ರೈತರ ಮೇಲೆ ಅಷ್ಟೊಂದು ದ್ವೇಷವೇಕೆ: ಪ್ರಧಾನಿ ಮೋದಿಗೆ ಕೇಜ್ರಿವಾಲ್ ಪ್ರಶ್ನೆ

ರೈತರ ಮೇಲೆ ಅಷ್ಟೊಂದು ದ್ವೇಷವೇಕೆ: ಪ್ರಧಾನಿ ಮೋದಿಗೆ ಕೇಜ್ರಿವಾಲ್ ಪ್ರಶ್ನೆ

ನವದೆಹಲಿ: ರೈತರ ಮೇಲೆ ನಿಮಗೆ ಅಷ್ಟೊಂದು ದ್ವೇಷವೇಕೆ ಎಂದು ಪ್ರಧಾನಿ ನರೇಂದ್ರ ಮೋದಿಯವರನ್ನು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಪ್ರಶ್ನಿಸಿದ್ದಾರೆ. ಉತ್ತರ ಪ್ರದೇಶದ ಲಖಿಂಪುರ-ಖೇರಿ ಘಟನೆ ಉಲ್ಲೇಖಿಸಿ ಅವರು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಆರೋಪಿಗಳನ್ನು ಬಂಧಿಸಬೇಕು. ಕೇಂದ್ರ ಗೃಹ ಇಲಾಖೆಯ ರಾಜ್ಯ ಖಾತೆ ಸಚಿವ ಅಜಯ್ ಮಿಶ್ರಾ ಮಗ ಆರೋಪಿಯಾಗಿರುವುದರಿಂದ ಸಚಿವರನ್ನು ಸಂಪುಟದಿಂದ ವಜಾಗೊಳಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

ವರ್ಚುವಲ್ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕೇಜ್ರಿವಾಲ್, ರೈತರ ಕೊಲೆ ಮಾಡಿದವರನ್ನು ರಕ್ಷಿಸಲು ಇಡೀ ವ್ಯವಸ್ಥೆಯೇ ಪ್ರಯತ್ನಿಸುತ್ತಿದೆ. ಘಟನೆಗೆ ಸಂಬಂಧಿಸಿ ಈವರೆಗೆ ಯಾರನ್ನೂ ಯಾಕೆ ಬಂಧಿಸಿಲ್ಲ ಎಂದು ಪ್ರಧಾನಿಯವರನ್ನು ಉದ್ದೇಶಿಸಿ ಪ್ರಶ್ನಿಸಿದ್ದಾರೆ.

'ಕಳೆದ ಒಂದು ವರ್ಷದಿಂದ ರೈತರು ಧರಣಿ ನಡೆಸುತ್ತಿದ್ದಾರೆ. ಈವರೆಗೆ 600 ರೈತರು ಮೃತಪಟ್ಟಿದ್ದಾರೆ. ರೈತರ ವೇಲೆ ವಾಹನ ಚಲಾಯಿಸಿ ಅವರನ್ನು ಹತ್ಯೆ ಮಾಡಲಾಗಿದೆ. ರೈತರ ಮೇಲೆ ಇಷ್ಟೊಂದು ದ್ವೇಷ ಯಾಕೆ? ಮಿಶ್ರಾ ಅವರನ್ನು ಈವರೆಗೂ ಯಾಕೆ ಸಂಪುಟದಿಂದ ವಜಾಗೊಳಿಸಿಲ್ಲ' ಎಂದು ಅವರು ಪ್ರಶ್ನಿಸಿದ್ದಾರೆ.

'ದೇಶದ ಪ್ರತಿಯೊಬ್ಬ ನಾಗರಿಕನೂ ಇಂದು ರೈತರಿಗೆ ನ್ಯಾಯ ಒದಗಿಸುವಂತೆ ಆಗ್ರಹಿಸುತ್ತಿದ್ದಾನೆ. ನಿರ್ಧಾರ ನಿಮ್ಮ ಕೈಯಲ್ಲಿದೆ' ಎಂದು ಪ್ರಧಾನಿಯವರನ್ನು ಉದ್ದೇಶಿಸಿ ಕೇಜ್ರಿವಾಲ್ ಹೇಳಿದ್ದಾರೆ.