ನವೆಂಬರ್‌ 6ರಂದು ಟಿಇಟಿ ಪರೀಕ್ಷೆ: ಕಟ್ಟುನಿಟ್ಟಿನ ನಿಯಮಗಳ ಬಗ್ಗೆ ಇಲ್ಲಿದೆ ವಿವರ

ನವೆಂಬರ್‌ 6ರಂದು ಟಿಇಟಿ ಪರೀಕ್ಷೆ: ಕಟ್ಟುನಿಟ್ಟಿನ ನಿಯಮಗಳ ಬಗ್ಗೆ ಇಲ್ಲಿದೆ ವಿವರ

ಧಾರವಾಡ, ನವೆಂಬರ್‌, 05: ಕರ್ನಾಟಕ ಟಿಇಟಿ ಪರೀಕ್ಷೆಯು ನವೆಂಬರ್ 06ರಂದು ನಡೆಯಲಿದೆ. ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರ ನಿರ್ದೇಶನದಂತೆ ಪರೀಕ್ಷೆ ಸುಸೂತ್ರವಾಗಿ ನಡೆಸಲು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಹಾಗೂ ಪೋಲೀಸ್ ಆಯುಕ್ತರನ್ನೊಳಗೊಂಡ ಜಿಲ್ಲಾ ತ್ರಿಸದಸ್ಯ ಸಮಿತಿ ರಚಿಸಲಾಗಿದೆ ಎಂದು ಧಾರವಾಡ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು ತಿಳಿಸಿದ್ದಾರೆ.

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉಪನಿರ್ದೇಶಕ ಎಸ್.ಎಸ್.ಕೆಳದಿಮಠ ಅವರನ್ನು ಟಿಇಟಿ ಪರೀಕ್ಷೆಗೆ ಜಿಲ್ಲೆಯಲ್ಲಿ ನೋಡಲ್ ಅಧಿಕಾರಿಯನ್ನಾಗಿ ನೇಮಿಸಲಾಗಿದೆ. ಮಾರ್ಗಸೂಚಿಗಳಂತೆ ಪರೀಕ್ಷೆಯನ್ನು ಶಾಂತಿಯುತವಾಗಿ ಮತ್ತು ಸುಸೂತ್ರವಾಗಿ ನಡೆಸಲು ಸಕಲ ಪೂರ್ವ ಸಿದ್ಧತೆಯನ್ನು ಮಾಡಿಕೊಳ್ಳಲಾಗಿದೆ.

ಮಾರ್ಗಸೂಚಿಯಂತೆ ಪರೀಕ್ಷೆಗೆ ಸಿದ್ಧತೆ

ಈಗಾಗಲೇ ಅಕ್ಟೊಬರ್ 31ರಂದು ಎಲ್ಲ 33 ಪರೀಕ್ಷಾ ಕೇಂದ್ರಗಳ ಮುಖ್ಯ ಅಧೀಕ್ಷಕರು, ಮಾರ್ಗಾಧಿಕಾರಿಗಳು ಅಲ್ಲದೇ ಸ್ಥಾನಿಕ ಜಾಗೃತ ದಳದವರ ಸಭೆಯನ್ನು ನಡೆಸಲಾಗಿದೆ. ಪರೀಕ್ಷೆಯನ್ನು ಕರ್ನಾಟಕ ಟಿಇಟಿ-2022ರ ಪರೀಕ್ಷಾ ಮಾರ್ಗಸೂಚಿಯಂತೆ ನಡೆಸಲು ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ.‌ ಅವಳಿ ನಗರದಲ್ಲಿ ಒಟ್ಟು 33 ಪರೀಕ್ಷಾ ಕೇಂದ್ರಗಳಿದ್ದು, ಧಾರವಾಡದಲ್ಲಿ 27 ಮತ್ತು ಹುಬ್ಬಳ್ಳಿಯಲ್ಲಿ 06 ಪರೀಕ್ಷಾ ಕೇಂದ್ರಗಳಿವೆ. ಬೆಳಗಿನ ಪರೀಕ್ಷೆ 9:30 ರಿಂದ 12 ಗಂಟೆಯವರೆಗೆ ನಡೆಯಲಿದ್ದು, ಮಧ್ಯಾಹ್ನದ ಪರೀಕ್ಷೆ 2 ಗಂಟೆಯಿಂದ 4:30 ರವರೆಗೆ ನಡೆಯುತ್ತದೆ.

ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳ ಸಂಖ್ಯೆ

ಬೆಳಗ್ಗೆ 7,206 ಅಭ್ಯರ್ಥಿಗಳು ಮತ್ತು ಮಧ್ಯಾಹ್ನ 2,630 ಪರೀಕ್ಷಾರ್ಥಿಗಳು ಸೇರಿದಂತೆ ಒಟ್ಟು 9,809 ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗುವರು ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ. ಅಭ್ಯರ್ಥಿಗಳು ಪರೀಕ್ಷೆ ಪ್ರಾರಂಭವಾಗುವ ಅರ್ಧ ಗಂಟೆ ಮುಂಚಿತವಾಗಿ ನಿಗದಿತ ಪರೀಕ್ಷಾ ಕೇಂದ್ರದಲ್ಲಿ ಹಾಜರಿರಬೇಕು. ಯಾವುದೇ ಕಾರಣಕ್ಕೂ ಮೋಬೈಲ್, ಪುಸ್ತಕ, ಹಾಳೆ, ಲಾಗ್ ಟೇಬಲ್, ಕ್ಯಾಲ್‌ಕ್ಲೇಟರ್, ಎಲೆಕ್ಟ್ರಾನಿಕ್ ಉಪಕರಣಗಳನ್ನು ಅಭ್ಯರ್ಥಿಗಳು ಪರೀಕ್ಷಾ ಕೇಂದ್ರಕ್ಕೆ ತರುವುದನ್ನು ನಿಷೇಧಿಸಲಾಗಿದೆ. ಅಲ್ಲದೇ ಅಭ್ಯರ್ಥಿಗಳು ಶೂ ಮತ್ತು ಬೆಲ್ಟ್ ಧರಿಸಿ ಬರುವುದನ್ನು ನಿಷೇಧಿಸಿದೆ. ಪ್ರವೇಶ ಪತ್ರದಲ್ಲಿ ಅಭ್ಯರ್ಥಿಯ ಸಹಿ ಮತ್ತು ಭಾವಚಿತ್ರ ಪ್ರಕಟವಾಗದಿರುವ ಅಥವಾ ಭಾವಚಿತ್ರ ವ್ಯತ್ಯಾಸವಿರುವ ಅಭ್ಯರ್ಥಿಯು ತನ್ನೊಂದಿಗೆ ಆನಲೈನ್ ಅರ್ಜಿ, ತಮ್ಮ ಇತ್ತೀಚಿನ ಭಾವಚಿತ್ರ ಮತ್ತು ಇನ್ಯಾವುದೇ ಅಧೀಕೃತ ಗುರುತಿನ ಚೀಟಿಯನ್ನು ಪರೀಕ್ಷಾ ಕೇಂದ್ರದ ಅಧಿಕಾರಿಗಳಿಗೆ ತೋರಿಸಬೇಕು.

ಬೆಳಗಿನ ಪರೀಕ್ಷೆ ಹುಬ್ಬಳ್ಳಿಯಲ್ಲಿ ಇರುವುದಿಲ್ಲ. ಮಧ್ಯಾಹ್ನದ ಪರೀಕ್ಷೆ ಧಾರವಾಡ ಮತ್ತು ಹುಬ್ಬಳ್ಳಿಯಲ್ಲಿ ಇರುತ್ತದೆ. ಪ್ರತಿ ಪರೀಕ್ಷಾ ಕೇಂದ್ರಕ್ಕೆ ಪೋಲೀಸ್ ಸಿಬ್ಬಂದಿಯವರನ್ನು ನಿಯೋಜಿಸಲಾಗಿದೆ. ಪರೀಕ್ಷಾ ಕೇಂದ್ರಗಳಲ್ಲಿ ಸಿ.ಸಿ ಕ್ಯಾಮರಾ ಅಳವಡಿಸಲಾಗಿದೆ. ಪರೀಕ್ಷಾ ಕೇಂದ್ರದ ಸುತ್ತಲೂ 144ನೇ ಕಲಂ ಜಾರಿಯಲ್ಲಿ ಇರುವುದರಿಂದ 200 ಮೀಟರ್ ಪ್ರದೇಶವು ನಿಷೇಧಿತ ಪ್ರದೇಶ ಆಗಿರುತ್ತದೆ ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು ತಿಳಿಸಿದ್ದಾರೆ.