ಜೆಡಿಎಸ್ ಪಂಚರತ್ನ ರಥಯಾತ್ರೆ ಮತ್ತೆ ಮುಂದೂಡಿಕೆ

ಬೆಂಗಳೂರು,ನ.13- ಜೆಡಿಎಸ್‍ನ ಮಹತ್ವದ ಪಂಚರತ್ನ ರಥಯಾತ್ರೆಗೆ ಮತ್ತೆ ಮಳೆ ಅಡ್ಡಿಯಾಗಿದ್ದು, ನಾಳೆ ಪ್ರಾರಂಭವಾಗಬೇಕಿದ್ದ ಈ ಯಾತ್ರೆಯನ್ನು ನ.19ಕ್ಕೆ ಮುಂದೂಡಲಾಗಿದೆ. ಕಳೆದ ಎರಡು ದಿನಗಳಿಂದ ಜಿಟಿ ಜಿಟಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಪಂಚರತ್ನ ರಥಯಾತ್ರೆಯನ್ನು ಮುಂದೂಡಲಾಗಿದೆ.
ನವೆಂಬರ್ ಒಂದರಿಂದ ಪ್ರಾರಂಭ ಮಾಡಲು ಎಲ್ಲಾ ರೀತಿಯ ಸಿದ್ಧತೆ ನಡೆಸಲಾಗಿತ್ತು. ಮುಳಬಾಗಿಲುವಿನ ಕುರುಡುಮಲೆ ಮಹಾಗಣಪತಿ ದೇವಾಲಯದಲ್ಲಿ ವಿಶೇಷ ಪೂಜೆ ಹಾಗೂ ಹೋಮ ನಡೆಸಲಾಗಿತ್ತು. ಪಂಚರತ್ನ ರಥಗಳಿಗೆ ಚಾಲನೆ ನೀಡಿ ಬಹಿರಂಗ ಸಮಾವೇಶ ಪ್ರಾರಂಭಿಸುವ ವೇಳೆಗೆ ಅಂದು ಸಹ ಜಿಟಿ ಜಿಟಿ ಮಳೆ ಆರಂಭವಾಗಿತ್ತು. ಮಳೆಯಿಂದಾಗಿ ಮುಳಬಾಗಿಲುವಿನಲ್ಲಿ ನಡೆಸಬೇಕಿದ್ದ ಬಹಿರಂಗ ಸಮಾವೇಶವನ್ನು ರದ್ದುಪಡಿಸಿ ರಥಯಾತ್ರಯನ್ನು ಒಂದು ವಾರ ಮುಂದೂಡಲಾಗಿತ್ತು.
ಮಳೆ ಬಿಡುವು ಕೊಟ್ಟಿದ್ದ ಹಿನ್ನೆಲೆಯಲ್ಲಿ ನಾಳೆಯಿಂದ ಪಂಚರತ್ನ ರಥಯಾತ್ರೆ ಆರಂಭಿಸಲು ಸಕಲ ಸಿದ್ಧತೆ ಮಾಡಲಾಗಿತ್ತು. ಆದರೆ, ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾದ ಪರಿಣಾಮದಿಂದ ಕೋಲಾರ ಸೇರಿದಂತೆ ಯಾತ್ರೆ ಸಾಗುವ ಕ್ಷೇತ್ರಗಳಲ್ಲಿ ನಿರಂತರ ಮಳೆಯಾಗುತ್ತಿರುವುದರಿಂದ ಮತ್ತೆ ಒಂದು ವಾರ ಮುಂದೂಡಲಾಗಿದೆ. ನವೆಂಬರ್ 19ರಿಂದ ಪಂಚರತ್ನ ರಥಯಾತ್ರೆ ಪ್ರಾರಂಭಿಸಲು ಜೆಡಿಎಸ್ ವರಿಷ್ಠರು ತೀರ್ಮಾನಿಸಿದ್ದಾರೆ.
ಈ ರಥಯಾತ್ರೆ ಪ್ರಾರಂಭದ ದಿನವೇ ಸಮಾವೇಶ ನಡೆಸಿ ಮುಂಬರುವ ವಿಧಾನಸಭೆ ಚುನಾವಣೆಯ 90 ಅಭ್ಯರ್ಥಿಗಳ ಮೊದಲ ಪಟ್ಟಿ ಪ್ರಕಟಿಸಲು ಉದ್ದೇಶಿಸಲಾಗಿತ್ತು. ಪಂಚರತ್ನ ರಥಯಾತ್ರೆ ಯಶಸ್ವಿಗೊಳಿಸುವ ಹೊಣೆಗಾರಿಕೆಯನ್ನು ಆಯಾ ಕ್ಷೇತ್ರದ ಸಂಭವನೀಯ ಅಭ್ಯರ್ಥಿಗೆ ವಹಿಸಲಾಗಿದೆ. ಜೆಡಿಎಸ್‍ನಿಂದ ಸ್ರ್ಪಧಿಸಿ ಚುನಾಯಿತರಾದ ಮೇಲೆ ಯಾವುದೇ ಕಾರಣಕ್ಕೂ ಆಸೆ, ಆಮಿಷಕ್ಕೆ ಒಳಗಾಗಿ ಪಕ್ಷಾಂತರ ಮಾಡುವುದಿಲ್ಲ ಎಂಬ ಪ್ರಮಾಣ ವಚನವನ್ನು ಸಂಭವನೀಯ ಅಭ್ಯರ್ಥಿಗಳು ಸ್ವೀಕರಿಸಬೇಕಾಗುತ್ತದೆ.
2023ರ ಚುನಾವಣೆಯಲ್ಲಿ 123 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿ ಸ್ವಂತ ಶಕ್ತಿಯ ಮೇಲೆ ಅಕಾರಕ್ಕೆ ಬರಬೇಕು ಎಂಬ ಗುರಿ ಹೊಂದಿರುವ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಕುರುಡುಮಲೆಯಿಂದ ಚುನಾವಣಾ ಪ್ರಚಾರವನ್ನು ಕೈಗೊಳ್ಳುತ್ತಿದ್ದಾರೆ.
ಈ ರಥಯಾತ್ರೆ ಸಂದರ್ಭದಲ್ಲಿ ಗ್ರಾಮವಾಸ್ತವ್ಯ ಮಾಡಿ ಜನಾಭಿಪ್ರಾಯ ಸಂಗ್ರಹಿಸಲಿದ್ದಾರೆ. ಜತೆಗೆ ಪಂಚರತ್ನ ಯೋಜನೆಯ ಬಗ್ಗೆ ಜನ ಜಾಗೃತಿ ಮೂಡಿಸಲಾಗುತ್ತದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ನ.19ರಿಂದ ಆರಂಭವಾಗುವ ಪಂಚರತ್ನ ರಥಯಾತ್ರೆಯು ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ತುಮಕೂರು ಜಿಲ್ಲೆಗಳ ವಿಧಾನಸಭಾ ಕ್ಷೇತ್ರಗಲ್ಲಿ ಪ್ರವಾಸ ಮಾಡಲಿದೆ. ಮೊದಲ ಹಂತದ ಈ ಯಾತ್ರೆಯು ಒಟ್ಟು 23 ದಿನಗಳ ಕಾಲ ನಡೆಯಲಿದೆ ಎಂದು ಪಕ್ಷದ ಮೂಲಗಳು ಹೇಳಿವೆ.