ಪ್ರತಿದಿನ 25 ಲಕ್ಷ ಪ್ರಯಾಣಿಕರನ್ನು ನಿರ್ವಹಿಸುವ ಸಾಮರ್ಥ್ಯ ಹೊಂದಿದೆ: ಸಿಎಂ ಬಸವರಾಜ ಬೊಮ್ಮಾಯಿ

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ನ.11ರಂದು ಬೆಂಗಳೂರಿಗೆ ಆಗಮಿಸಲಿದ್ದು, ಮೂರು ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಆರ್ ಟಿ ನಗರದ ತಮ್ಮ ನಿವಾಸದ ಬಳಿ ಸುದ್ದಿಗಾರರಿಗೆ ಭಾನುವಾರ ಪ್ರತಿಕ್ರಿಯಿಸಿದ ಅವರು, ಮೈಸೂರು-ಬೆಂಗಳೂರು-ಚೆನ್ನೈ ವಂದೇ ಭಾರತ್ ಹೈಸ್ಪೀಡ್ ರೈಲಿಗೆ ಹಸಿರು ನಿಶಾನೆ, ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಎರಡನೇ ಟರ್ಮಿನಲ್ ಲೋಕಾರ್ಪಣೆ ಹಾಗೂ ನಾಡಪ್ರಭು ಕೆಂಪೇಗೌಡರ ಪ್ರತಿಮೆ ಅನಾವರಣ ಕಾರ್ಯಕ್ರಮಗಳಲ್ಲಿ ಭಾಗಿಯಾಗುವರು ಎಂದು ವಿವರಿಸಿದರು.
ಕರ್ನಾಟಕದ ಜನರ ಬಹು ದಿನದ ಬೇಡಿಕೆಯಂತೆ ಮೊದಲ ಹಂತದಲ್ಲಿ ಮೈಸೂರು ಬೆಂಗಳೂರು-ಚೆನ್ನೈ ಅತಿ ವೇಗದ ರೈಲು ಸಂಚಾರ ಆರಂಭವಾಗಲಿದೆ. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಎರಡನೇ ಟರ್ಮಿನಲ್ 100 ಕೌಟರ್ ಗಳು, ಅತ್ಯಾಧುನಿಕ ತಂತ್ರಜ್ಞಾನ ಬಳಸಿದ ಸೃಜಿಸಿದ ಸೌಲಭ್ಯ, ಪ್ರತಿದಿನ 25 ಲಕ್ಷ ಪ್ರಯಾಣಿಕರನ್ನು ನಿರ್ವಹಿಸುವ ಸಾಮರ್ಥ್ಯ ಹೊಂದಿದೆ. ಎರಡೂ ಟರ್ಮಿನಲ್ ಸೇರಿದರೆ ದೆಹಲಿ ನಂತರ ಅತಿದೊಡ್ಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಾಗಲಿದೆ.
ಜಗತ್ತಿನ ಬಹುತೇಕ ದೇಶಗಳ ಸಂಪರ್ಕ ಸಾಧಿಸಲಿದ್ದು, ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರ, ನವೋದ್ಯಮ, ಯೂನಿಕಾರ್ನ್, ಡೆಕಾಕಾರ್ನ್ ಸಹಿತ ಹಲವು ಕ್ಷೇತ್ರಗಳು ಬೆಳವಣಿಗೆ ಸಾಧಿಸಲಿದೆ. ವಿದೇಶಗಳ ಇಂಜಿನಿಯರ್ ಗಳು, ತಾಂತ್ರಿಕ, ಆರ್ಥಿಕ ನಿಪುಣರು, ಉದ್ಯೋಗ- ವ್ಯಾಸಂಗ ಬಯಸುವವರು ಬೆಂಗಳೂರಿಗೆ ಬಂದು ಹೋಗಲು ಅನುಕೂಲವಾಗಲಿದೆ ಎಂದು ಹೇಳಿದ್ದಾರೆ.