ಅಣ್ಣಿಗೇರಿ ಪುರಸಭೆ ಚುನಾವಣೆ : ಟಿಕೆಟ್ ಗಿಟ್ಟಿಸಲು ಆಕಾಂಕ್ಷಿಗಳ ಚಿತ್ತ

ಅಣ್ಣಿಗೇರಿ: 3 ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಸ್ಥಳೀಯ ಪುರಸಭೆಗೆ ಚುನಾವಣಾ ಆಯೋಗವು ಚುನಾವಣೆ ನಡೆಸಲು ದಿನಾಂಕ ಘೋಷಣೆ ಮಾಡುತ್ತಿದ್ದಂತೆ ಟಿಕೆಟ್ ಆಕಾಂಕ್ಷಿಗಳಲ್ಲಿ ಚಟುವಟಿಕೆಗಳು ಗರಿಗೆದರಿವೆ.
ವಾರ್ಡ್ ಮೀಸಲಾತಿ ಸರಿಯಾಗಿಲ್ಲ ಎಂದು ಕೆಲ ಅಭ್ಯರ್ಥಿಗಳು ನ್ಯಾಯಾಲಯದ ಮೊರೆ ಹೋಗಿದ್ದರು.
ಸ್ಥಳೀಯ ಪುರಸಭೆಯ ಒಟ್ಟು 23 ವಾರ್ಡ್‌ಗಳನ್ನು ಒಳಗೊಂಡಿದೆ. ಇವುಗಳಲ್ಲಿ 11 ಮಹಿಳಾ ಮೀಸಲು ವಾರ್ಡ್‌ಗಳಿವೆ. ಎಲ್ಲ ಸಮುದಾಯಗಳಿಗೂ ಮೀಸಲಾತಿ ಅವಕಾಶ ಕಲ್ಪಿಸಿ ಆಯೋಗ ಆದೇಶ ಹೊರಡಿಸಿದೆ.
ಪುರಸಭೆಗೆ ಜನಪ್ರತಿನಿಧಿಗಳು ಇಲ್ಲದೇ ಪಟ್ಟಣ ಅಭಿವೃದ್ಧಿ ಕಾರ್ಯಗಳು ಸ್ಥಗಿತಗೊಂಡಿದ್ದವು. ಈಗ ಚುನಾವಣೆ ನಿಗದಿಯಾಗುತ್ತಿದ್ದಂತೆ ರಾಜಕೀಯ ಪಕ್ಷಗಳ ಮುಖಂಡರು, ಟಿಕೆಟ್ ಆಕಾಂಕ್ಷಿಗಳ ನಡುವೆ ಚರ್ಚೆಗಳು ನಡೆಯುತ್ತಿದ್ದು ಕುತೂಹಲ ಮೂಡಿಸಿದೆ.
ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ಮೂರು ಪಕ್ಷಗಳಲ್ಲಿ ಆಕಾಂಕ್ಷಿಗಳ ಸಂಖ್ಯೆ ದೊಡ್ಡದಿದೆ. ಪ್ರತಿ ವಾರ್ಡ್‌ನಿಂದಲೂ 5ರಿಂದ 10 ಅಭ್ಯರ್ಥಿಗಳು ಪ್ರತಿ ಪಕ್ಷದಿಂದ ಟಿಕೆಟ್‌ಗಾಗಿ ಪೈಪೋಟಿ ನಡೆಸುತ್ತಿದ್ದಾರೆ. ಪಕ್ಷಗಳು ಟಿಕೆಟ್ ನೀಡದಿದ್ದರೆ ಸ್ವತಂತ್ರವಾಗಿ ಕಣಕ್ಕಿಳಿಯುವ ನಿರ್ಧಾರವನ್ನೂ ಹಲವರು ವ್ಯಕ್ತಪಡಿಸಿದ್ದಾರೆ.
ಡಿ.8ರಿಂದ ನಾಮಪತ್ರ ಸಲ್ಲಿಸಬಹುದಾಗಿದ್ದು, 15ಕ್ಕೆ ಕೊನೆ ದಿನ. 16ರಂದು ನಾಮಪತ್ರಗಳ ಪರಿಶೀಲನೆ, 18ರಂದು ನಾಮಪತ್ರ ಹಿಂತೆಗೆದುಕೊಳ್ಳಲು ಅವಕಾಶವಿದೆ. 27ರಂದು ಮತದಾನ, 30ಕ್ಕೆ ಮತ ಎಣಿಕೆ ನಡೆಯಲಿದೆ