ತಾಂತ್ರಿಕ, ವೈದ್ಯಕೀಯ, ಕಾನೂನು ಶಿಕ್ಷಣವನ್ನು ಮಾತೃಭಾಷೆಯಲ್ಲೇ ಕಲಿಸಿ: ಅಮಿತ್ ಶಾ ಸಲಹೆ

ತಾಂತ್ರಿಕ, ವೈದ್ಯಕೀಯ, ಕಾನೂನು ಶಿಕ್ಷಣವನ್ನು ಮಾತೃಭಾಷೆಯಲ್ಲೇ ಕಲಿಸಿ: ಅಮಿತ್ ಶಾ ಸಲಹೆ

ಹಮದಾಬಾದ್: ರಾಜ್ಯಗಳು ಹಿಂದಿ ಅಥವಾ ಪ್ರಾದೇಶಿಕ ಭಾಷೆಗಳಲ್ಲಿ ತಾಂತ್ರಿಕ, ವೈದ್ಯಕೀಯ ಮತ್ತು ಕಾನೂನು ಕ್ಷೇತ್ರಗಳಲ್ಲಿ ಶಿಕ್ಷಣವನ್ನು ಕಲಿಯೋದ್ರಿಂದ ದೇಶವು ಇಂಗ್ಲಿಷ್ ಬಾರದ ವಿದ್ಯಾರ್ಥಿಗಳ ಪ್ರತಿಭೆಯನ್ನು ಗುರುತಿಸಬಹುದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.

ಹಿಂದಿ ಮತ್ತು ಪ್ರಾದೇಶಿಕ ಭಾಷೆಗಳಲ್ಲಿ ಶಿಕ್ಷಣದ ಪ್ರಾಮುಖ್ಯತೆಯನ್ನು ಒತ್ತಿಹೇಳುತ್ತಾ, ವಿದ್ಯಾರ್ಥಿಗಳು ತಮ್ಮ ಮಾತೃಭಾಷೆಯಲ್ಲಿ ಅಧ್ಯಯನ ಮಾಡಿದರೆ, ಮೂಲ ಆಲೋಚನಾ ಪ್ರಕ್ರಿಯೆಯನ್ನು ಸುಲಭವಾಗಿ ಅಭಿವೃದ್ಧಿಪಡಿಸಬಹುದು. ಇದು ಸಂಶೋಧನೆ ಮತ್ತು ಆವಿಷ್ಕಾರವನ್ನು ಉತ್ತೇಜಿಸುತ್ತದೆ ಎಂದು ಹೇಳಿದರು.

'ತಾಂತ್ರಿಕ, ವೈದ್ಯಕೀಯ ಮತ್ತು ಕಾನೂನು ಶಿಕ್ಷಣವನ್ನು ಹಿಂದಿ ಮತ್ತು ಪ್ರಾದೇಶಿಕ ಭಾಷೆಗಳಲ್ಲಿ ಕಲಿಸಬೇಕು. ಎಲ್ಲಾ ರಾಜ್ಯ ಸರ್ಕಾರಗಳು ಶಿಕ್ಷಣದ ಈ ಮೂರು ಕ್ಷೇತ್ರಗಳ ಪಠ್ಯಕ್ರಮವನ್ನು ಪ್ರಾದೇಶಿಕ ಭಾಷೆಗಳಿಗೆ ಸರಿಯಾಗಿ ಭಾಷಾಂತರಿಸಲು ಉಪಕ್ರಮವನ್ನು ತೆಗೆದುಕೊಳ್ಳಬೇಕು ' ಎಂದು ಶಾ ಹೇಳಿದ್ದಾರೆ.

ಮಾತೃಭಾಷೆಯಲ್ಲಿ ಶಿಕ್ಷಣವು ಸುಲಭ ಮತ್ತು ವೇಗವಾಗಿ ಅರ್ಥೈಸಿಕೊಳ್ಳಲು ಸಹಾಯಕವಾಗುತ್ತದೆ. ಇದು ಉನ್ನತ ಶಿಕ್ಷಣದಲ್ಲಿ ದೇಶದಲ್ಲಿರುವ ವಿದ್ಯಾರ್ಥಿಗಳ ಪ್ರತಿಭೆಯನ್ನು ಉತ್ತೇಜಿಸುತ್ತದೆ. ಇಂದು ನಾವು ದೇಶದ 5 ಪ್ರತಿಶತ ಪ್ರತಿಭೆ ಹೊಂದಿರುವ ವಿದ್ಯಾರ್ಥಿಗಳನ್ನು ಬಳಸಿಕೊಳ್ಳಬಹುದು. ಆದರೆ, ಈ ಉಪಕ್ರಮದಿಂದ ನಾವು ದೇಶದ 100 ಪ್ರತಿಶತ ಪ್ರತಿಭೆ ಹೊಂದಿರುವವರನ್ನು ಪಡೆಯಲು ಸಾಧ್ಯವಾಗುತ್ತದೆ ಎಂದಿದ್ದಾರೆ.