ಕೃಷಿ ಮೇಳ: ಜಾನುವಾರು ಸ್ವಚ್ಛತೆಗೆ ಬಂತು ಯಂತ್ರ

ಕೃಷಿ ಮೇಳ: ಜಾನುವಾರು ಸ್ವಚ್ಛತೆಗೆ ಬಂತು ಯಂತ್ರ

ಬೆಂಗಳೂರು: ಜಾನುವಾರುಗಳ ಸ್ವಚ್ಛತೆ, ಆರೋಗ್ಯ ಕಾಪಾಡಲು, ವಿಶ್ರಾಂತಿಗೆ ನೆರವಾಗಲು ಯಂತ್ರವೊಂದು ಬಂದಿದೆ.

ಬೆಂಗಳೂರು ಕೃಷಿ ವಿಶ್ವವಿದ್ಯಾಲಯವು ಆಯೋಜಿಸಿರುವ ಕೃಷಿ ಮೇಳದಲ್ಲಿ ಯಂತ್ರದ ಆವಿಷ್ಕಾರವು ಗಮನ ಸೆಳೆಯುತ್ತಿದೆ.

ಜಾನುವಾರುಗಳು ಮೇವಿಗೆ ದಿನವಿಡೀ ಅಲೆದಾಡಿ ಕೊಟ್ಟಿಗೆಗೆ ಬಂದು ವಿರಮಿಸುತ್ತವೆ.

ಅವುಗಳ ಮೈ, ಕಾಲು, ಕಿವಿ, ಹೊಟ್ಟೆ ಭಾಗದಲ್ಲಿ ಕೆಸರು, ಸೆಗಣಿ, ಗಂಜಲ ಮೆತ್ತಿಕೊಂಡಿರುವ ಕಾರಣಕ್ಕೆ ವಿಶ್ರಾಂತಿ ಸಾಧ್ಯವಾಗುವುದಿಲ್ಲ. ಈ ಯಂತ್ರದಿಂದ ಕ್ಷಣದಲ್ಲಿ ಹಸುಗಳ ಮೈ ಸ್ವಚ್ಛ ಆಗಲಿದೆ.

ಟರ್ಕಿಯೆ ದೇಶದ ತಜ್ಞರು ಜಾನುವಾರುಗಳ ಮೈ ಸ್ವಚ್ಛಗೊಳಿಸುವ ರಬ್ಬಿಂಗ್‌ ಯಂತ್ರ ಅಭಿವೃದ್ಧಿ ಪಡಿಸಿ 'ಇ ಬ್ರಷ್‌' ಹಾಗೂ 'ಎಂ ಬ್ರಷ್‌' ಎಂಬ ಹೆಸರಿನಲ್ಲಿ ಮಾರುಕಟ್ಟೆಗೆ ಪರಿಚಯಿಸಿದ್ದಾರೆ. ಭಾರತದಲ್ಲೂ ಈಗ ಲಭ್ಯವಾಗಿದ್ದು, ಹೈನುಗಾರಿಕೆ ಅವಲಂಬಿಸಿರುವ ರೈತರನ್ನು ಆಕರ್ಷಿಸುತ್ತಿದೆ.

'ವಿದ್ಯುತ್‌ ಚಾಲಿತ ಯಂತ್ರವಾಗಿದ್ದು, 1 ಎಚ್‌.ಪಿ ಮೋಟರ್ ಅಳವಡಿಸಲಾಗಿದೆ. ವಿದ್ಯುತ್‌ ಚಾಲಿತ ವ್ಯವಸ್ಥೆಯಿಂದ ಈ ಯಂತ್ರವು ಕಾರ್ಯಾಚರಣೆ ನಡೆಸುತ್ತದೆ. 50 ಹಸುಗಳಿಗೆ ಒಂದು ಯಂತ್ರ ಅಳವಡಿಸಿಕೊಂಡರೆ ಸಾಕು' ಎಂದು ಜಿಇಎ ಫಾರಂ ಟೆಕ್ನಾಲಜಿಯ ರಾಜಣ್ಣ ಅವರು 'ಪ್ರಜಾವಾಣಿ'ಗೆ ಮಾಹಿತಿ ನೀಡಿದರು.

'ಸೆನ್ಸಾರ್‌ ವ್ಯವಸ್ಥೆಯಿದ್ದು, ಹಸು, ಎತ್ತು ಹಾಗೂ ಕರುಗಳು ಯಂತ್ರದ ಎದುರು ಬಂದರೆ ಸಾಕು, ಸ್ವಯಂ ಚಾಲಿತವಾಗಿ ಯಂತ್ರವು ಜಾನುವಾರುಗಳ ಸ್ವಚ್ಛತೆ ಮಾಡುತ್ತದೆ. ಇದರಿಂದ ಜಾನುವಾರುಗಳ ದೇಹದ ಸ್ವಚ್ಛತೆಯ ಜತೆಗೆ ಮಸಾಜ್‌ ಸಹ ಆಗಲಿದೆ' ಎಂದು ತಿಳಿಸಿದರು.

'ರಾಜ್ಯದ ವಿವಿಧ ಜಿಲ್ಲೆಯ 28 ಪ್ರಗತಿಪರ ಕೃಷಿಕರಿಗೆ ಈ ಯಂತ್ರ ಪೂರೈಸಲಾಗಿದೆ. ಈ ಯಂತ್ರವನ್ನು ರೈತರು ಬಳಸುತ್ತಿದ್ದಾರೆ' ಎಂದರು.

ಜಾನುವಾರುಗಳ ಚರ್ಮ ಶುಭ್ರವಾಗುವ ಜೊತೆಗೆ ದೇಹದಲ್ಲಿ ಉಷ್ಣಾಂಶ ಹೆಚ್ಚಲಿದೆ. ರಕ್ತ ಪರಿಚಲನೆ ಹೆಚ್ಚಳದಿಂದ ಹಾಲು ಉತ್ಪಾದನೆ ಅಧಿಕ ಆಗಲಿದೆ ಎಂದು ಕೋಲಾರದ ರೈತ ಉಮೇಶ್‌ ರೆಡ್ಡಿ ಮಾಹಿತಿ ನೀಡಿದರು.