ಎಂಇಎಸ್ ಪುಂಡಾಟಿಕೆ ವಿರುದ್ಧ ವಿಧಾನ ಪರಿಷತ್‍ನಲ್ಲಿ ಆಕ್ರೋಶ
ಬೆಳಗಾವಿ, ಡಿ.20- ಎಂಇಎಸ್ ಪುಂಡಾಟಿಕೆ ವಿರುದ್ಧ ವಿಧಾನ ಪರಿಷತ್'ನಲ್ಲಿ ಗಂಭೀರ ಚರ್ಚೆ ನಡೆದು, ಕನ್ನಡ ನಾಡು ನುಡಿಯ ಅಸ್ಮಿತೆಯ ಮೇಲಾಗುತ್ತಿರುವ ದಾಳಿಯನ್ನು ಖಂಡಿಸಲಾಯಿತು.
ಎಸ್.ಆರ್.ಪಾಟೀಲ್ ಅವರು, ಸಂಗೊಳ್ಳಿ ರಾಯಣ್ಣ ಅವರ ಪ್ರತಿ ಭಗ್ನ ಗೊಳಿಸಲಾಗಿದೆ, ಶಿವಾಜಿ ಮಹಾರಾಜರ ಪ್ರತಿಮೆಗೆ ಮಸಿ ಬಳಿಯಲಾಗಿದೆ. ಈ ವಿಷಯದ ಚರ್ಚೆಗೆ ಅವಕಾಶ ನೀಡಿ ಎಂದು ಒತ್ತಾಯಿಸಿದರು. ಶ್ರೀಕಂಠೇಗೌಡ ಸೇರಿದಂತೆ ಇತರ ಸದಸ್ಯರು ಇದೇ ವಿಷಯವಾಗಿ ನಿಲುವಳಿ ಸೂಚನೆ ನೀಡಿದ್ದಾರೆ. ಇದರಲ್ಲಿ ಸಾರ್ವಜನಿಕ ಹಿತಾಸಕ್ತಿ ಅಡಗಿರುವುದು ನನಗೆ ಮನವರಿಕೆಯಾಗಿದೆ. ಹಾಗಾಗಿ ನಿಲುವಳಿ ಸೂಚನೆಯನ್ನು ಬದಲಾವಣೆ ಮಾಡಿ, ಸಾರ್ವಜನಿಕ ಮಹತ್ವದ ವಿಷಯವನ್ನಾಗಿ ಚರ್ಚಿಸಲು ಅವಕಾಶ ನೀಡುತ್ತೇನೆ ಎಂದರು.
ಕಾಂಗ್ರೆಸ್ ಸದಸ್ಯರು ಬಾವಿಯಲ್ಲಿ ಧರಣಿ ನಡೆಸುತ್ತಿದ್ದಾರೆ. ಅವರು ಹೇಗೆ ಮಾತನಾಡುತ್ತಾರೆ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ಪ್ರಶ್ನಿಸಿದರು. ಸದಸ್ಯರಿಗೆ ಸೂಕ್ತ ಭರವಸೆ ನೀಡಿ ಧರಣಿಯನ್ನು ಕೊನೆಗಾಣಿಸಿ ಎಂದು ಎಸ್.ಆರ್.ಪಾಟೀಲ್ ಹೇಳಿದರು. ಎಂ.ನಾರಾಯಣಸ್ವಾಮಿ ಅವರು ನಿಯಮ 68ರ ಅಡಿ ನಾವು ಸೂಚನೆ ನೀಡಿದ್ದೇವೆ. ನಮಗೆ ಅರ್ಧ ಗಂಟೆ ಕಾಲ ಚರ್ಚೆಗೆ ಅವಕಾಶ ನೀಡಿ ಎಂದು ಮನವಿ ಮಾಡಿದರು.
ಸಭಾನಾಯಕರು, ಪ್ರತಿಪಕ್ಷದ ನಾಯಕರು ಗಂಭೀರ ವಿಷಯ ಪ್ರಸ್ತಾಪಿಸಿದ್ದಾರೆ. ಚರ್ಚೆಗೆ ಅವಕಾಶ ನೀಡಬೇಕೋ ಬೇಡವೋ ಎಂಬ ನಿರ್ಧಾರ ತೆಗೆದುಕೊಳ್ಳುವುದಾಗಿ ಭರವಸೆ ನೀಡಿದ ಬಳಿಕ ಧರಣಿ ಅಂತ್ಯಗೊಂಡಿತ್ತು. ನಂತರ ಚರ್ಚೆ ಆರಂಭಿಸಿದ ಕೆ.ಟಿ.ಶ್ರೀಕಂಠೇಗೌಡರು, ಬೆಳಗಾವಿಯಲ್ಲಿ ಅಧಿವೇಶನ ನಡೆಯುವಾಗ ಮಹಾರಾಷ್ಟ್ರ ಏಕೀಕರಣ ಸಮಿತಿಯವರು ಪರ್ಯಾಯವಾಗಿ ಮಹಾಮೇಳವ ನಡೆಸಲು ಮುಂದಾಗಿದ್ದರು.
ಜಿಲ್ಲಾಡಳಿತದ ಅನುಮತಿ ಇಲ್ಲದೆ ಸಭಾಂಗಣ ನಿರ್ಮಿಸಲಾಗಿತ್ತು. ಅದನ್ನು ವಿರೋಧಿಸಿ ಕನ್ನಡಿಗ ಸಂಪತ್ತು ಕುಮಾರ್ ಎಂಬುವರು ಎಂಇಎಸ್ ಮುಖಂಡರಿಗೆ ಮಸಿ ಬಳಿದಿದ್ದರು. ಸಂಪತ್ ಕುಮಾರ್ ವಿರುದ್ಧ ನಮ್ಮ ಸರ್ಕಾರ ಕೊಲೆ ಯತ್ನ ಪ್ರಕರಣ ದಾಖಲಿಸಲಾಗಿದೆ. ಅದರ ಬೆನ್ನಲ್ಲೆ ಕೊಲ್ಲಾಪುರದಲ್ಲಿ ಕನ್ನಡದ ಬಾವುಟ ಸುಡಲಾಗಿದೆ. ಕನ್ನಡಿಗರ ವಾಹನಗಳಿಗೆ ಕಲ್ಲು ತೂರಲಾಗಿದೆ. ಪೊಲೀಸ್ ವಾಹನಕ್ಕೆ ಬೆಂಕಿ ಹಚ್ಚಲಾಗಿದೆ.
ಪೊಲೀಸರು ಅಲ್ಲಿಗೆ ಕೊಲ್ಲಾಪುರಕ್ಕೆ ಹೋದರೆ ಹಲ್ಲೆಗೆ ಯತ್ನಿಸಲಾಗಿದೆ. ಮಾಹಾರಾಷ್ಟ್ರ ಪೊಲೀಸರ ರಕ್ಷಣೆ ಪಡೆದು ನಮ್ಮವರು ವಾಪಾಸ್ ಬರುವಂತಾಗಿದೆ. ದೌರ್ಜನ್ಯ ನಡೆಸಿದ ಎಂಇಎಸ್ನವರ ವಿರುದ್ಧ ಸಾಮಾನ್ಯ ಪ್ರಕರಣ ದಾಖಲಿಸಲಾಗಿದೆ. ಕನ್ನಡಿಗರ ವಿರುದ್ಧ ಕೊಲೆಯತ್ನ ಪ್ರಕರಣ ದಾಖಲಿಸಲಾಗಿದೆ. ಸರ್ಕಾರಕ್ಕೆ ಘಟನೆಯ ಬಗ್ಗೆ ಪೂರ್ವಭಾವಿ ಮಾಹಿತಿ ಇರಲಿಲ್ಲವೇ. ಕನ್ನಡಿಗರನ್ನು ಕೆರಳಿಸುವವರನ್ನು ಯಾಕೆ ಗಡಿಪಾರು ಮಾಡಲಿಲ್ಲ. ಎಂಇಎಸ್ ಅನ್ನು ಯಾಕೆ ನಿಷೇಧಿಸಲಿಲ್ಲ.
ಸರ್ಕಾರ ದಿವ್ಯ ನಿರ್ಲಕ್ಷ್ಯ ಅನುಸರಿಸುತ್ತಿದೆ. ಕರ್ನಾಟಕದ ನೆಲೆದಲ್ಲಿ ನಾವು ಸ್ವತಂತ್ರವಾಗಿ ತಿರುಗಾಡಲು ಸಾಧ್ಯವಿಲ್ಲದ ವಾತಾವರಣ ನಿರ್ಮಾಣವಾಗಿದೆ. ಇಲ್ಲಿ ಮುಖ್ಯಮಂತ್ರಿ, ಗೃಹ ಸಚಿವರು ಸೇರಿದಂತೆ ಸರ್ಕಾರವೇ ಇಲ್ಲಿದೆ. ಆದರೂ ಎಂಇಎಸ್ನವರು ಉದ್ಧಟತನ ಪ್ರದರ್ಶಿಸುತ್ತಿದ್ದಾರೆ. ಸರ್ಕಾರ ಪುಂಡರನ್ನು ಗಡಿಪಾರು ಮಾಡಿ, ಎಂಇಎಸ್ ಅನ್ನು ನಿಷೇಧಿಸಿ ಎಂದು ಆಗ್ರಹಿಸಿದರು.
ಯು.ಬಿ.ವೆಂಕಟೇಶ್ ಅವರು, ಕನ್ನಡ ಧ್ವಜ ನಮ್ಮ ಅಸ್ಮಿತೆ. ಹಿರಿಯರು ಅದರಲ್ಲಿ ಹರಿಶಿಣ, ಕುಂಕುಮದ ಬಣ್ಣ ತುಂಬಿದ್ದಾರೆ. ದೇವರ ಪೂಜೆಯಂತೆ ಬಾವುಟವನ್ನು ಕನ್ನಡಿಗರು ಗೌರವಿಸುತ್ತಾರೆ. ಅದಕ್ಕೆ ಬೆಂಕಿ ಇಟ್ಟಿರುವ ಪುಂಡರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಈ ವಿಷಯದಲ್ಲಿ ಪ್ರತಿಪಕ್ಷಗಳು ಸರ್ಕಾರದ ಜೊತೆಗೆ ನಿಲ್ಲಲಿವೆ. ಭಾಷಾ ಸಾಮರಸ್ಯ ಕದಡುವ ಈ ಘಟನೆಗಳಿಂದ ಹೊರ ನಾಡಿನ ಕನ್ನಡಿಗರ ಸುರಕ್ಷಿತೆಯ ಬಗ್ಗೆಯೂ ಆತಂಕ ಸೃಷ್ಟಿಯಾಗಿದೆ.
(ಕರಾವಳಿ ಜಿಲ್ಲೆಗಳಿಂದ ಸುಮಾರು 10 ಲಕ್ಷ ಮಂದಿ ಮುಂಬೈನಲ್ಲಿ ಹೋಟೆಲ್ ಉದ್ಯಮ ನಡೆಸುತ್ತಿದ್ದಾರೆ. ಅವರು ಹೆದರುವುದಿಲ್ಲ, ಅವರಿಗೆಲ್ಲಾ ಭೂಗತ ಲೋಕದ ಸಂಪರ್ಕ ಇದೆ. ಆದರೆ ಪುಂಡರು ದುರ್ಬಲರ ಮೇಲೆ ಕೆಲವೆಡೆ ದಾಳಿ ಮಾಡುತ್ತಿದ್ದಾರೆ. ಸರ್ಕಾರ ಸೂಕ್ತ ಕ್ರಮ ತೆಗೆದುಕೊಳ್ಳದಿದ್ದರೆ ರಾಜ್ಯದ ಆರುವರೆ ಕೋಟಿ ಜನರು ಬೆಳಗಾವಿಗೆ ಬರಬೇಕಾಗುತ್ತದೆ ಎಂದರು.)
ಪ್ರತಿಪಕ್ಷದ ನಾಯಕ ಎಸ್.ಆರ್.ಪಾಟೀಲ್ ಅವರು, ನಾಡಿನ ನೆಲ ಜಲ ವಿಷಯ ಬಂದಾಗ ಪಕ್ಷಾತೀತವಾಗಿ ನಾವು ನಿರ್ಣಯ ತೆಗೆದುಕೊಳ್ಳಬೇಕಿದೆ. ಗಡಿ ವಿಷಯಕ್ಕೆ ಸಂಬಂಧಿಸಿದಂತೆ ಮಹಾಜನ್ ವರದಿಯೇ ಅಂತಿಮ. ಇಡೀ ಸರ್ಕಾರವೇ ಬೆಳಗಾವಿಯಲ್ಲಿದೆ ಆದರೂ ಪುಂಡಾಟ ಮಾಡುತ್ತಾರೆ ಎಂದರೆ ಅದನ್ನು ಹಗುರವಾಗಿ ತೆಗೆದುಕೊಳ್ಳುವುದು ಹೇಗೆ ಸಾಧ್ಯ. ಸರ್ಕಾರ ಕಠಿಣ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.
ಪುಟ್ಟಣ್ಣ ಅವರು, ಯಾರೋ ನಾಲ್ವರು ಕಿಡಿಗೇಡಿಗಳು ಮಾಡಿರುವ ಕೃತ್ಯದಿಂದ ಉದ್ವಿಗ್ನತೆ ಉಂಟಾಗಿದೆ. ಪುಂಡರು ವ್ಯವಸ್ಥಿತ ಹುನ್ನಾರದ ಮೂಲಕವೇ ಕೃತ್ಯ ಎಸಗಿದ್ದಾರೆ. ಅವರ ವಿರುದ್ಧ ಕೋಕಾ ಕಾಯ್ದೆಯಡಿ ಪ್ರಕರಣ ದಾಖಲಿಸಿ ಎಂದು ಆಗ್ರಹಿಸಿದರು.
ಎಂ.ನಾರಾಯಣಸ್ವಾಮಿ ಅವರು, ಸರ್ಕಾರಿ ಕಾರುಗಳನ್ನು ಹೊಡೆದಿದ್ದಾರೆ ಎಂದರೆ ಅವರಿಗೆ ಎಷ್ಟು ಧೈರ್ಯ ಎಂದಾಗ, ವಿಧಾನ ಪರಿಷತ್ನ ಆರು ಕಾರುಗಳನ್ನು ಜಕ್ಕಂಗೊಳಿಸಲಾಗಿದೆ ಎಂದು ಸಭಾಪತಿಯವರು ಹೇಳಿದರು.
ಮುಂದುವರೆದ ನಾರಾಯಣಸ್ವಾಮಿ ಅವರು, ನಮ್ಮ ಸರ್ಕಾರ ಮಹಾರಾಷ್ಟ್ರಕ್ಕೆ ಹೆದರಿ ಆಡಳಿತ ನಡೆಸುತ್ತಿದೆಯೇ. ಮಹಾರಾಷ್ಟ್ರ ರಾಜ್ಯದಲ್ಲಿ ಕನ್ನಡಿಗರ ಮೇಲೆ ದೌರ್ಜನ್ಯ ನಡೆಯುತ್ತಿದೆ. ಮಹಾರಾಷ್ಟ್ರದ ಮುಖ್ಯಂತ್ರಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು ಕರ್ನಾಟಕದಲ್ಲಿರುವ ಮರಾಠಿಗರ ರಕ್ಷಣೆ ಮಾಡುವಂತೆ ಒತ್ತಾಯಿಸಿದ್ದಾರೆ. ನಮ್ಮ ಮುಖ್ಯಮಂತ್ರಿ ಯಾಕೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲಿಲ್ಲ ಎಂದು ಪ್ರಶ್ನಿಸಿದರು.
ಬಿ.ಕೆ.ಹರಿಪ್ರಸಾದ್ ಅವರು, ಕನ್ನಡಿಗರು ದುರ್ಬಲರು ಎಂಬ ಭಾವಿಸಿರುವುದರಿಂದ ಇಂತಹ ಘಟನೆಗಳು ನಡೆಯುತ್ತಿವೆ. ಕನ್ನಡ ಭಾಷೆ ಇತರ ಭಾಷೆಗಳಷ್ಟು ವೇಗವಾಗಿ ಬೆಳೆಯುತ್ತಿಲ್ಲ. ಇದಕ್ಕೆ ಸರ್ಕಾರಗಳಿಂದ ಸಿಗುತ್ತಿರುವ ಪ್ರೋತ್ಸಾಹದ ಕೊರತೆ ಕಾರಣವಾಗಿದೆ. ಕನ್ನಡ ನಾಡು ನುಡಿಗೆ ಅಪಮಾನ ಮಾಡಿದವರ ವಿರುದ್ಧ ದೇಶದ್ರೋಹದ ಅಡಿ ಪ್ರಕರಣ ದಾಖಲಿಸಬೇಕು ಎಂದು ಒತ್ತಾಯಿಸಿದರು.