ಮೊಬೈಲ್ - ಚಾರ್ಜರ್ ಒಂದೇ ಬಾಕ್ಸ್ ನಲ್ಲಿದ್ದರೆ ಪ್ರತ್ಯೇಕ ತೆರಿಗೆ ವಿಧಿಸುವಂತಿಲ್ಲ: ಹೈಕೋರ್ಟ್ ಮಹತ್ವದ ತೀರ್ಪು

ಮೊಬೈಲ್ - ಚಾರ್ಜರ್ ಒಂದೇ ಬಾಕ್ಸ್ ನಲ್ಲಿದ್ದರೆ ಪ್ರತ್ಯೇಕ ತೆರಿಗೆ ವಿಧಿಸುವಂತಿಲ್ಲ: ಹೈಕೋರ್ಟ್ ಮಹತ್ವದ ತೀರ್ಪು

ಮೊಬೈಲ್ ಮತ್ತು ಚಾರ್ಜರ್ ಒಂದೇ ಬಾಕ್ಸ್ ನಲ್ಲಿಟ್ಟು ಮಾರಾಟ ಮಾಡಿದ ವೇಳೆ ಅವುಗಳಿಗೆ ಪ್ರತ್ಯೇಕವಾಗಿ ತೆರಿಗೆ ವಿಧಿಸುವಂತಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಅಲ್ಲದೆ ಈ ಕುರಿತಂತೆ ರಾಜ್ಯ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿಯನ್ನು ವಜಾಗೊಳಿಸಲಾಗಿದೆ.

ಪ್ರಕರಣದ ವಿವರ: ರಾಜ್ಯದ ವಿತರಣಾ ಕಂಪನಿಯೊಂದು ಬ್ರಾಂಡೆಡ್ ಮೊಬೈಲ್ ಫೋನ್ ಹಾಗೂ ಚಾರ್ಜರ್ ಅನ್ನು ರಾಜ್ಯದ ಚಿಲ್ಲರೆ ಮಾರಾಟಗಾರರಿಗೆ ಒಂದೇ ಬಾಕ್ಸ್ ನಲ್ಲಿಟ್ಟು ಮಾರಾಟ ಮಾಡಿತ್ತು. ಆದರೆ ಇದರ ಮೌಲ್ಯಮಾಪನ ನಡೆಸಿದ್ದ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು ಚಾರ್ಜರ್ ಗೆ ಶೇಕಡ 12 ರಿಂದ ಶೇಕಡ 14.5 ತೆರಿಗೆ ವಿಧಿಸಿ ನೋಟಿಸ್ ನೀಡಿದ್ದರು.

ಇದನ್ನು ಪ್ರಶ್ನಿಸಿದ್ದ ಕಂಪನಿ, ಕರ್ನಾಟಕ ಮೇಲ್ಮನವಿ ಪ್ರಾಧಿಕಾರಕ್ಕೆ 2017ರಲ್ಲಿ ಅರ್ಜಿ ಸಲ್ಲಿಸಿದ್ದು, ಅಲ್ಲಿ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು ನೀಡಿದ್ದ ನೋಟಿಸ್ ರದ್ದುಗೊಳಿಸಲಾಗಿತ್ತು. ಹೀಗಾಗಿ ಇದನ್ನು ಪ್ರಶ್ನಿಸಿ ಹೈಕೋರ್ಟ್ ಮೊರೆ ಹೋಗಲಾಗಿತ್ತು. ಇದರ ವಿಚಾರಣೆಯನ್ನು ನ್ಯಾಯಮೂರ್ತಿ ಪಿ.ಎಸ್. ದಿನೇಶ್ ಕುಮಾರ್ ಹಾಗೂ ನ್ಯಾಯಮೂರ್ತಿ ಟಿ.ಜಿ. ಶಿವಶಂಕರೇಗೌಡ ಅವರನ್ನೊಳಗೊಂಡ ಪೀಠ ನಡೆಸಿತ್ತು.

ಅಂತಿಮವಾಗಿ ತೀರ್ಪು ಹೊರಬಿದ್ದಿದ್ದು, ಟೆಲಿಫೋನ್ ಸೆಟ್ ಎಂದರೆ ಮೊಬೈಲ್ ಹಾಗೂ ಚಾರ್ಜರ್ ಒಳಗೊಂಡಿರುತ್ತದೆ. ಮೊಬೈಲ್ ಫೋನ್ ಗೆ ಶೇಕಡ ಐದು ತೆರಿಗೆ ವಿಧಿಸಲಾಗಿದ್ದು, ಇದೇ ಬಾಕ್ಸ್ ನಲ್ಲಿರುವ ಚಾರ್ಜರ್ ಗೆ ಹೆಚ್ಚುವರಿ ತೆರಿಗೆ ವಿಧಿಸುವುದು ಸೂಕ್ತವಲ್ಲ ಎಂದು ಅಭಿಪ್ರಾಯಪಟ್ಟು, ಅಂತಿಮವಾಗಿ ಮೇಲ್ಮನವಿಯನ್ನು ವಜಾಗೊಳಿಸಲಾಗಿದೆ.