ಕಲಘಟಗಿ: ಹನ್ನೆರಡು ಮಠದಲ್ಲಿ ಮಡಿವಾಳೇಶ್ವರ ಸ್ವಾಮೀಜಿ 31ನೇ ಪುಣ್ಯಸ್ಮರಣೋತ್ಸವ

ಕಲಘಟಗಿ: 'ಜೀವನದಲ್ಲಿ ಯಶಸ್ಸಿಗಿಂತಲೂ ಸಂತೃಪ್ತಿ ಮುಖ್ಯ. ಶ್ರಮ, ಶ್ರದ್ಧೆಯಿದ್ದರೆ ಅದೃಷ್ಟ ಒಲಿದು ಬರುತ್ತದೆ' ಬಾಳೆಹೊನ್ನೂರಿನ ರಂಭಾಪುರಿ ಪೀಠದ ವೀರಸೋಮೇಶ್ವರ ಜಗದ್ಗುರು ಹೇಳಿದರು.
ಪಟ್ಟಣದ ಹನ್ನೆರಡು ಮಠದಲ್ಲಿ ಸೋಮವಾರ ಲಿಂಗೈಕ್ಯ ಮಡಿವಾಳೇಶ್ವರ ಸ್ವಾಮೀಜಿ 31ನೇ ಪುಣ್ಯಸ್ಮರಣೋತ್ಸವ ಹಾಗೂ ರೇವಣಸಿದ್ಧ ಸ್ವಾಮೀಜಿ ಅವರ ಪಟ್ಟಾಧಿಕಾರದ ಸುವರ್ಣ ಮಹೋತ್ಸವ ಸಮಾರಂಭದಲ್ಲಿ ಆಶೀರ್ವಚನ ನೀಡಿದರು.
'ನೆರಳು, ಹಣ್ಣು ನೀಡುವ ವೃಕ್ಷದಂತೆ ಮಡಿವಾಳ ಶಿವಾಚಾರ್ಯರುಬದುಕಿ, ಬಾಳಿದರು. ಅವರ ಸಹನೆ, ತಪಸ್ಸು, ಪರಿಶುದ್ಧ ಮನಸ್ಸು ಭಕ್ತ ಸಂಕುಲದ ಮೇಲೆ ಪ್ರಭಾವ ಬೀರಿದೆ' ಎಂದು ಹೇಳಿದರು.
ಶಾಸಕ ಸಿ.ಎಂ.ನಿಂಬಣ್ಣವರ ಮಾತನಾಡಿ, ಮಡಿವಾಳ ಶ್ರೀಗಳ ಆದರ್ಶ ಮತ್ತು ಸಾಧನೆಗಳ ಬಗ್ಗೆ ತಿಳಿಸಿದರು.
ಶಾಸಕ ಜಗದೀಶ ಶೆಟ್ಟರ್ 'ಜಂಗಮ ಯೋಗಿ ರೇವಣಸಿದ್ಧ' ಸ್ಮರಣ ಸಂಪುಟ ಬಿಡುಗಡೆಗೊಳಿಸಿದರು. ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಕಾರ್ಯಕ್ರಮ ಉದ್ಘಾಟಿಸಿದರು.
ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ, ಜಿ.ಎಂ.ಚಿಕ್ಕಮಠ, ಎಸ್.ಎಸ್.ಪಾಟೀಲ ಅದರಗುಂಚಿ, ಪ್ರಕಾಶ ಬೆಂಡಿಗೇರಿ, ಶಿರಕೋಳ ಗುರುಸಿದ್ಧೇಶ್ವರ ಶ್ರೀ, ಸುಳ್ಳದ ಶಿವಸಿದ್ಧರಾಮೇಶ್ವರ ಸ್ವಾಮೀಜಿ, ಬ್ಯಾಹಟ್ಟಿ ಮರುಳಸಿದ್ಧ ಸ್ವಾಮೀಜಿ, ಮಣಕಟ್ಟಿ ವಿಶ್ವಾರಾಧ್ಯ ಸ್ವಾಮೀಜಿ, ಹುಬ್ಬಳ್ಳಿ ರಾಜಶೇಖರ ಸ್ವಾಮೀಜಿ, ಹಣ್ಣಿಕೇರಿ ರೇವಣಸಿದ್ಧ ಶ್ರೀ, ಬೆಲವಂತರ ರೇವಣಸಿದ್ಧ ಶ್ರೀ, ಹನ್ನೆರಡು ಮಠದ ಉತ್ತರಾಧಿಕಾರಿ ನಾಗರಾಜ ದೇವರು, ಅಂತೂರ ಬೆಂತೂರ ಕುಮಾರದೇವರು ಹಿರೇಮಠ, ಹನ್ನೆರಡು ಮಠದ ರೇವಣಸಿದ್ಧ ಶಿವಾಚಾರ್ಯ ಸ್ವಾಮೀಜಿ, ಸವಣೂರಿನ ಡಾ.ಗುರುಪಾದಯ್ಯ ಸಾಲಿಮಠ ಇದ್ದರು.