ಸ್ಮೃತಿ, ಹರ್ಮನ್‌ಗೆ 'ಕೋಟಿ' ನಿರೀಕ್ಷೆ

ಸ್ಮೃತಿ, ಹರ್ಮನ್‌ಗೆ 'ಕೋಟಿ' ನಿರೀಕ್ಷೆ

ಮುಂಬೈ (ಪಿಟಿಐ): ಚೊಚ್ಚಲ ಮಹಿಳಾ ಪ್ರೀಮಿಯರ್ ಲೀಗ್‌ (ಡಬ್ಲ್ಯುಪಿಎಲ್‌) ಕ್ರಿಕೆಟ್‌ ಟೂರ್ನಿಗಾಗಿ ಆಟಗಾರ್ತಿಯರ ಹರಾಜು ಪ್ರಕ್ರಿಯೆ ಸೋಮವಾರ ಇಲ್ಲಿ ನಡೆಯಲಿದ್ದು, ಭಾರತದ ಬ್ಯಾಟರ್‌ಗಳಾದ ಸ್ಮೃತಿ ಮಂದಾನ, ಹರ್ಮನ್‌ಪ್ರೀತ್ ಕೌರ್ ಮತ್ತು ಶಫಾಲಿ ವರ್ಮಾ ಅವರು ಹೆಚ್ಚು ಮೌಲ್ಯ ಗಳಿಸುವ ನಿರೀಕ್ಷೆ ಇದೆ.

ಭಾರತ ತಂಡದ ನಾಯಕಿ ಹರ್ಮನ್‌ಪ್ರೀತ್, ಶಫಾಲಿ, ಸ್ಮೃತಿ ಮತ್ತು ಆಲ್‌ರೌಂಡರ್ ದೀಪ್ತಿ ಶರ್ಮಾ ಹರಾಜಿನಲ್ಲಿ ₹ 1.25ರಿಂದ ₹ 2 ಕೋಟಿ ಪಡೆಯುವ ಸಾಧ್ಯತೆಯಿದೆ.

ಮಹಿಳಾ ಬಿಗ್‌ಬಾಷ್‌ ಲೀಗ್‌, ದಿ ಹಂಡ್ರೆಡ್‌ ಟೂರ್ನಿಗಳಲ್ಲಿ ಆಡಿರುವ ಸ್ಮೃತಿ ಅವರು ಫ್ರಾಂಚೈಸ್‌ ಕ್ರಿಕೆಟ್‌ನಲ್ಲಿ ಪರಿಣತ ಆಟಗಾರ್ತಿಯಾಗಿದ್ದಾರೆ. ಟಿ20 ಮಾದರಿಯಲ್ಲಿ ಸ್ಥಿರ ಸಾಮರ್ಥ್ಯದ ಮೂಲಕ ಗಮನಸೆಳೆದಿದ್ದಾರೆ.

ಶಫಾಲಿ ವರ್ಮಾ ಅವರು ಇತ್ತೀಚೆಗೆ 19 ವರ್ಷದೊಳಗಿನ ಮಹಿಳೆಯರ ಟಿ20 ವಿಶ್ವಕಪ್‌ ಜಯಿಸಿದ ಭಾರತ ತಂಡದ ನಾಯಕತ್ವ ವಹಿಸಿದ್ದರು. ಈ ಆರಂಭಿಕ ಬ್ಯಾಟರ್‌ ಮೇಲೆ ಎಲ್ಲ ತಂಡಗಳ ಕಣ್ಣು ನೆಟ್ಟಿದೆ.

ಬಿರುಸಿನ ಹೊಡೆತಗಳ ಆಟಗಾರ್ತಿ ರಿಚಾ ಘೋಷ್‌, ಜೆಮಿಮಾ ರಾಡ್ರಿಗಸ್‌, ಸ್ಪಿನ್ನರ್‌ಗಳಾದ ರಾಜೇಶ್ವರಿ ಗಾಯಕವಾಡ, ರಾಧಾ ಯಾದವ್‌, ಮಧ್ಯಮವೇಗಿಗಳಾದ ರೇಣುಕಾ ಠಾಕೂರ್, ಮೇಘನಾ ಸಿಂಗ್ ಮತ್ತು ಶಿಖಾ ಪಾಂಡೆ ಅವರತ್ತ ಕೂಡ ತಂಡಗಳು ಆಸಕ್ತಿ ವಹಿಸಬಹುದು.

ಆಸ್ಟ್ರೇಲಿಯಾದ ವಿಕೆಟ್‌ಕೀಪರ್ ಬ್ಯಾಟರ್ ಅಲಿಸಾ ಹೀಲಿ, ದಕ್ಷಿಣ ಆಫ್ರಿಕಾದ ಆಲ್‌ರೌಂಡರ್ ಮರಿಜನ್ ಕಾಪ್‌, ನ್ಯೂಜಿಲೆಂಡ್‌ನ ಅಮೆಲಿಯಾ ಕೆರ್‌ ಅವರತ್ತವೂ ತಂಡಗಳು ಪ್ರಮುಖವಾಗಿ ಗಮನಹರಿಸುವ ಸಾಧ್ಯತೆಯಿದೆ. ಸ್ಮೃತಿ ಮಂದಾನ, ಅಲಿಸಾ ಹಾಗೂ ಸೋಫಿ ಎಕ್ಸೆಲ್‌ಸ್ಟೋನ್ ಸೇರಿದಂತೆ 24 ಆಟಗಾರ್ತಿಯರಿಗೆ ತಲಾ ₹ 50 ಲಕ್ಷ ಮೂಲಬೆಲೆ ನಿಗದಿ ಮಾಡಲಾಗಿದೆ. ಅದರಲ್ಲಿ ಭಾರತದ 14 ಮತ್ತು ವಿದೇಶದ 10 ಆಟಗಾರ್ತಿಯರಿದ್ದಾರೆ.

ಪ್ರತಿ ತಂಡವು ಕನಿಷ್ಠ 15 ಮತ್ತು ಗರಿಷ್ಠ 18 ಆಟಗಾರ್ತಿಯರನ್ನು ಹೊಂದಬಹುದಾಗಿದೆ. ಮಾರ್ಚ್ 4ರಿಂದ 26ರವರೆಗೆ ಡಬ್ಲ್ಯುಪಿಎಲ್ ನಡೆಯಲಿದೆ. ಒಟ್ಟು 22 ಪಂದ್ಯಗಳು ನಡೆಯಲಿವೆ.