ಯತ್ನಾಳ್‌ಗೆ ಶಿಸ್ತು ಸಮಿತಿ ಬುಲಾವ್; ಅಶಿಸ್ತಿನ ನಡವಳಿಕೆಯನ್ನು ಪಕ್ಷ ಸಹಿಸುವುದಿಲ್ಲ ಎಂದ ಬಿಜೆಪಿ ರಾಜ್ಯಾಧ್ಯಕ್ಷ

ಯತ್ನಾಳ್‌ಗೆ ಶಿಸ್ತು ಸಮಿತಿ ಬುಲಾವ್; ಅಶಿಸ್ತಿನ ನಡವಳಿಕೆಯನ್ನು ಪಕ್ಷ ಸಹಿಸುವುದಿಲ್ಲ ಎಂದ ಬಿಜೆಪಿ ರಾಜ್ಯಾಧ್ಯಕ್ಷ

ಬೆಂಗಳೂರು: ಸರ್ಕಾರ, ಪಕ್ಷಕ್ಕೆ ಮುಜುಗರ ತರುವ ಹೇಳಿಕೆ ನೀಡಿ ಅಶಿಸ್ತಿನಿಂದ ವರ್ತಿಸಿದ ಕಾರಣಕ್ಕೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್‌ರಿಗೆ ಪಕ್ಷದ ಕೇಂದ್ರೀಯ ಶಿಸ್ತು ಸಮಿತಿ ನೋಟಿಸ್ ನೀಡಿ, ಸಮಿತಿ ಮುಂದೆ ಹಾಜರಾಗಲು ಸೂಚಿಸಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹೇಳಿದರು.

ಬಿಟಿಎಂ ಲೇಔಟ್ ವಿಧಾನಸಭೆ ಕ್ಷೇತ್ರದಲ್ಲಿ 'ಬೂತ್ ವಿಜಯ ಸಂಕಲ್ಪ ಅಭಿಯಾನ'ಕ್ಕೆ ಚಾಲನೆ ನೀಡಿದ ನಂತರ ಶನಿವಾರ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ಅಶಿಸ್ತಿನ ನಡವಳಿಕೆಯನ್ನು ಪಕ್ಷ ಸಹಿಸುವುದಿಲ್ಲ. ಯತ್ನಾಳ್‌ಗೆ ಬುಲಾವ್ ನೀಡಿರುವ ಶಿಸ್ತು ಸಮಿತಿ ಸೂಕ್ತ ಕ್ರಮವಹಿಸಲಿದೆ ಎಂದರು.

ದ್ವೇಷ ಕಾರಿದವರು ಉಳಿಯರು
ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಇಂದಿರಾಗಾಂಧಿ ಪಕ್ಷವನ್ನು ಮುಗಿಸಲು ಹೊರಟರು. ಅವರೇ ನಮ್ಮನ್ನು ಜೈಲಿಗೆ ಕಳುಹಿಸಲು ಪ್ರಯತ್ನಿಸಿದರು. ಜೈಲಿಗೆ ಕಳುಹಿಸುವುದು ಯಾರ ಕೈಯಲ್ಲೂ ಇಲ್ಲವೆಂದು ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್‌ಗೆ ತಿರುಗೇಟು ನೀಡಿದರು.

ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ಬಿಜೆಪಿಯವರನ್ನು ಜೈಲಿಗೆ ಕಳುಹಿಸುತ್ತೇವೆ ಎಂದ ಹರಿಪ್ರಸಾದ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ದ್ವೇಷದ ರಾಜಕಾರಣ ನಡೆಯಲ್ಲ. ಈ ಹಿಂದೆ ಯಾರೆಲ್ಲ ದ್ವೇಷ ಕಾರಿದರೋ ಅವರು ಯಾರೂ ಇಂದು ಉಳಿದಿಲ್ಲ. ದೇಶದಲ್ಲಿ ಕಾಂಗ್ರೆಸ್ ಪಕ್ಷವು ವಿರೋಧ ಪಕ್ಷವಾಗಿರಲು ನಾಲಾಯಕ್ ಎಂದು ಕಿಡಿಕಾರಿದರು.

ಅಪಾರ ಗೌರವ
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಬಗ್ಗೆ ಅಪಾರ ಗೌರವವಿದೆ. ಎರಡು ಪಕ್ಷಗಳ ಸಭೆಯಲ್ಲಿ ಚಪ್ಪಲಿ ಹೋಲಿಕೆ ವಿಚಾರದಲ್ಲಿ ಪಕ್ಷಗಳ ಹೆಸರೆತ್ತಿಲ್ಲ. ಎರಡೂ ಪಕ್ಷಗಳಲ್ಲಿ ಟಿಕೆಟ್‌ಗಾಗಿ ಪೈಪೋಟಿ ನಡೆಯುತ್ತಿದೆ ಎಂಬುದನ್ನು ಪ್ರಸ್ತಾಪಿಸಿರುವೆ. ಆ ವಿಷಯವನ್ನು ಅಲ್ಲಿಗೇ ಬಿಟ್ಟಿದ್ದೇನೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಸ್ಪಷ್ಟಪಡಿಸಿದರು.