ಚುನಾವಣಾ ಕ್ಷೇತ್ರ ಸ್ಥಿತಿಗತಿ: ಬಬಲೇಶ್ವರಕ್ಕೆ ಬಿಜೆಪಿ ಹುರಿಯಾಳುಗೆ ಹುಡುಕಾಟ

ವಿಜಯಪುರ: ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ, ಹಾಲಿ ಶಾಸಕ ಎಂ.ಬಿ.ಪಾಟೀಲ ಅವರು ಪ್ರತಿನಿಧಿಸುತ್ತಿರುವ ಜಿಲ್ಲೆಯ ಅತ್ಯಂತ್ರ ಪ್ರತಿಷ್ಠಿತ ಕ್ಷೇತ್ರ ಬಬಲೇಶ್ವರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಸೂಕ್ತ ಮತ್ತು ಸಮರ್ಥ ಹುರಿಯಾಳನ್ನು ಕಣಕ್ಕಿಳಿಸಲು ಹುಡುಕಾಟ ಜೋರಾಗಿ ನಡೆಸಿದೆ.
ಎಂ.ಬಿ.ಪಾಟೀಲ ಅವರಿಗೆ ಈ ಹಿಂದಿನ ಮೂರು ಚುನಾವಣೆಯಲ್ಲಿ ಸ್ಪರ್ಧೆ ಒಡ್ಡಿ ಪರಾಜಯವಾಗಿರುವ ಹಾಲಿ ಕರ್ನಾಟಕ ರಾಜ್ಯ ಬೀಜ ಮತ್ತು ಸಾವಯವ ಪ್ರಮಾಣ ಸಂಸ್ಥೆ ಅಧ್ಯಕ್ಷ ವಿಜುಗೌಡ ಪಾಟೀಲ ಅವರೇ ಈ ಬಾರಿಯ ಚುನಾವಣೆಯಲ್ಲೂ ಮುಖಾಮುಖಿಯಾಗಲು ಅಣಿಯಾಗತೊಡಗಿದ್ದಾರೆ. ಆದರೆ, ಬಿಜೆಪಿ ನಡೆಸಿರುವ ಆಂತರಿಕ ಸಮೀಕ್ಷೆಯಲ್ಲಿ ವಿಜುಗೌಡ ಅವರ ಬದಲಿಗೆ ಪರ್ಯಾಯ ಹೊಸ ಮುಖವನ್ನು ಕಣಕ್ಕಿಳಿಸಿ, ಹೇಗಾದರೂ ಮಾಡಿ ಕ್ಷೇತ್ರದಲ್ಲಿ ಕಮಲ ಅರಳಿಸಬೇಕು ಎಂಬ ಬದಲಾವಣೆಯ ಲೆಕ್ಕಾಚಾರದ ಮಾತು ಬಲವಾಗಿ ಕೇಳಿಬರುತ್ತಿದೆ.
ಮೂರು ಬಾರಿ ಸೋತವರಿಗೆ ಟಿಕೆಟ್ ನೀಡುವ ಬದಲು ಹೊಸ ಮುಖಕ್ಕೆ ಟಿಕೆಟ್ ನೀಡಬೇಕು ಎಂಬ ನಿಯಮವನ್ನು ಬಿಜೆಪಿ ವರಿಷ್ಠರು ಕಡ್ಡಾಯವಾಗಿ ಅನುಸರಿಸಿದರೆ ವಿಜುಗೌಡ ಅವರಿಗೆ ಟಿಕೆಟ್ ಅನುಮಾನವಾಗುವ ಸಾಧ್ಯತೆ ದಟ್ಟವಾಗಿದೆ.
ಈ ಕುರಿತು 'ಪ್ರಜಾವಾಣಿ'ಗೆ ಪ್ರತಿಕ್ರಿಯಿಸಿದ ವಿಜುಗೌಡ ಪಾಟೀಲ, 'ಈ ಬಾರಿಯೂ ಬಬಲೇಶ್ವರ ಕ್ಷೇತ್ರದ ಬಿಜೆಪಿ ಟಿಕೆಟ್ ನನಗೆ ಸಿಗುವ ನಿರೀಕ್ಷೆಯಲ್ಲಿದ್ದೇನೆ. ಪಕ್ಷ ಯಾವುದೇ ತೀರ್ಮಾನ ಕೈಗೊಂಡರೂ ಅದಕ್ಕೆ ನಾನು ಬದ್ಧನಿದ್ದೇನೆ' ಎಂದು ಹೇಳಿದರು.
ಹೊಸ ಮುಖ ಸಾಧ್ಯತೆ:
ವಿಜುಗೌಡ ಪಾಟೀಲ ಅವರ ಬದಲಿಗೆ ಅವರದೇ ಸಮುದಾಯಕ್ಕೆ ಸೇರಿದ ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷ ಉಮೇಶ ಕೋಳಕೂರ ಅವರನ್ನು ಕಣಕ್ಕಿಳಿಸಿದರೆ ಹೇಗೆ ಎಂದು ಪಕ್ಷದ ವರಿಷ್ಠರು ಅಳೆದು, ತೂಗತೊಡಗಿದ್ದಾರೆ.
ಒಂದು ಕಾಲದಲ್ಲಿ ಎಂ.ಬಿ.ಪಾಟೀಲರ ನಿಕಟವರ್ತಿಯೂ ಆಗಿರುವ ಹಾಗೂ ಅವರ ಗರಡಿಯಲ್ಲೇ ಪಳಗಿ, ಅವರ ಎಲ್ಲ ರಾಜಕೀಯ ತಂತ್ರಗಳನ್ನು ಹತ್ತಿರದಿಂದ ಬಲ್ಲಂತ ಕೋಳಕೂರ ಅವರನ್ನೇ ಕಣಕ್ಕಿಳಿಸುವುದು ಉತ್ತಮ ಎಂಬ ಅಭಿಪ್ರಾಯ ವ್ಯಕ್ತವಾಗಿದೆ ಎಂದು ಹೆಸರು ಹೇಳಲು ಇಚ್ಛಿಸಿದ ಬಿಜೆಪಿ ಮುಖಂಡರು 'ಪ್ರಜಾವಾಣಿ'ಗೆ ಖಚಿತ ಪಡಿಸಿದ್ದಾರೆ.
ಉಮೇಶ ಕೋಳಕೂರ ಅವರನ್ನು ಕಣಕ್ಕಿಳಿಸುವ ಬಗ್ಗೆ ಸಂಘಪರಿವಾರದವರೂ ಸಹಮತ ವ್ಯಕ್ತಪಡಿಸಿದ್ದು, ಈ ಸಂಬಂಧ ಚುನಾವಣೆಗೆ ಅಗತ್ಯ ತಯಾರಿ ಮಾಡಿಕೊಳ್ಳುವಂತೆ ಪರೋಕ್ಷ ಸಂದೇಶ ರವಾನಿಸಿದ್ದಾರೆ ಎನ್ನಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕೋಳಕೂರ ಅವರು ಕ್ಷೇತ್ರದಲ್ಲಿ ಸುತ್ತಾಟ ಹೆಚ್ಚಿಸಿರುವುದು ಕಂಡುಬರುತ್ತಿದೆ.
ಅಂಗಡಿಯೂ ಪ್ರಯತ್ನ:
ಬಬಲೇಶ್ವರ ಬಿಜೆಪಿ ಟಿಕೆಟ್‌ಗೆ ವಿಜುಗೌಡ ಪಾಟೀಲ ಮತ್ತು ಉಮೇಶ ಕೋಳಕೂರ ಅವರ ನಡುವೆ ಪೈಪೋಟಿ ತೀವ್ರವಾಗಿರುವ ಜೊತೆಗೆ ಬಿಜೆಪಿಯ ಮತ್ತೊಬ್ಬ ಮುಖಂಡ ಗುರುಲಿಂಗಪ್ಪ ಅಂಗಡಿ ಅವರ ಹೆಸರೂ ಹರಿದಾಡುತ್ತಿದೆ. ಅಂಗಡಿ ಅವರ ಪತ್ನಿ ಅವರು ಜಿಲ್ಲಾ ಪಂಚಾಯ್ತಿ ಸದಸ್ಯರಾಗಿಯೂ ಕಾರ್ಯನಿರ್ವಹಿಸಿದ್ದಾರೆ. ಕ್ಷೇತ್ರದಲ್ಲಿ ಪರಿಚಿತರೂ ಆಗಿದ್ದಾರೆ. ಹೀಗಾಗಿ ಅಂಗಡಿ ಕೂಡ ಟಿಕೆಟ್ ಗಿಟ್ಟಿಸಲು ತೆರೆಮರೆಯಲ್ಲಿ ಪ್ರಯತ್ನ ನಡೆಸಿದ್ದಾರೆ.
ಈ ಮೂವರಲ್ಲಿ ಯಾರಿಗೆ ಟಿಕೆಟ್ ಸಿಗಲಿದೆ ಎಂಬುದು ಕುತೂಹಲ ಕೆರಳಿಸಿದೆ. ಆದರೆ, ಚುನಾವಣೆ ಸಮೀಪಿಸುತ್ತಿರುವುದರಿಂದ ಆದಷ್ಟು ಬೇಗ ಟಿಕೆಟ್ ಘೋಷಣೆಯಾದರೆ ಮಾತ್ರ ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ ಸೆಣೆಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳಲು ಸಾಧ್ಯ. ಕೊನೇ ಕ್ಷಣದಲ್ಲಿ ಬಿಜೆಪಿ ಟಿಕೆಟ್ ಘೋಷಣೆ ಮಾಡಿದಷ್ಟು ಕಾಂಗ್ರೆಸ್‌ಗೆ ಅನುಕೂಲ, ಬಿಜೆಪಿಗೆ ಅನಾನುಕೂಲವಾಗಲಿದೆ ಎಂದು ಪಕ್ಷದ ಮುಖಂಡರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.