ಐಪಿಎಲ್ ಆರಂಭಕ್ಕೆ ಮುನ್ನವೇ ಅಬ್ಬರಿಸಿದ ಬ್ರೇಸ್ವೆಲ್, ಮ್ಯಾಕ್ಸ್ವೆಲ್
ಐಪಿಎಲ್ ಪಂದ್ಯಾವಳಿ ಆರಂಭಕ್ಕೆ ಮುನ್ನವೇ ಆರ್ಸಿಬಿ ಎದುರಾಳಿ ತಂಡಗಳಿಗೆ ಖಡಕ್ಕಾಗಿಯೇ ವಾರ್ನಿಂಗ್ ಕೊಟ್ಟಿದೆ. ಆರ್ ಸಿಬಿಯ ಅಭ್ಯಾಸ ಪಂದ್ಯದಲ್ಲಿ ಬ್ಯಾಟರ್ ಗಳು ಅಬ್ಬರಿಸಿದ್ದಾರೆ. ನ್ಯೂಜಿಲೆಂಡ್ನ ಮೈಕೆಲ್ ಬ್ರೇಸ್ವೆಲ್ ಈ ಐಪಿಎಲ್ನಲ್ಲಿ ಮಿಂಚುವ ಮುನ್ಸೂಚನೆ ನೀಡಿದ್ದಾರೆ.
ಆರ್ ಸಿಬಿ ಮೊದಲಿನಿಂದಲೂ ಬ್ಯಾಟಿಂಗ್ ಪವರ್ ಹೌಸ್ ಎನಿಸಿಕೊಂಡಿದೆ. ಈ ಬಾರಿ ತಂಡದ ಎಲ್ಲಾ ಬ್ಯಾಟರ್ ಗಳು ಅತ್ಯುತ್ತಮ ಫಾರ್ಮ್ನಲ್ಲಿರುವುದು ಶುಭ ಸುದ್ದಿಯಾಗಿದೆ. ವಿರಾಟ್ ಕೊಹ್ಲಿ, ಫಾಫ್ ಡು ಪ್ಲೆಸಿಸ್, ರಜತ್ ಪಾಟಿದಾರ್, ಗ್ಲೆನ್ ಮ್ಯಾಕ್ಸ್ವೆಲ್, ಮಿಚೆಲ್ ಬ್ರೇಸ್ವೆಲ್, ದಿನೇಶ್ ಕಾರ್ತಿಕ್ರಂತಹ ಬಲಿಷ್ಠ ಬ್ಯಾಟಿಂಗ್ ಲೈನ್ಅಪ್ ಹೊಂದಿದೆ.
ಅಭ್ಯಾಸದ ಪಂದ್ಯದಲ್ಲಿ ಪ್ರಮುಖ ಬ್ಯಾಟರ್ ಗಳು ಮಿಂಚಿರುವುದು ಮೊದಲನೇ ಪಂದ್ಯಕ್ಕೆ ಮುನ್ನ ತಂಡಕ್ಕೆ ಹೆಚ್ಚಿನ ಆತ್ಮವಿಶ್ವಾಸ ನೀಡಿದಂತಾಗಿದೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್ಗೆ ತಯಾರಿಯ ಭಾಗವಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಅಭ್ಯಾಸ ಪಂದ್ಯವನ್ನಾಡಿದೆ. ನಾಯಕ ಫಾಫ್ ಡುಪ್ಲೆಸಿಸ್ ಒಂದು ತಂಡವನ್ನು ಮುನ್ನಡೆಸಿದರೆ, ಸುಯೇಶ್ ಪ್ರಭುದೇಸಾಯಿ ಮತ್ತೊಂದು ತಂಡಕ್ಕೆ ನಾಯಕರಾಗಿದ್ದರು.
ಮೈಕೆಲ್ ಬ್ರೇಸ್ವೆಲ್ ಭರ್ಜರಿ ಶತಕ
ಮೊದಲು ಬ್ಯಾಟಿಂಗ್ ಮಾಡಿದ ಫಾಫ್ ಡು ಪ್ಲೆಸಿಸ್ ಪ್ಲೇಯಿಂಗ್ 11 20 ಓವರ್ ಗಳಲ್ಲಿ 5 ವಿಕೆಟ್ ಕಳೆದುಕೊಂಡು 215 ರನ್ಗಳನ್ನು ಕಲೆಹಾಕಿತು. ಮೈಕೆಲ್ ಬ್ರೇಸ್ವೆಲ್ 55 ಎಸೆತಗಳಲ್ಲಿ 8 ಬೌಂಡರಿ 7 ಭರ್ಜರಿ ಸಿಕ್ಸರ್ ಸಹಿತ ಅಜೇಯ 105 ರನ್ ಗಳಿಸಿ ಮಿಂಚಿದರು. ನಾಯಕ ಫಾಫ್ ಡುಪ್ಲೆಸಿಸ್ 35 ಎಸೆತಗಳಲ್ಲಿ 47 ರನ್ ಗಳಿಸಿದರು, ಡೇವಿಡ್ ವಿಲ್ಲಿ 11 ಎಸೆತಗಳಲ್ಲಿ 22 ರನ್ ಗಳಿಸಿದರು. ಈ ಬೃಹತ್ ಮೊತ್ತವನ್ನು ಬೆನ್ನತ್ತಿದ ಸುಯಶ್ ಪ್ಲೇಯಿಂಗ್ 11 ಕೂಡ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿತು.
ಸ್ಫೋಟಕ ಆಲ್ರೌಂಡರ್ ಗ್ಲೆನ್ ಮ್ಯಾಕ್ಸ್ವೆಲ್ 46 ಎಸೆತಗಳಲ್ಲಿ 78 ರನ್ ಗಳಿಸಿದರೆ, ಮಹಿಪಾಲ್ ಲೊಮ್ರೊರ್ 27 ಎಸೆತಗಳಲ್ಲಿ 48 ರನ್ ಗಳಿಸಿದರು. ಅನುಜ್ ರಾವತ್ 16 ಎಸೆತಗಳಲ್ಲಿ 32 ರನ್ ಗಳಿಸಿದರು. 20 ಓವರ್ ಗಳಲ್ಲಿ 6 ವಿಕೆಟ್ ಕಳೆದುಕೊಂಡು 217 ರನ್ ಗಳಿಸುವ ಮೂಲಕ ಜಯ ಸಾಧಿಸಿದೆ. ಖಾಸಗಿ ಕಾರ್ಯಕ್ರಮಕ್ಕೆ ತೆರಳಿದ್ದ ಕಾರಣ ವಿರಾಟ್ ಕೊಹ್ಲಿ ಅಭ್ಯಾಸ ಪಂದ್ಯ ತಪ್ಪಿಸಿಕೊಂಡರೆ, ಇನ್ನೂ ಫಿಟ್ ಆಗದ ರಜತ್ ಪಾಟಿದಾರ್, ಜೋಶ್ ಹೇಜಲ್ವುಡ್ ಅಭ್ಯಾಸ ಪಂದ್ಯದಲ್ಲಿ ಆಡಲಿಲ್ಲ.
ಮೊದಲ ಪಂದ್ಯಕ್ಕೆ ಸಂಪೂರ್ಣವಾಗಿ ಸಜ್ಜು
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯಕ್ಕೆ ಸಜ್ಜಾಗಿದೆ. ಏಪ್ರಿಲ್ 2ರಂದು ಭಾನುವಾರ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಈ ಪಂದ್ಯ ನಡೆಯಲಿದೆ. ಎರಡೂ ತಂಡಗಳಲ್ಲಿ ಬಲಿಷ್ಠ ಬ್ಯಾಟಿಂಗ್ ಪಡೆಯನ್ನು ಹೊಂದಿದ್ದು, ರನ್ ಹೊಳೆಯೇ ಹರಿಯುವ ನಿರೀಕ್ಷೆ ಇದೆ. ಮೊದಲ ಪಂದ್ಯಕ್ಕೆ ಆರ್ ಸಿಬಿ ತಂಡಕ್ಕೆ ವನಿಂದು ಹಸರಂಗ ಅಲಭ್ಯರಾಗಿದ್ದಾರೆ. ಮೈಕೆಲ್ ಬ್ರೇಸ್ವೆಲ್, ಗ್ಲೆನ್ ಮ್ಯಾಕ್ಸ್ವೆಲ್, ಫಾಫ್ ಡುಪ್ಲೆಸಿಸ್ ಮತ್ತು ರೀಸ್ ಟೋಪ್ಲಿ ಮೊದಲ ಪಂದ್ಯದಲ್ಲಿ ಆಡುವುದು ಖಚಿತವಾಗಿದೆ.