ಹುಬ್ಬಳ್ಳಿ ಗಲಾಟೆ ಪ್ರಕರಣ: ಮಂತ್ರಿಗಳಿಂದ ಮುಖ್ಯ ಆರೋಪಿಗಳಿಗೆ ರಕ್ಷಣೆ, ಡಿಕೆಶಿ ಆರೋಪ

ಹುಬ್ಬಳ್ಳಿ ಗಲಾಟೆ ಪ್ರಕರಣ: ಮಂತ್ರಿಗಳಿಂದ ಮುಖ್ಯ ಆರೋಪಿಗಳಿಗೆ ರಕ್ಷಣೆ, ಡಿಕೆಶಿ ಆರೋಪ

ಹುಬ್ಬಳ್ಳಿ: ಮಂತ್ರಿಗಳು, ಶಾಸಕರು ಹೇಳಿಕೆ ನೀಡುವ ಮೂಲಕ ಮುಖ್ಯ ಆರೋಪಿಗಳಿಗೆ ರಕ್ಷಣೆ ಕೊಡುತ್ತಿದ್ದಾರೆಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆರೋಪಿಸಿದರು.

ಹುಬ್ಬಳ್ಳಿಯಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಘಟನೆಗೆ ಸಂಬಂಧಿಸಿದಂತೆ ಪೋಲಿಸರು ಕೈಗೊಳ್ಳುವ ತನಿಖೆಗೆ ಕಾಂಗ್ರೆಸ್ ಸಂಪೂರ್ಣ ಸಹಕಾರ ನೀಡಲಿದೆ. ಅಲ್ಲದೇ ಜನರಿಗೂ ಕೂಡಾ ತಿಳುವಳಿಕೆ ನೀಡುತ್ತೇವೆ. ಆದರೆ ಕಾನೂನು ಕೈಗೆತ್ತಿಕೊಂಡವರಿಗೆ ರಕ್ಷಣೆ ಕೊಡುವುದಿಲ್ಲ ಎಂದು ಡಿಕೆಶಿ ಹೇಳಿದರು.

ಹಸ್ತಕ್ಷೇಪ ಬೇಡ: ಗಲಭೆಯ ತನಿಖೆಯಲ್ಲಿ ಯಾರು ಹಸ್ತಕ್ಷೇಪ ಮಾಡಬಾರದೆಂದು ಸಲಹೆ ನೀಡಿದ ಡಿ.ಕೆ.ಶಿವಕುಮಾರ್ ಅಶಾಂತಿ ಮೂಡಿಸಲು ಪ್ರಚೋದನೆ ಮಾಡಬಾರದು. ಕಾಂಗ್ರೆಸ್ ಹುಬ್ಬಳ್ಳಿಯಲ್ಲಿ ಶಾಂತಿಯನ್ನು ಬಯಸುತ್ತದೆ. ಉದ್ಯೋಗ ಹೆಚ್ಚಬೇಕೆಂದು ಆಶಿಸುತ್ತದೆ ಎಂದು ಹೇಳಿದರು.

ಈಗಲೇ ನಿರುದ್ಯೋಗ ಹೆಚ್ಚಿದೆ. ಮುಂದೆ ಇನ್ನೂ ಹೆಚ್ಚಾಗುವ ಆತಂಕ ಇದೆ. ಆ ಹಿನ್ನೆಲೆಯಲ್ಲಿ ಹುಬ್ಬಳ್ಳಿಯಂತಹ ಮಹಾನಗರದಲ್ಲಿ ಅಶಾಂತಿ ಮೂಡಿಸುವುದರಿಂದ ನಿರುದ್ಯೋಗ ಮತ್ತಷ್ಟು ಹೆಚ್ಚುತ್ತದೆ. ಇದರಿಂದ ಎಲ್ಲ ಧರ್ಮದ ಯುವಕರು ಭಾವನಾತ್ಮಕವಾಗಿ ಪ್ರಚೋದನೆಗೆ ಒಳಗಾಗಿ ದುಷ್ಕೃತ್ಯದಲ್ಲಿ ತೊಡಗಿಕೊಳ್ಳುವ ಅಪಾಯ ಇರುತ್ತದೆ. ಹಾಗಾಗಿ ಹುಬ್ಬಳ್ಳಿಯಲ್ಲಿ ಶಾಂತಿ ನೆಲೆಯಲು ಎಲ್ಲರೂ ಶ್ರಮಿಸಬೇಕು ಎಂದರು.

ಪೋಲಿಸ್ ಕಾರ್ಯಕ್ಕೆ ಮೆಚ್ಚುಗೆ: ಗಲಾಟೆಯನ್ನು ಎರಡು ಗಂಟೆಯಲ್ಲಿ ಹತೋಟಿಗೆ ತರಲು ಪೊಲೀಸರು ತೀವ್ರ ಪ್ರಯತ್ನ ಮಾಡಿದ ಹಿನ್ನೆಲೆಯಲ್ಲಿ ಹುಬ್ಬಳ್ಳಿಯಲ್ಲಿ ಸದ್ಯ ಶಾಂತಿ ನೆಲೆಸಿದೆ. ಹಾಗಾಗಿ ಪೋಲಿಸರ ಕಾರ್ಯವನ್ನು ಮೆಚ್ಚುತ್ತೇನೆ.‌ ಒಂದು ಪೋಸ್ಟ್ ನಿಂದ ಆಗಿರುವ ಗಲಾಟೆ ಮತ್ತು ಕಾನೂನು ಕೈಗೆ ತೆಗೆದುಕೊಂಡಿದ್ದನು ಕಾಂಗ್ರೆಸ್ ಖಂಡಿಸುತ್ತದೆ. ತಪ್ಪು ಮಾಡಿದವರ ವಿರುದ್ಧ ಪೋಲಿಸರು ನಿರ್ದಾಕ್ಷಿಣ್ಯವಾಗಿ ಕ್ರಮ ತೆಗೆದುಕೊಳ್ಳಲಿ ಆದರೆ ಅಮಾಯಕರಿಗೆ ತೊಂದರೆಯಾಗದಂತೆ ಹಾಗೂ ಅಂತವರ ವಿರುದ್ಧ ಕೇಸ್ ಹಾಕುವುದನ್ನು ಪೋಲಿಸರು ಕೈಬಿಡಬೇಕೆಂದು ಆಗ್ರಹಿಸಿದರು. 

ಹುಬ್ಬಳ್ಳಿ ಗಲಾಟೆಗೆ ಸಂಬಂಧಿಸಿದಂತೆ ಮೌಲ್ವಿಯೊಬ್ಬರು ಪೋಲಿಸರ ಕಾರಿನ ಮೇಲೆ ನಿಂತು ಪ್ರಚೋನಾತ್ಮಕ ಭಾಷಣ ಮಾಡುತ್ತಿದ್ದ ವೇಳೆ ಹು-ಧಾ ಮಹಾನಗರ ಜಿಲ್ಲಾ ಅಧ್ಯಕ್ಷ ಅಲ್ತಾಫ್ ಹಳ್ಳೂರು ಕೂಡಾ ಇದ್ದರು ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ತಮ್ಮ ಪಕ್ಷದ ಮುಖಂಡರು ತಪ್ಪು ಮಾಡಿದರೇ ಈಗಲೇ ಅವರನ್ನು ಬಂಧಿಸಲಿ ಹಳ್ಳೂರು ಅವರು ಸಮೂದಾಯದವರನ್ನು ಕಾರಿನ ಮೇಲೆ ಹತ್ತಿ ಮೈಕ್ ಹಿಡಿದು ಗಲಾಟೆ ಮಾಡಬೇಡಿ ಪ್ರಚೋದನೆ ಮಾಡಬೇಡಿ ಎಂದು ಮನವಿ ಮಾಡುತ್ತಿದ್ದರು ಹೊರತು ಅವರು ಪ್ರಚೋದನೆ ನೀಡಿರಲಿಲ್ಲ. ಆದರೆ ಪರಿಸ್ಥಿತಿ ಕೈ ಮೀರಿ ಹೋದಾಗ ಅವರ ಕೈಗೆ, ಬೆನ್ನಿಗೆ ಹೊಡೆತ ಬಿದ್ದಿದೆ ಎಂದು ಸಮರ್ಥಿಸಿಕೊಂಡರು.

ಹುಬ್ಬಳ್ಳಿ ಗಲಭೆಯನ್ನು ಬಿಜೆಪಿ ರಾಜಕೀಯವಾಗಿ ಬಳಸಿಕೊಳ್ಳುತ್ತಿದ್ದಾರೆ ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿ, ಬಿಜೆಪಿಯವರು ಇರಲಿ, ಕಾಂಗ್ರೆಸ್ ನವರು ಇರಲಿ ಘಟನೆಯನ್ನು ರಾಜಕೀಯವಾಗಿ ಬಳಸಿಕೊಳ್ಳಬಾರದು, ಹುಬ್ಬಳ್ಳಿ ಶಾಂತವಾಗಬೇಕು. ಉದ್ಯೋಗ ಹೆಚ್ಚಬೇಕು ಎಂಬುದು ನಮ್ಮ ಬಯಕೆಯಾಗಿದೆ ಎಂದರು.