ಲಾರಿಯ ಕ್ಯಾಬಿನ್ ಒಳಗೆ ಮರದ ಪ್ಲಾಟ್ ಫಾರಂ ನಿರ್ಮಿಸಿ ವಂಚನೆ: ರೈತರ ಕೈಗೆ ಸಿಕ್ಕಿಬಿದ್ದಿದ್ಹೇಗೆ ಚಾಲಕ

ಲಾರಿಯ ಕ್ಯಾಬಿನ್ ಒಳಗೆ ಮರದ ಪ್ಲಾಟ್ ಫಾರಂ ನಿರ್ಮಿಸಿ ವಂಚನೆ: ರೈತರ ಕೈಗೆ ಸಿಕ್ಕಿಬಿದ್ದಿದ್ಹೇಗೆ ಚಾಲಕ

ಬೆಂಗಳೂರು: ರೈತರಿಗೆ ಆಂಧ್ರ ಪ್ರದೇಶದ ಮೂಲಕದ ಲಾರಿ ಚಾಲಕ ಎಸಗುತ್ತಿದ್ದ ಮಹಾಮೋಸ ಬಟಾಬಯಲಾಗಿದೆ. ಗೊಬ್ಬರದ ಲೋಡಿನಲ್ಲಿ ವ್ಯತ್ಯಾಸ ಮಾಡಿ ಹಣ ವಂಚಿಸುತ್ತಿದ್ದ ವಂಚಕ ಚಾಲಕನನ್ನು ಲಾರಿ ಸಮೇತ ಹಿಡಿದು ರೈತರು ಪೊಲೀಸರಿಗೆ ಒಪ್ಪಿಸಿದ್ದಾರೆ.

ವಿವರಣೆಗೆ ಬರುವುದಾದರೆ ದೇವನಹಳ್ಳಿ ತಾಲ್ಲೂಕಿನ ಸಿಂಗವಾರ ಗ್ರಾಮದ ರೈತರು ಆಂಧ್ರದ ಲೇಪಾಕ್ಷಿಯಿಂದ ಕುರಿಗೊಬ್ಬರ ತರಿಸಿಕೊಳ್ಳುತ್ತಿದ್ದರು. ಇದನ್ನೇ ಬಂಡವಾಳ ಮಾಡಿಕೊಂಡ ಲಾರಿ ಚಾಲಕ ಲಾರಿಯ ಕ್ಯಾಬಿನ್ ಒಳಗೆ ಒಂದು ಅಡಿ ಎತ್ತರದ ಮರದ ಪ್ಲಾಟ್ ಫಾರಂ ನಿರ್ಮಾಣ ಮಾಡಿ ವಂಚಿಸುತ್ತಿದ್ದ. ಒಂದು ಲೋಡ್ ಅಂತ ಹೇಳಿ ಅರ್ಧಂ ಬರ್ಧಂ ಲೋಡ್ ಗೊಬ್ಬರ ಹಾಕುತ್ತಿದ್ದ.

ಇಂದು ಸಹ ಲಾರಿ ಚಾಲಕ ಆಂಧ್ರದ ಲೇಪಾಕ್ಷಿಯಿಂದ ಕುರಿಗೊಬ್ಬರ ತಂದಿದ್ದ. ಆದರೆ, ಗೊಬ್ಬರ ಕಡಿಮೆ ಇರುವುದನ್ನು ನೋಡಿ ಅನುಮಾನಗೊಂಡ ರೈತರು ಲಾರಿ ಪರಿಶೀಲಿಸಿದಾಗ ಚಾಲಕನ ಮೋಸ ಬಟಾಬಯಲಾಗಿದೆ. ತಕ್ಷಣ ಚಾಲಕ ಹಾಗೂ ಲಾರಿಯನ್ನು ರೈತರು ಪೊಲೀಸರ ವಶಕ್ಕೆ ನೀಡಿದ್ದಾರೆ.

ಈ ಸಂಬಂಧ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ವಿಜಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.