ಜನಾರ್ದನ ರೆಡ್ಡಿ ಪಕ್ಷ ಸೇರಲು ಜೆಡಿಎಸ್‌ ತೊರೆದ ನಾಯಕ!

ಜನಾರ್ದನ ರೆಡ್ಡಿ ಪಕ್ಷ ಸೇರಲು ಜೆಡಿಎಸ್‌ ತೊರೆದ ನಾಯಕ!

ಕೊಪ್ಪಳ, ಫೆಬ್ರವರಿ 02; ಜೆಡಿಎಸ್ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ಸಿ. ಎಂ. ಹಿರೇಮಠ ರಾಜೀನಾಮೆ ನೀಡಿದ್ದಾರೆ. ಮಾಜಿ ಸಚಿವ

ನೇತೃತ್ವದ ಕಲ್ಯಾಣ ರಾಜ್ಯ ಪ್ರಗತಿ ಪಕ್ಷಕ್ಕೆ ಅವರು ಸೇರ್ಪಡೆಗೊಳ್ಳಲಿದ್ದಾರೆ.

ಜೆಡಿಎಸ್ ಪಕ್ಷದ ರಾಜ್ಯ ಜಂಟಿ ಕಾರ್ಯದರ್ಶಿಯಾಗಿದ್ದ ಸಿ. ಎಂ. ಹಿರೇಮಠ ಪಕ್ಷ ತೊರೆದಿದ್ದಾರೆ. ಕೊಪ್ಪಳ ಜಿಲ್ಲೆಯ ಕುಷ್ಟಗಿ ಕ್ಷೇತ್ರದಿಂದ ಅವರು ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಅಭ್ಯರ್ಥಿಯಾಗಿ ಮುಂದಿನ ಚುನಾವಣೆಗೆ ಸ್ಪರ್ಧಿಸಲಿದ್ದಾರೆ.ಕಳೆದ ವಾರ ಎಚ್. ಡಿ. ಕುಮಾರಸ್ವಾಮಿ ನೇತೃತ್ವದಲ್ಲಿ ನಡೆದ ಜೆಡಿಎಸ್ ಪಕ್ಷದ ಪಂಚರತ್ನ ರಥಯಾತ್ರೆಯಲ್ಲಿ ಸಿ. ಎಂ. ಹಿರೇಮಠ ಪಾಲ್ಗೊಂಡಿದ್ದರು. ಬಳಿಕ ಅವರು ಪಕ್ಷ ತೊರೆಯುವ ಘೋಷಣೆ ಮಾಡಿದ್ದಾರೆ.ನಾಯಕರ ವಿರುದ್ಧ ಆಕ್ರೋಶ; ಕುಷ್ಟಗಿ ಪಟ್ಟಣದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ನಿವೃತ್ತ ತಹಶೀಲ್ದಾರ್ ಆಗಿರುವ ಸಿ. ಎಂ. ಹಿರೇಮಠ, "ಜೆಡಿಎಸ್ ರಾಜ್ಯ ಜಂಟಿ ಕಾರ್ಯದರ್ಶಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಫೆಬ್ರವರಿ 3ರಂದು ಅಧಿಕೃತವಾಗಿ ಜನಾರ್ದನ ರೆಡ್ಡಿ ಅವರ ಹೊಸ ಪಕ್ಷ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಸೇರುತ್ತೇನೆ" ಎಂದರು

"ಕುಷ್ಟಗಿ ವಿಧಾನಸಭಾ ಕ್ಷೇತ್ರದಲ್ಲಿ ಕಳೆದ 16 ವರ್ಷಗಳಿಂದ ಜೆಡಿಎಸ್ ಸಂಘಟನೆಯಲ್ಲಿ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿದ ನನಗೆ ಸ್ಥಳೀಯ, ಜೆಡಿಎಸ್ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಶರಣಪ್ಪ ಕುಂಬಾರ ನಡವಳಿಕೆಯಿಂದ ಕಡೆಗಣಿಸಲಾಗಿದೆ" ಎಂದು ಆರೋಪಿಸಿದರು.

"ಈ ಬಗ್ಗೆ ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಗಮನಕ್ಕೆ ತಂದರೂ ಆ ವ್ಯಕ್ತಿ ನಡವಳಿಕೆ ಬದಲಿಸಿಕೊಳ್ಳಲಿಲ್ಲ. ಅದೇ ಪ್ರವೃತ್ತಿ ಮುಂದುವರೆಸಿದ್ದಾರೆ. ಇದು ಮನಸ್ಸಿಗೆ ನೋವು ತಂದಿದೆ. ಈ ಒಂದು ಕಾರಣದಿಂದ ಜೆಡಿಎಸ್‌ ಪಕ್ಷ ತೊರೆಯುತ್ತಿದ್ದೇನೆ" ಎಂದರು.

"ಅತ್ಯಂತ ಶಿಸ್ತಿನಿಂದ ಪಕ್ಷ ಸಂಘಟನೆಯಲ್ಲಿರುವ ನನಗೆ, ಇದೀಗ ಪಕ್ಷ ತೊರೆಯುತ್ತಿರುವುದಕ್ಕೆ ಮನಸ್ಸು ಭಾರವಾಗುತ್ತಿದೆ. ಇವರೊಂದಿಗೆ ಈಗಾಗಲೇ ಜೆಡಿಎಸ್ ತಾಲೂಕು ಘಟಕ ಅಧ್ಯಕ್ಷ ಸ್ಥಾನಕ್ಕೆ ಬಸವರಾಜ ನಾಯಕ ರಾಜೀನಾಮೆ ನೀಡಿದ್ದು, ಜಿಲ್ಲಾ ಜೆಡಿಎಸ್ ನಿಕಟಪೂರ್ವ ಅಧ್ಯಕ್ಷ ಎ. ಅಮರೇಗೌಡ ಪಾಟೀಲ ಸಹ ಕೆಆರ್‌ಪಿಪಿ" ಸೇರಲಿದ್ದಾರೆ ಎಂದು ಸಿ. ಎಂ. ಹಿರೇಮಠ ಹೇಳಿದರು.

ಕುಷ್ಟಗಿ ಕ್ಷೇತ್ರದಿಂದ ಕಣಕ್ಕೆ ಸಿ. ಎಂ. ಹಿರೇಮಠ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಸೇರಲಿದ್ದು, ಮುಂದಿನ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ. 2018ರ ಚುನಾವಣೆಯಲ್ಲಿ ಕುಷ್ಟಗಿಯಲ್ಲಿ ಹೆಚ್. ಸಿ. ನೀರಾವರಿ ಜೆಡಿಎಸ್ ಅಭ್ಯರ್ಥಿಯಾಗಿದ್ದರು 4002 ಮತಗಳನ್ನುಗಳಿಸಿದ್ದರು.

ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಸ್ಥಾಪಕ, ಮಾಜಿ ಸಚಿವ ಜನಾರ್ದನ ರೆಡ್ಡಿ ಕೊಪ್ಪಳ ಜಿಲ್ಲೆಯ ಗಂಗಾವತಿ ಕ್ಷೇತ್ರದಿಂದ ಕಣಕ್ಕಿಳಿಯಲಿದ್ದಾರೆ. ಜಿಲ್ಲೆಯ ವಿವಿಧ ಕ್ಷೇತ್ರಗಳಿಗೆ ಜನಾರ್ದನ ರೆಡ್ಡಿ ಶೀಘ್ರವೇ ಅಭ್ಯರ್ಥಿಗಳನ್ನು ಘೋಷಣೆ ಮಾಡುವ ನಿರೀಕ್ಷೆ ಇದೆ.

ಸಾಮೂಹಿಕ ರಾಜೀನಾಮೆ

ಸಿ. ಎಂ. ಹಿರೇಮಠ ಮಾತ್ರವಲ್ಲ ಕುಷ್ಟಗಿ ಕ್ಷೇತ್ರದ ಹಲವಾರು ಜೆಡಿಎಸ್ ಮುಖಂಡರು ಪಕ್ಷವನ್ನು ತೊರೆದಿದ್ದಾರೆ. ಎಲ್ಲರೂ ಕಲ್ಯಾಣ ರಾಜ್ಯ ಪ್ರಗತಿ ಪಕ್ಷವನ್ನು ಸೇರಲಿದ್ದಾರೆ. ಪಕ್ಷ ಬಿಟ್ಟವರು ಪಟ್ಟಿ

* ಹಿಂದುಳಿದ ವರ್ಗದ ಜೆಡಿಎಸ್ ಘಟಕ ಅಧ್ಯಕ್ಷ ಶಿವಶಂಕರಪ್ಪ ಕುರಿ

* ಯುವ ಘಟಕದ ಶಶಿಧರ ಕುಂಬಾರ

* ಅಲ್ಪ ಸಂಖ್ಯಾತ ಘಟಕದ ಅಕ್ಬರ್ ನದಾಫ್

* ಎಸ್‌ಸಿ ಘಟಕದ ಕೃಷ್ಣ ಕಲ್ಲಭಾವಿ

* ಎಸ್‌ಸಿ ಘಟಕದ ರಾಜಾಸಾಬ್ ಕಲಾಲಬಂಡಿ

* ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಅಮರೇಗೌಡ ಪಾಟೀಲ

* ತಾಲೂಕು ಘಟಕದ ಮಾಜಿ ಅಧ್ಯಕ್ಷ ಬಸವರಾಜ್ ನಾಯಕ್

* ಮಹಿಳಾ ಘಟಕದ ಅಧ್ಯಕ್ಷೆ ಸುವರ್ಣ ಕುಂಬಾರ