ಭಾರಿ ಮಳೆ ಕಾರಣ 2 ದಿನ ಶಾಲೆಗಳಿಗೆ ರಜೆ ಘೋಷಣೆ: ತಮಿಳುನಾಡು ಸಿಎಂ ಸ್ಟಾಲಿನ್

ಭಾರಿ ಮಳೆ ಕಾರಣ 2 ದಿನ ಶಾಲೆಗಳಿಗೆ ರಜೆ ಘೋಷಣೆ: ತಮಿಳುನಾಡು ಸಿಎಂ ಸ್ಟಾಲಿನ್

ಚೆನ್ನೈ: ತಮಿಳುನಾಡಿನ ಅನೇಕ ಭಾಗದಲ್ಲಿ ಭಾರಿ ಮಳೆಯಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ. ಚೆನ್ನೈ, ತಿರುವಳ್ಳೂರು, ಚೆಂಗಲ್‌ಪೇಟ್ ಮತ್ತು ಕಾಂಚೀಪುರಂ ಜಿಲ್ಲೆಗಳಲ್ಲಿ ತೀವ್ರ ಮಳೆಯಾಗುತ್ತಿದೆ. ಮುಂದಿನ ಎರಡು ದಿನಗಳಲ್ಲಿ ಹೆಚ್ಚಿನ ಮಳೆಯಾಗುವ ಮುನ್ಸೂಚನೆಯಿಂದಾಗಿ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಶಾಲೆಗಳಿಗೆ ಎರಡು ದಿನಗಳ ರಜೆ ಘೋಷಿಸಿದ್ದಾರೆ.

ಚೆನ್ನೈಗೆ ಪ್ರಯಾಣಿಸುವ ಯೋಜನೆ ಹೊಂದಿರುವ ಜನರು ತಮ್ಮ ಪ್ರಯಾಣವನ್ನು ಎರಡು ಅಥವಾ ಮೂರು ದಿನಗಳವರೆಗೆ ಮುಂದೂಡುವಂತೆ ಅವರು ವಿನಂತಿಸಿದ್ದಾರೆ.

ಸ್ಟಾಲಿನ್ ಅವರು ಹಲವಾರು ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಹಾರ ಪ್ರಕ್ರಿಯೆಯ ಮೇಲ್ವಿಚಾರಣೆ ನಡೆಸಿ, ವಿಪತ್ತು ನಿರ್ವಹಣಾ ನಿಯಂತ್ರಣ ಕೊಠಡಿಗೆ ಭೇಟಿ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

ಜನರಿಗೆ ಪರಿಹಾರ ಸಾಮಗ್ರಿಗಳು ಸಿಗುವಂತೆ ನೋಡಿಕೊಳ್ಳಲು, ವಸತಿ ಪ್ರದೇಶಗಳಲ್ಲಿನ ನೀರು ಹೊರಹಾಕಲು ಅಧಿಕಾರಿಗಳಿಗೆ ಆದೇಶ ನೀಡಿರುವುದಾಗಿ ಹೇಳಿದರು. ಎನ್‌ಡಿಆರ್‌ಎಫ್ ತಂಡ, ಪೊಲೀಸ್ ಮತ್ತು ಅಗ್ನಿಶಾಮಕ ಸಿಬ್ಬಂದಿ ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಗಳನ್ನು ನಡೆಸಲು ಹಗಲಿರುಳು ಸಮನ್ವಯದಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ಗ್ರೇಟರ್ ಚೆನ್ನೈ ಕಾರ್ಪೊರೇಶನ್‌ನ ಅಧಿಕಾರಿಗಳು ಕೂಡ ಹಗಲಿರುಳು ಕೆಲಸ ಮಾಡುತ್ತಿದ್ದಾರೆ ಎಂದು ಸ್ಟಾಲಿನ್ ಹೇಳಿದ್ದಾರೆ.

ಚೆನ್ನೈನಲ್ಲಿ ಕಳೆದ 24 ಗಂಟೆಗಳಲ್ಲಿ 20 ಸೆಂ.ಮೀ ಗಿಂತಲೂ ಹೆಚ್ಚು ಮಳೆಯಾಗಿದೆ. ಕರೂರ್, ತಿರುವಳ್ಳೂರು, ನಾಮಕ್ಕಲ್, ಪುದುಕೊಟ್ಟೈ, ಶಿವಗಂಗಾ, ತಿರುಚ್ಚಿ, ವಿರುಧುನಗರ, ರಾಮನಾಥಪುರಂ, ಮಧುರೈ, ಈರೋಡ್ ಜಿಲ್ಲೆಗಳಲ್ಲೂ ಸಹ 20 ಸೆಂ.ಮೀ ಮಳೆಯಾಗಿದೆ.