನಡೆಸಿದ ಲೋಕಾಯುಕ್ತ ಅಧಿಕಾರಿಗಳು ನಾಗರಾಜ್ ಹಣ ಪಡೆಯುವ ವೇಳೆ ಸಾಕ್ಷಿ ಸಮೇತ ಬಂಧಿಸಿದ್ದಾರೆ.