ಶಿವಮೊಗ್ಗದ ಬಡವರ ವೈದ್ಯ ಡಾ. ಮಂಜಪ್ಪ ನಿಧನ

ಶಿವಮೊಗ್ಗದ ಬಡವರ ವೈದ್ಯ ಡಾ. ಮಂಜಪ್ಪ ನಿಧನ

ಸಾಗರ ಜನವರಿ 23: ಕೇವಲ ಎರಡು ರೂಪಾಯಿ ಪಡೆದು ರೋಗಿಗಳನ್ನು ತಪಾಸಣೆ ಮಾಡುವ ಮೂಲಕ ಶಿವಮೊಗ್ಗದಲ್ಲಿ ಬಡವರ ಪಾಲಿಗೆ ದೇವರಾಗಿದ್ದ ವೈದ್ಯ ಮಂಜಪ್ಪ ನಿಧನರಾಗಿದ್ದಾರೆ. ಮಂಜಪ್ಪ ಡಾಕ್ಟ್ರು ಎಂದು ಪ್ರೀತಿಯಿಂದ ಕರೆಯಲ್ಪಡುವ ಇವರು 60 ವರ್ಷಗಳಿಂದ ಮಲೆನಾಡಿನಲ್ಲಿ ಸಾವಿರಾರು ಜನರ ಜೀವಗಳನ್ನು ಉಳಿಸಿದ್ದಾರೆ.

85 ವರ್ಷ ವಯಸ್ಸಿನ ಡಾ.ಮಂಜಪ್ಪ ಭಾನುವಾರ ಕೊನೆಯುಸಿರೆಳಿದ್ದಾರೆ. ಮಂಜಪ್ಪ ಅವರು ಓರ್ವ ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ.

ಡಾ.ಮಂಜಪ್ಪ ಅವರು ಕಳೆದ ಆರು ದಶಕಗಳಿಂದ ಖಾಸಗಿ ವೈದ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಸಾಗರದ ಜೆ.ಸಿ ರಸ್ತೆಯಲ್ಲಿ ಖಾಸಗಿ ಕ್ಲಿನಿಕ್ ನಡೆಸುತ್ತಾ ಗ್ರಾಮೀಣ ಭಾಗದ ಜನರ ಪಾಲಿಗೆ ದೇವರಾಗಿದ್ದರು. ಡಾ.ಮಂಜಪ್ಪ ಅವರು ರೋಗಿಗಳಿಗೆ ತಪಾಸಣೆಗಾಗಿ ಇಂತಿಷ್ಟೇ ಹಣವನ್ನು ಜಿಗಧಿ ಮಾಡಿರಲಿಲ್ಲ. ಯಾವುದೇ ಫಲಾಪೇಕ್ಷೆ ಇಲ್ಲದೇ ರೋಗಿಗಳ ತಪಾಸಣೆ ಮಾಡುತ್ತಿದ್ದರು. ರೋಗಿಗಳಿಂದ ಎರಡು ರೂಪಾಯನ್ನು ಮಾತ್ರ ಪಡೆದು 'ಎರಡು ರೂಪಾಯಿ ವೈದ್ಯರು' ಎಂದೇ ಈ ಭಾಗದಲ್ಲಿ ಜನಜನಿತರಾಗಿದ್ದರು.

ಜಗತ್ತಿನಲ್ಲಿ ವ್ಯಾಪಾರೀಕರಣವಾದ ವೈದ್ಯಕೀಯ ವೃತ್ತಿಯನ್ನು ಯಾವುದೇ ಫಲಾಪೇಕ್ಷೆ ಇಲ್ಲದೆ ಜನರ ಸೇವೆಗಾಗಿ ಜೀವನವನ್ನು ಮುಡಿಪಾಗಿಟ್ಟವರಲ್ಲಿ ಡಾ.ಮಂಜಪ್ಪ ಅವರು ಕೂಡ ಒಬ್ಬರಾಗಿದ್ದಾರೆ. ಡಾ. ಮಂಜಪ್ಪ ಅವರ ಈ ನಿಸ್ವಾರ್ಥ ಸೇವೆಯನ್ನು ಮೆಚ್ಚಿ ಗೌರವಿಸಲು ಹಲವಾರು ಸಂಘ ಸಂಸ್ಥೆಗಳು ಮುಂದೆ ಬಂದವಾದರೂ ಮಂಜಪ್ಪ ಅವರು ನಯವಾಗಿ ನಿರಾಕರಿಸಿದ್ದರು. ಅತ್ಯಂತ ಸರಳ ಹಾಗೂ ಸದಾ ಲವಲವಿಕೆಯಿಂದ ಡಾ. ಮಂಜಪ್ಪ ವೈದ್ಯಕೀಯ ವೃತ್ತಿಯಲ್ಲೇ ಸಂತೃಪ್ತಿಯನ್ನು ಕಾಣುತ್ತಿದ್ದರು. ಅಂತ್ಯಕ್ರಿಯೆ ಭಾನುವಾರ ಮಾರಿಕಾಂಬಾ ರುಧ್ರಭೂಮಿಯಲ್ಲಿ ನಡೆಯಿತು.