ಕಾಲೇಜು ಪ್ರಾಂಶುಪಾಲರು-ಉಪನ್ಯಾಸಕರು ಬೋಧನೆ ಅವಧಿಯಲ್ಲಿ ಜೀನ್ಸ್​ ಪ್ಯಾಂಟ್​-ಟಿ ಶರ್ಟ್​​ ಧರಿಸದಂತೆ ಆದೇಶ; ಮುಂದಾ?

ಕಾಲೇಜು ಪ್ರಾಂಶುಪಾಲರು-ಉಪನ್ಯಾಸಕರು ಬೋಧನೆ ಅವಧಿಯಲ್ಲಿ ಜೀನ್ಸ್​ ಪ್ಯಾಂಟ್​-ಟಿ ಶರ್ಟ್​​ ಧರಿಸದಂತೆ ಆದೇಶ; ಮುಂದಾ?

ಮೈಸೂರು: ಕಾಲೇಜುಗಳ ಪ್ರಾಂಶುಪಾಲರು-ಉಪನ್ಯಾಸಕರು ಹಾಗೂ ಬೋಧಕೇತರ ಸಿಬ್ಬಂದಿ ತಮ್ಮ ಕರ್ತವ್ಯದ ಅವಧಿಯಲ್ಲಿ ಜೀನ್ಸ್​ ಪ್ಯಾಂಟ್​ ಹಾಗೂ ಟಿ-ಶರ್ಟ್ ಧರಿಸುವಂತಿಲ್ಲ. ಮೈಸೂರು ಜಿಲ್ಲೆಗೆ ಸೀಮಿತವಾಗಿ ನಿನ್ನೆ ಹೀಗೊಂದು ಆದೇಶವನ್ನು ಹೊರಡಿಸಲಾಗಿತ್ತು.

ಪ್ರಾಂಶುಪಾಲರು-ಉಪನ್ಯಾಸಕರು ಈ ಆದೇಶದಿಂದಾಗಿ 'ಮುಂದೇನು?' ಎಂದು ಯೋಚನೆ ಮಾಡುತ್ತಿರುವಷ್ಟರಲ್ಲೇ ಮಹತ್ವದ ಬೆಳವಣಿಗೆಯೊಂದು ಆಗಿಬಿಟ್ಟಿದೆ.

ಮೈಸೂರು ಜಿಲ್ಲೆಯ ಕಾಲೇಜುಗಳ ಪ್ರಾಂಶುಪಾಲರು-ಉಪನ್ಯಾಸಕರು ಹಾಗೂ ಬೋಧಕೇತರ ಸಿಬ್ಬಂದಿ ಕರ್ತವ್ಯ ವೇಳೆಯಲ್ಲಿ ಜೀನ್ಸ್ ಪ್ಯಾಂಟ್, ಟಿ-ಶರ್ಟ್ ಧರಿಸದಂತೆ ನಿರ್ಬಂಧ ವಿಧಿಸಿ ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕರು ನಿನ್ನೆ ಆದೇಶ ಹೊರಡಿಸಿದ್ದರು. ಡಿಡಿಪಿಯು ಹೊರಡಿಸಿದ್ದ ಈ ಆದೇಶಕ್ಕೆ ಉಪನ್ಯಾಸಕರ ವಲಯದಲ್ಲಿ ಭಾರಿ ವಿರೋಧ ವ್ಯಕ್ತವಾಗಿತ್ತು. ಕೆಲವರು ಈ ವಿಚಾರವನ್ನು ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್​ ಅವರ ಗಮನಕ್ಕೂ ತಂದಿದ್ದರು.

ಹೀಗೆ ಆದೇಶ ಹೊರಬಿದ್ದ 24 ಗಂಟೆಗಳಲ್ಲೇ ಅದನ್ನು ಹಿಂಪಡೆಯಲಾಗಿದೆ. ಉಡುಗೆ-ತೊಡುಗೆ ಸಂಬಂಧ ನಿರ್ಬಂಧ ವಿಧಿಸಿ ಆದೇಶ ಹೊರಡಿಸಿದ ಕುರಿತು ಜಿಲ್ಲಾಧಿಕಾರಿಯವರು ಡಿಡಿಪಿಐ ಅವರಿಗೆ ಕರೆ ಮಾಡಿ ವಿಚಾರಿಸಿಕೊಂಡ ಬೆನ್ನಿಗೇ ಅವರು ಆದೇಶವನ್ನು ಹಿಂಪಡೆದಿದ್ದಾರೆ.

ಜಿಲ್ಲಾಧಿಕಾರಿಯವರು ಕರೆ ಮಾಡಿ ವಿಚಾರಿಸಿದರು. ಆದೇಶ ವಾಪಸ್ ಪಡೆದಿರುವ ಮಾಹಿತಿಯನ್ನು ಅವರಿಗೂ ನೀಡಿದ್ದೇನೆ. ತರಗತಿಯಲ್ಲಿ ಶಿಸ್ತು ಮೂಡಿಸುವ ಉದ್ದೇಶದಿಂದ ಈ ಆದೇಶ ಹೊರಡಿಸಿದ್ದೆ. ಈಗ ಆ ಆದೇಶ ವಾಪಸ್ ಪಡೆದಿದ್ದೇನೆ ಎಂದು ಡಿಡಿಪಿಯು ಶ್ರೀನಿವಾಸಮೂರ್ತಿ ಭಾನುವಾರ ತಿಳಿಸಿದರು