BBK9 ಸಿದ್ಧತೆ ಬಹುತೇಕ ಅಂತ್ಯ: ಹೇಗಿದೆ ಈ ಬಾರಿಯ ಬಿಗ್ ಬಾಸ್ ಮನೆ..?

ಎಂಟು ಆವೃತ್ತಿಗಳನ್ನು ಯಶಸ್ವಿಯಾಗಿ ಪೂರೈಸಿರುವ ಬಿಗ್ ಬಾಸ್ ಕನ್ನಡ 9ನೇ ಆವೃತ್ತಿಗೆ ಸಜ್ಜಾಗುತ್ತಿದೆ. ಸಪ್ಟೆಂಬರ್ 24ರಿಂದ ಬಿಗ್ ಬಾಸ್ ರಿಂದ ಬಿಗ್ ಬಾಸ್ ಸೀಜನ್ 9 ಆರಂಭವಾಗಲಿದೆ. ಕನ್ನಡ ಬಿಗ್ ಬಾಸ್ ಓಟಿಟಿ ಹಾಗೂ ಹಳೆಯ ಸ್ಫರ್ಧಿಗಳು ಸೇರಿದಂತೆ ಒಟ್ಟು 16 ಸ್ಫರ್ಧಿಗಳು ಈ ಬಾರಿಯ ಬಿಗ್ ಬಾಸ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಬಿಗ್ ಬಾಸ್ ಸೀಜನ್ 9ಕ್ಕೆ ಭರ್ಜರಿ ತಯಾರಿ ನಡೆಯುತ್ತಿದ್ದು, ಈಗಾಗಲೇ ಎರಡು ಪ್ರೋಮೋಗಳನ್ನು ಬಿಡುಗಡೆ ಮಾಡಲಾಗಿದೆ. ಅಲ್ಲದೇ ಪ್ರೋಮೋ ಮೇಕಿಂಗ್ ವಿಡಿಯೋ ಕೂಡ ವೈರಲ್ ಆಗಿದ್ದು, ಬಿಗ್ ಬಾಸ್ ಮುಂದಿನ ಸೀಜನ್ ಮೇಲೆ ಕಿರುತೆರೆ ಪ್ರೇಕ್ಷಕರಿಗೆ ದಿನದಿಂದ ದಿನಕ್ಕೆ ಕುತೂಹಲ ಹೆಚ್ಚಾಗುತ್ತಿದೆ. ಇದೇ ಸಪ್ಟೆಂಬರ್ 24 ರಿಂದ ರಾತ್ರಿ 9.30ರಿಂದ-10:30ರ ವರೆಗೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಬಿಗ್‌ಬಾಸ್ ಸೀಜನ್ 9 ಪ್ರಸಾರವಾಗಲಿದೆ.
ಮತ್ತೆ ಬಿಗ್ ಬಾಸ್ ವೇದಿಕೆ ಮೇಲೆ ಕಿಚ್ಚ ಸುದೀಪ್ ಅವರ ನಿರೂಪಣೆ ನೋಡಲು ಅವರ ಅಭಿಮಾನಿಗಳು ಕೂಡ ಕಾತುರರಾಗಿದ್ದಾರೆ. ಸಪ್ಟೆಂಬರ್ 24ರ ಬಳಿಕ ಇನ್ನು ಪ್ರತಿ ವಾರಾಂತ್ಯದಲ್ಲಿ ಕಿರುತೆರೆ ವೀಕ್ಷಕರಿಗೆ ಕಿಚ್ಚನ ದರ್ಶನವಾಗಲಿದ್ದು, ಈ ಬಾರಿ ಕಿಚ್ಚ ಸುದೀಪ್ ಅವರ ವೇಷಭೂಷಣ ಹೇಗಿರಬಹುದು ಎನ್ನುವ ಕುತೂಹಲ ಎಲ್ಲರಲ್ಲಿದೆ. ಭಾನುವಾರ(ಸಪ್ಟೆಂಬರ್ 24) ರಂದು ಕಿಚ್ಚ ಸುದೀಪ್ ಬಿಗ್ ಬಾಸ್ ವೇದಿಕೆ ಮೇಲೆ ಗ್ರ್ಯಾಂಡ್ ಎಂಟ್ರಿಯಾಗಲಿದ್ದು, ಬಳಿಕ ಅವರು ಈ ಬಾರಿಯ ಬಿಗ್ ಬಾಸ್ ಸ್ಫರ್ಧಿಗಳನ್ನು ಪರಿಚಯ ಮಾಡಿಕೊಡಲಿದ್ದಾರೆ.
ಬಿಗ್ ಬಾಸ್ 9ಕ್ಕೆ ವೇದಿಕೆ ಸಜ್ಜಾಗುತ್ತಿರುವ ಬೆನ್ನಲ್ಲೇ ಕಲರ್ಸ್ ಕನ್ನಡ ವಾಹಿನಿಯ ಕ್ಲಸ್ಟರ್ ಹೆಡ್ ಪರಮೇಶ್ವರ್ ಗುಂಡ್ಕಲ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಬಿಗ್ ಬಾಸ್ ಮನೆಯ ಫೋಟೋ ಹಂಚಿಕೊಂಡಿದ್ದಾರೆ. ಬಿಗ್ ಬಾಸ್ ಮನೆಯನ್ನು ನೋಡುತ್ತಿರುವ ಪರಮೇಶ್ವರ್ ಗುಂಡ್ಕಲ್ ಬಹುತೇಕ ಸಿದ್ಧತೆ ಮುಗಿದೆ ಎಂದು ಬರೆದುಕೊಂಡಿದ್ದಾರೆ.
ಇನ್ನು ಬಿಗ್ ಬಾಸ್ ಸೀಜನ್ 9ರ 16 ಸ್ಪರ್ಧಿಗಳ ಪೈಕಿ ರಾಕೇಶ್ ಅಡಿಗ, ಸಾನ್ಯಾ ಅಯ್ಯರ್, ಆರ್ಯವರ್ಧನ್ ಗುರೂಜಿ ಹಾಗೂ ರೂಪೇಶ್ ಶೆಟ್ಟಿ ಒಟಿಟಿಯಿಂದ ಟಿವಿ ಸೀಸನ್ಗೆ ಬಂದಿರುವ ಸ್ಫರ್ಧಿಗಳಾದರೆ, ಹಳೆಯ ಸೀಸನ್ನ ಸ್ಪರ್ಧಿಗಳಾದ ಪ್ರಶಾಂತ್ ಸಂಬರಗಿ, ಅನುಪಮಾ ಗೌಡ, ದೀಪಿಕಾ ದಾಸ್ ಸೇರಿ ಐವರು ಹಳೆಯ ಸೀಜನ್‌ನ ಸ್ಫರ್ಧಿಗಳು ಬಿಗ್ ಬಾಸ್ ಸೀಜನ್ 9ಕ್ಕೆ ಪ್ರವೇಶ ಪಡೆಯಲಿದ್ದಾರೆ. ಇನ್ನುಳಿದ 9 ಸ್ಫರ್ಧಿಗಳು ಯಾರು ಎನ್ನುವ ಕುತೂಹಲ ಎಲ್ಲರಲ್ಲಿದೆ.
ಬಿಗ್ ಬಾಸ್ ಸೀಜನ್ 9ಕ್ಕೆ ಬರಲಿರುವ ಸಂಭಾವ್ಯ ಸ್ಫರ್ಧಿಗಳ ಪಟ್ಟಿ ಇಲ್ಲಿದೆ. ನಟಿ ಪ್ರೇಮ, ಹಿರಿಯ ನಟ ಟೆನ್ನಿಸ್ ಕೃಷ್ಣ, ನಟ ನವೀನ್ ಕೃಷ್ಣ, ಚೆಲ್ಲಾಟ ಚಿತ್ರದ ನಟಿ ರೇಖಾ ವೇದವ್ಯಾಸ್, ಹಿಟ್ಲರ್ ಕಲ್ಯಾಣ ಧಾರಾವಾಹಿ ನಟ ದಿಲೀಪ್ ರಾಜ್, ಲವ್ ಗುರು ಚಿತ್ರದ ನಾಯಕ ತರುಣ್ ಚಂದ್ರ, ಗಂಡ-ಹೆಂಡತಿ ಚಿತ್ರದ ನಿರ್ದೇಶಕ ರವಿ ಶ್ರೀವಾಸ್ತವ, ಕಿರುತೆರೆ ಕಲಾವಿದ ಮಿಮಿಕ್ರಿ ಗೋಪಿ, ಟಿಕ್ ಟಾಕ್ ಆಯಂಡ್ ರೀಲ್ಸ್ ಸ್ಟಾರ್ ಭೂಮಿಕಾ ಬಸವರಾಜ್, ಪುಟ್ಟ ಗೌರಿ ಮದುವೆ ಹಾಗೂ ನಾಗಿಣಿ ಧಾರಾವಾಹಿ ಖ್ಯಾತಿಯ ನಮೃತಾ ಗೌಡ, ಗಾಯಕಿ ಆಶಾ ಭಟ್, ಮಾಜಿ ಕ್ರಿಕೆಟಿಗ ವಿನಯ್ ಕುಮಾರ್, ನಿರೂಪಕ ಚಂದನ್ ಈ 13 ಜನರ ಪೈಕಿ 9 ಮಂದಿ ಬಿಗ್ ಬಾಸ್ ಸೀಜನ್ 9ಕ್ಕೆ ಪ್ರವೇಶ ಪಡೆಯುವ ಸಾಧ್ಯತೆ ಇದೆ.