ಬಿಜೆಪಿ - ಜೆಡಿಎಸ್‍ ಸೇರಿ ನನ್ನ ವಿರುದ್ಧ ದೆಹಲಿಯಲ್ಲಿ ಷಡ್ಯಂತ್ರ ಮಾಡುತ್ತಿದ್ದಾರೆ: ಡಿಕೆಶಿ

ಬಿಜೆಪಿ - ಜೆಡಿಎಸ್‍ ಸೇರಿ ನನ್ನ ವಿರುದ್ಧ ದೆಹಲಿಯಲ್ಲಿ ಷಡ್ಯಂತ್ರ ಮಾಡುತ್ತಿದ್ದಾರೆ: ಡಿಕೆಶಿ

ಬೆಂಗಳೂರು,ಡಿ.29- ನನ್ನ ವಿರುದ್ಧ ಬಿಜೆಪಿ ಮತ್ತು ಜೆಡಿಎಸ್‍ನವರು ಸೇರಿ ದೆಹಲಿಯಲ್ಲಿ ಷಡ್ಯಂತ್ರ ಮಾಡುತ್ತಿದ್ದಾರೆ. ನನಗೆ ಎಲ್ಲ ಮಾಹಿತಿಯೂ ದೊರೆತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾರು, ಯಾವುದೇ ಷಡ್ಯಂತ್ರ ಮಾಡಿದರೂ ನಮ್ಮ ಪಾದಯಾತ್ರೆ ನಿಲ್ಲುವುದಿಲ್ಲ. ಯಾವುದೇ ಕಾರಣಕ್ಕೂ ಪಾದಯಾತ್ರೆಯಿಂದ ಹಿಂದೆ ಹೆಜ್ಜೆ ಇಡುವುದಿಲ್ಲ. ಅವರು ತಡೆದರೂ ಮುನ್ನಡೆಯುತ್ತೇವೆ. ಇದಕ್ಕಾಗಿ ಜೀವ ಹೋದರೂ ಪರವಾಗಿಲ್ಲ ಎಂದರು.

ನಾನು ಕಲ್ಲು ನುಂಗಿದ್ದೀನಿ, ಕಬ್ಬಿಣ ನುಂಗಿದ್ದೀನಿ ಎಂಬೆಲ್ಲ ಆರೋಪಗಳನ್ನು ಮಾಡಿದ್ದಾರೆ, ಅವರ ಅವಧಿಯಲ್ಲಿ ತನಿಖೆ ಕೂಡ ನಡೆದಿದೆ. ಮೊನ್ನೆ ದೆಹಲಿಗೆ ಹೋಗಿ ಏನೆಲ್ಲಾ ಮಾತನಾಡಿದ್ದಾರೆ ಎಂಬುದು ಗೊತ್ತಿದೆ ಎಂದು ಹೇಳಿದರು.

ಪಾದಯಾತ್ರೆಗೆ ನನಗೆ ಯಾವ ಅನುಮತಿಯೂ ಬೇಕಿಲ್ಲ. ನನ್ನ ಕಾಲು ನಾನು ನಡೆಯುತ್ತೇನೆ. ಜ.9ರಿಂದ ಪಾದಯಾತ್ರೆ ಆರಂಭವಾಗಲಿದೆ. 19ರವರೆಗೂ ನಡೆಯಲಿದೆ. ನಮ್ಮ ಪಕ್ಷದ ಶಾಸಕರು ಜೊತೆಯಲ್ಲಿರುತ್ತಾರೆ. ಇದು ಪಕ್ಷಾತೀತವಾದ ಹೋರಾಟ. ಜೆಡಿಎಸ್‍ನವರು, ಬಿಜೆಪಿಯವರು ಬಂದು ಭಾಗವಹಿಸಬಹುದು ಎಂದರು.

ಚಲನಚಿತ್ರದವರನ್ನು, ಸ್ವಾಮೀಜಿಗಳನ್ನು ಆಹ್ವಾನಿಸಿದ್ದೇನೆ. ಸಂಘಸಂಸ್ಥೆಗಳು ಪಕ್ಷಾತೀತವಾಗಿ ಹೋರಾಟ ಮಾಡಿದರೆ ಭಾಗವಹಿಸುತ್ತಿದ್ದೆ ಎಂದು ಕುಮಾರಸ್ವಾಮಿಯವರು ಹೇಳಿದ್ದಾರೆ. ಇದು ಪಕ್ಷಾತೀತವಾದ ಹೋರಾಟ. ಅವರು ಬಂದೂ ಸೇರಿಕೊಳ್ಳಲಿ. ನನ್ನ ಒಬ್ಬನ ಹಿತಾಸಕ್ತಿಗಾಗಿ ಹೋರಾಟ ಮಾಡುತ್ತಿಲ್ಲ. ಕುಡಿಯುವ ನೀರು ಮತ್ತು ಬೇಸಾಯಕ್ಕಾಗಿ ಹೋರಾಟ ಮಾಡುತ್ತಿದ್ದೇವೆ. ನಾವು ಏನಾದರೂ ತಪ್ಪು ಮಾಡುತ್ತಿದ್ದರೆ ಕುಮಾರಸ್ವಾಮಿ ತಿದ್ದಲ್ಲಿ ಎಂದು ಹೇಳಿದರು.

ಕೊಡಗಿನಲ್ಲಿ ನಾನು ಪೂಜೆ ಮಾಡುವಾಗ ಧರಿಸಿದ್ದ ಉಡುಪುಗಳ ಬಗ್ಗೆ ಕುಮಾರಸ್ವಾಮಿ ಅವರು ಟೀಕಿಸಿದ್ದಾರೆ. ಅವರು ಪ್ರಮಾಣ ವಚನಕ್ಕೆ ಹಾಕಿದ್ದ ಮಾದರಿಯ ಪಂಚೆಯನ್ನೇ ನಾನು ಪೂಜೆಗೆ ಧರಿಸಿದ್ದೆ. ಈ ಹಿಂದೆ ಕುಮಾರಸ್ವಾಮಿ ಅವರ ಜೊತೆಯಲ್ಲೇ ಪೂಜೆ ಮಾಡಿದ್ದೆ. ನಾನು ನಟನೆ ಮಾಡುತ್ತಿದ್ದೀನಿ ಎಂದು ಅವರು ಹೇಳಿದ್ದಾರೆ. ನಾನು ನಟನಲ್ಲ. ಚಿತ್ರಮಂದಿರಗಳ ಮಾಲೀಕನಷ್ಟೆ.

ಅವರ ಹೇಳಿಕೆಗಳಿಗೆ ಪ್ರತಿ ಹೇಳಿಕೆ ನೀಡಿ ಸ್ರ್ಪಧಿಸುವ ಶಕ್ತಿ ನನ್ನಲ್ಲಿ ಇಲ್ಲ. ಅವರು ಹೇಳಿದ್ದನೆಲ್ಲ ನನ್ನನ್ನು ತಿದ್ದಲು ಆಡಿರುವ ಮಾತುಗಳು ಎಂದು ಭಾವಿಸುತ್ತೇನೆ. ನನ್ನ ಒಳ್ಳೆಯದಕ್ಕೆ ಮಾತನಾಡುತ್ತಿದ್ದೇನೆ ಎಂದುಕೊಳ್ಳುತ್ತೇನೆ. ನನಗೂ ವಯಸ್ಸಾಗಿದೆ, ಗಡ್ಡ ಬೆಳಗಾಗಿದೆ. ಅವರಿಗೆ ಇನ್ನು ವಯಸ್ಸಿದೆ ಎಂದು ತಿರುಗೇಟು ನೀಡಿದರು.

ಕಾಂಗ್ರೆಸ್ ಪಾದಯಾತ್ರೆ ಬಗ್ಗೆ ಎಚ್.ಡಿ.ಕುಮಾರಸ್ವಾಮಿ ಅವರು ಲೇವಡಿ ಮಾಡಿದ್ದಾರೆ. ಅವರು ಹಿರಿಯರು, ಬುದ್ದಿವಂತರು, ಅವರ ಕುಟುಂಬವೇ ಹೋರಾಟಗಾರರದ್ದು, ಜೊತೆಗೆ ಚಲನಚಿತ್ರ ನಿರ್ಮಾಪಕರೂ ಆಗಿರುವುದರಿಂದ ಎಲ್ಲವೂ ಗೊತ್ತಿದೆ. ನನ್ನದು ಭೂಮಿ ಇದೆ. ಈ ನಾಡ ಹಿತಕ್ಕಾಗಿ ಹೋರಾಟ ಮಾಡುತ್ತಿದ್ದೇವೆ.

ಕುಮಾರಸ್ವಾಮಿ ಅವರು ಟ್ವೀಟ್ ಮಾಡಿರುವುದರಿಂದ ನಾವು ಉತ್ತರ ಕೊಡಬೇಕಿದೆ. ಟ್ವೀಟ್‍ನಲ್ಲಿ ಸಾಕಷ್ಟು ಸಾಹಿತ್ಯವಿದೆ. ನಾವು ಸಾಹಿತ್ಯ ಕಲಿತುಕೊಳ್ಳಬೇಕು. ಚುನಾವಣೆಯಲ್ಲಿ ಸೋಲು-ಗೆಲುವು ಬೇರೆ, ಆದರೆ ಹೋರಾಟ ನಮ್ಮದು ನಿರಂತರ ಎಂದರು.