ಚಿರತೆ ಕಾರ್ಯಾಚರಣೆಗೆ ಡ್ರೋಣ್ ಕ್ಯಾಮರಾ ಬಳಕೆ.
ಧಾರವಾಡ ತಾಲೂಕಿನ ಕವಲಗೇರಿ ಗ್ರಾಮದ ಕಬ್ಬಿನ ಗದ್ದೆಯಲ್ಲಿ ಅವಿತು ಕುಳಿತಿರುವ ಚಿರತೆ ಕಾರ್ಯಾಚರಣೆಗೆ ಅರಣ್ಯ ಇಲಾಖೆ ಸಿಬ್ಬಂದಿ ಇದೀಗ ಡ್ರೋಣ್ ಕ್ಯಾಮೆರಾ ಬಳಕೆ ಮಾಡುತ್ತಿದ್ದಾರೆ. ಒಂದೆಡೆ ಚಿರತೆ ಹೆಜ್ಜೆ ಗುರುತು ಕೂಡ ಪತ್ತೆಯಾಗಿದೆ. ಕವಲಗೇರಿಯಲ್ಲಿ ಕಳೆದ ಎರಡ್ಮೂರು ದಿನಗಳಿಂದ ಚಿರತೆ ಸೆರೆಹಿಡಿಯುವುದಕ್ಕಾಗಿ ಕಾರ್ಯಾಚರಣೆ ನಡೆಸುತ್ತಿದ್ದರೂ ಇದುವರೆಗೂ ಅದು ಪತ್ತೆಯಾಗಿಲ್ಲ. ಹೊಲದ ಮಾಲೀಕರು ಮಾತ್ರ ತಮ್ಮ ಕಣ್ಣಿಗೆ ಚಿರತೆ ಕಾಣಿಸಿಕೊಂಡಿದೆ ಎನ್ನುತ್ತಿದ್ದು, ಅರಣ್ಯ ಇಲಾಖೆ ಸಿಬ್ಬಂದಿಗೆ ಮಾತ್ರ ಇದುವರೆಗೂ ಅದು ಕಾಣಿಸಿಕೊಂಡಿಲ್ಲ. ಆದರೆ, ಕಬ್ಬಿನ ಗದ್ದೆಯಲ್ಲಿ ಚಿರತೆಯ ಹೆಜ್ಜೆ ಗುರುತು ಮಾತ್ರ ಕಂಡು ಬಂದಿದೆ. ನಿನ್ನೆ ತಡರಾತ್ರಿವರೆಗೂ ಚಿರತೆ ಸೆರೆ ಹಿಡಿಯುವುದಕ್ಕಾಗಿ ಅರಣ್ಯ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದರೂ ಅದು ಪತ್ತೆಯಾಗಿರಲಿಲ್ಲ. ಇಂದು ಡ್ರೋಣ್ ಕ್ಯಾಮೆರಾ ಮೂಲಕ ಚಿರತೆ ಪತ್ತೆಗಾಗಿ ಸಿಬ್ಬಂದಿ ಮುಂದಾಗಿದ್ದು, ಡ್ರೋಣ್ ಕ್ಯಾಮೆರಾದಲ್ಲೂ ಚಿರತೆ ಕಾಣಿಸಿಕೊಂಡಿಲ್ಲ. ಸ್ಥಳದಲ್ಲೇ ಅರಣ್ಯ ಇಲಾಖೆಯವರು ಬೀಡು ಬಿಟ್ಟಿದ್ದು, ಕಾರ್ಯಾಚರಣೆ ಮುಂದುವರೆದಿದೆ.