ವೈದ್ಯರ ಮನೆ ದೋಚಿದ್ದವನು ಅರೆಸ್ಟ್ : 12 ಲಕ್ಷ ಬೆಲೆಯ ವಜ್ರ-ಚಿನ್ನಾಭರಣ ವಶ
ವೈದ್ಯರ ಮನೆ ದೋಚಿದ್ದವನು ಅರೆಸ್ಟ್ : 12 ಲಕ್ಷ ಬೆಲೆಯ ವಜ್ರ-ಚಿನ್ನಾಭರಣ ವಶ
ಬೆಂಗಳೂರು: ವೈದ್ಯರ ಮನೆಯಲ್ಲಿ ಆಭರಣ ಕಳ್ಳತನ ಮಾಡಿದ್ದ ಮನೆಕೆಲಸದಾಕೆಯನ್ನು ಮಡಿವಾಳ ಠಾಣೆ ಪೊಲೀಸರು ಬಂಧಿಸಿ 12 ಲಕ್ಷ ರೂ. ಬೆಲೆಯ 235 ಗ್ರಾಂ ವಜ್ರ ಹಾಗೂ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ. ಮಡಿವಾಳದ ಜೋಗಿ ಕಾಲೋನಿ, 4ನೆ ಕ್ರಾಸ್ ನಿವಾಸಿ 26 ವರ್ಷದ ಮನೆಕೆಲಸದಾಕೆಯನ್ನು ಬಂಧಿಸಲಾಗಿದೆ.
ವೈದ್ಯರ ಮನೆಯಲ್ಲಿ ಈಕೆ ಕಳೆದ ಮೂರು ವರ್ಷಗಳಿಂದ ಕೆಲಸ ಮಾಡುತ್ತಿದ್ದಳು. ಒಂದು ವರ್ಷದಿಂದ ಆಗಾಗ್ಗೆ ಇವರ ಮನೆಯಲ್ಲಿ ಒಂದೊಂದೇ ಚಿನ್ನದ ಒಡವೆಗಳನ್ನು ಕಳ್ಳತನ ಮಾಡಿದ್ದಾಳೆ. ಇದು ವೈದ್ಯರ ಗಮನಕ್ಕೆ ಬಂದಿಲ್ಲ. ಆ.22ರಂದು ಆಭರಣವನ್ನು ನೋಡಿಕೊಂಡಾಗ ಕಳ್ಳತನವಾಗಿರುವುದು ಗಮನಕ್ಕೆ ಬಂದು ಆ.23ರಂದು ಮಡಿವಾಳ ಠಾಣೆ ಪೊಲೀಸರಿಗೆ ದೂರು ನೀಡಿದ್ದರು.
ಆರೋಪಿತೆ ಪತ್ತೆಗಾಗಿ ಆಗ್ನೇಯ ವಿಭಾಗದ ಉಪ ಪೊಲೀಸ್ ಆಯುಕ್ತ ಶ್ರೀನಾಥ್ ಮಹದೇವ್ ಜೋಷಿ ಅವರು ವಿಶೇಷ ತಂಡ ರಚಿಸಿದ್ದರು. ಈ ತಂಡ ಕಾರ್ಯಾಚರಣೆ ನಡೆಸಿ ಆರೋಪಿತೆಯನ್ನು ಬಂಧಿಸಿ ಅಡವಿಟ್ಟಿದ್ದ 235 ಗ್ರಾಂ ವಿವಿಧ ಬಗೆಯ ಚಿನ್ನ ಮತ್ತು ವಜ್ರ ಮಿಶ್ರಿತ ಆಭರಣಗಳನ್ನು ವಶಪಡಿಸಿಕೊಂಡಿದೆ.