ಫೈನಲ್‌ ಪಂದ್ಯಕ್ಕೂ ಮುನ್ನ ನಡೆದಿದ್ದ ಇಂಟ್ರಸ್ಟಿಂಗ್‌ ಸ್ಟೋರಿ ಹಂಚಿಕೊಂಡ 'ಚಿನ್ನ'ದ ಹುಡುಗ

ಫೈನಲ್‌ ಪಂದ್ಯಕ್ಕೂ ಮುನ್ನ ನಡೆದಿದ್ದ ಇಂಟ್ರಸ್ಟಿಂಗ್‌ ಸ್ಟೋರಿ ಹಂಚಿಕೊಂಡ 'ಚಿನ್ನ'ದ ಹುಡುಗ

ಟೋಕಿಯೋ ಒಲಿಂಪಿಕ್ಸ್- 2021ರಲ್ಲಿ ಜಾವೆಲಿನ್ ಎಸೆತದಲ್ಲಿ ಚಿನ್ನದ ಪದಕ ಗೆದ್ದ ನಂತರ ನೀರಜ್ ಚೋಪ್ರಾ ಅವರು ಸದ್ಯ ನ್ಯಾಷನಲ್ ಸೆನ್ಸೇಷನ್ ಆಗಿದ್ದಾರೆ. ಜಪಾನ್ ನಿಂದ ಭಾರತಕ್ಕೆ ಮರಳಿದ ಬಳಿಕ ಇವರಿಗೆ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ. ಸದ್ಯ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಫೈನಲ್ ನಲ್ಲಿ ನಡೆದ ಘಟನೆ ಬಗ್ಗೆ ವಿವರಿಸಿದ್ದಾರೆ.

ಸಂದರ್ಶನವೊಂದರಲ್ಲಿ ಮಾತನಾಡಿದ ನೀರಜ್ ಚೋಪ್ರಾ, "ಪಂದ್ಯಾವಳಿಯ ಫೈನಲ್ ಹಂತದ ಆರಂಭದಲ್ಲಿ ನಾನು ನನ್ನ ಜಾವೆಲಿನ್ ಹುಡುಕುತ್ತಿದ್ದೆ. ಆದರೆ ನನಗೆ ಎಲ್ಲೂ ಕಾಣಸಿಕ್ಕಿಲ್ಲ. ಇದ್ದಕ್ಕಿದ್ದಂತೆ ಪಾಕಿಸ್ತಾನದ ಕ್ರೀಡಾಪಟು ಅರ್ಷದ್ ನದೀಮ್ ಅವರು ನನ್ನ ಜಾವೆಲಿನ್ ಹಿಡಿದು ತಿರುಗಾಡುವುದನ್ನು ನೋಡಿದೆ. ಕೂಡಲೇ ಆತನಲ್ಲಿ ತೆರಳಿ, ಭಾಯ್ ಈ ಜಾವೆಲಿನ್ ನನಗೆ ಕೊಡಿ. ಯಾಕೆಂದರೆ ಅದು ನನ್ನದು ಎಂದು ಹೇಳಿದೆ. ನಂತರ ಅವರು ನನಗೆ ಹಿಂತಿರುಗಿಸಿದರು" ಎಂದು ಹೇಳಿದ್ದಾರೆ.

ಪಾಕಿಸ್ತಾನದ ಕ್ರೀಡಾಪಟು ಅರ್ಷದ್ ನದೀಮ್ ಬಗ್ಗೆ ಮಾತನಾಡಿದ 'ಚಿನ್ನ'ದ ಹುಡುಗ, "ಅರ್ಹತಾ ಸುತ್ತು ಹಾಗೂ ಫೈನಲ್ ನಲ್ಲಿ ಅರ್ಷದ್ ಉತ್ತಮ ಪ್ರದರ್ಶನ ನೀಡಿದರು. ಅವರು ಜಾವೆಲಿನ್ ನಲ್ಲಿ ಹೆಚ್ಚಿನ ಆಸಕ್ತಿಯನ್ನು ತೋರಿಸಲು ಮತ್ತು ಭವಿಷ್ಯದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಪ್ರದರ್ಶನ ನೀಡಲು ಅವಕಾಶವಿದೆ" ಎಂದು ಚೋಪ್ರಾ ವಿವರಿಸಿದ್ದಾರೆ.