ವಿಮಾನದಲ್ಲಿ ಬೆಂಗಳೂರಿಗೆ ಬಂದು ಮನೆ ಕಳ್ಳತನ ಮಾಡುತ್ತಿದ್ದ ಮೂವರು ಹೈಪ್ರೊಫೈಲ್ ಕಳ್ಳರು ಅಂದರ್..!
ವಿಮಾನದಲ್ಲಿ ಬೆಂಗಳೂರಿಗೆ ಬಂದು ಮನೆ ಕಳ್ಳತನ ಮಾಡುತ್ತಿದ್ದ ಮೂವರು ಹೈಪ್ರೊಫೈಲ್ ಕಳ್ಳರು ಅಂದರ್..!
ಬೆಂಗಳೂರು: ಐಷಾರಾಮಿ ಜೀವನ ನಡೆಸಲು ಹಾಗೂ ಮೋಜು ಮಸ್ತಿ ನಡೆಸುವ ಸಲುವಾಗಿ ವಿಮಾನದಲ್ಲಿ ಬೆಂಗಳೂರಿಗೆ ಬಂದು ಮನೆ ಕಳ್ಳತನ ಮಾಡುತ್ತಿದ್ದ ಮೂವರು ಕುಖ್ಯಾತ ಅಂತಾರಾಜ್ಯ ಕಳ್ಳರನ್ನು ಬಸವನಗುಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಅವರಿಂದ 1.80 ಕೋಟಿ ರೂ. ಮೌಲ್ಯದ ಹಣ,ಆಭರಣ, ಲ್ಯಾಪ್‍ಟಾಪ್ ಇನ್ನಿತರೆ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಪಶ್ಚಿಮಬಂಗಾಳ ಮೂಲದ ಬಿಲಾಲ್ ಮಂಡಲ್ (33), ಮಹರಾಷ್ಟ್ರದ ಸಲೀಂ ರಫಿಕ್ ಶೇಕ್ (43) ಮತ್ತು ಬಿಹಾರದ ಮೊಹಮ್ಮದ್ ಜಾಲೀಕ್ (36) ಬಂಧಿತ ಆರೋಪಿಗಳು.
ಬಂಧಿತರಿಂದ ಒಟ್ಟು 27 ಪ್ರಕರಣಗಳನ್ನು ಭೇದಿಸಿರುವ ಪೊಲೀಸರು ಸುಮಾರು 60 ಸಾವಿರ ರೂ.ಗಳ ಮೌಲ್ಯದ ಒಂದು ದ್ವಿಚಕ್ರ ವಾಹನ, ಎರಡು ಲಕ್ಷ ಮೌಲ್ಯದ ವಿವಿಧ ಕಂಪೆನಿಯ 24 ವಾಚ್‍ಗಳು, 50 ಸಾವಿರ ಮೌಲ್ಯದ ಲ್ಯಾಪ್‍ಟಾಪ್, 46700 ರೂ. ನಗದು ಹಾಗೂ ಸುಮಾರು 1.64 ಕೋಟಿ ರೂ. ಮೌಲ್ಯದ 3ಕೆಜಿ 286 ಗ್ರಾಂ ತೂಕದ ವಿವಿಧ ಮಾದರಿಯ ಚಿನ್ನಾಭರಣಗಳು, 12.60 ಲಕ್ಷ ರೂ. ಮೌಲ್ಯದ 18 ಕೆಜಿ ವಿವಿಧ ಮಾದರಿಯ ಬೆಳ್ಳಿ ಸಾಮಾನುಗಳು ಒಳಗೊಂಡಂತೆ 1.80 ಕೋಟಿ ರೂ. ಮೌಲ್ಯದ ಕಳವು ಮಾಡಿದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಬಸವನಗುಡಿ ಪೊಲೀಸ್ ಠಾಣೆ ವ್ಯಾಪ್ತಿಯ ಹಳೆ ಕನಕಪುರ ರಸ್ತೆಯಲ್ಲಿ ನಡೆದ ಮನೆಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ಪತ್ತೆ ಮಾಡಿ ಕಳವು ಮಾಲನ್ನು ವಶಪಡಿಸಿಕೊಳ್ಳಲು ಬಸವನಗುಡಿ ಠಾಣೆ ಇನ್ಸ್‍ಪೆಕ್ಟರ್ ನೇತೃತ್ವದಲ್ಲಿ ತಂಡ ರಚಿಸಲಾಗಿತ್ತು.ಈ ತಂಡ ಸಿಸಿ ಟಿವಿ ಕ್ಯಾಮೆರಾದ ಸುಳಿವನ್ನು ಆಧರಿಸಿ ಮಾಹಿತಿ ಕಲೆ ಹಾಕಿ ಮೂವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ಆರೋಪಿಗಳನ್ನು ಹೆಚ್ಚಿನ ವಿಚಾರಣೆಗೊಳಪಡಿಸಿದಾಗ, ಆರೋಪಿಗಳು ಕಳ್ಳತನ ಮಾಡುವ ಉದ್ದೇಶಕ್ಕಾಗಿಯೇ ವಿಮಾನದ ಮೂಲಕ ಬೆಂಗಳೂರಿಗೆ ಬರುತ್ತಿದ್ದರು ಎಂಬ ಅಂಶ ಬೆಳಕಿಗೆ ಬಂದಿದೆ. ನಗರದ ವಿವಿಧ ಕಡೆಗಳಲ್ಲಿ ಬಾಡಿಗೆಗೆ ಮನೆಪಡೆದುಕೊಂಡು ಬೀಗ ಹಾಕಿದ ಮನೆಗಳನ್ನು ಇವರು ಗಮನಿಸುತ್ತಿದ್ದರು ಎನ್ನಲಾಗಿದೆ.
ರಾತ್ರಿ ವೇಳೆ ಕಳ್ಳತನ ಮಾಡುತ್ತಿದ್ದರು. ಕಳ್ಳತನ ಮಾಡಿದ ಚಿನ್ನ ಹಾಗೂ ಬೆಳ್ಳಿ ಆಭರಣಗಳನ್ನು ಮುಂಬೈ ಹಾಗೂ ಹೈದರಾಬಾದ್ ನಗರಗಳಲ್ಲಿ ಮಾರಾಟ ಮಾಡಿ ಹಣವನ್ನು ಹಂಚಿಕೊಳ್ಳುತ್ತಿದ್ದರು. ಇನ್ನು ಕೆಲವು ಒಡವೆಗಳನ್ನು ಚಿನ್ನಾಭರಣ ಅಂಗಡಿಯಲ್ಲಿ ಕೊಟ್ಟು ಕರಗಿಸಿ ತಮಗೆ ಬೇಕಾದ ರೀತಿಯಲ್ಲಿ ಮಾರ್ಪಾಟು ಮಾಡಿಕೊಂಡು ಮುತ್ತೂಟ ಫೈನಾನ್ಸ್ ಹಾಗೂ ಇನ್ನಿತರ ಸಹಕಾರಿ ಬ್ಯಾಂಕುಗಳಲ್ಲಿ ತಮ್ಮ ಹೆಸರಿನಲ್ಲಿ ಖಾತೆ ತೆರೆದು ಒಡವೆಗಳನ್ನು ಅಡಮಾನ ಮಾಡುತ್ತಿದ್ದರು ಎಂಬುದು ಪೊಲೀಸರ ವಿಚಾರಣೆಯಿಂದ ತಿಳಿದು ಬಂದಿದೆ. ಬಂದ ಹಣವನ್ನು ತಮ್ಮ ಐಷಾರಾಮಿ ಮೋಜು-ಮಸ್ತಿಗಾಗಿ ಬಳಸುತ್ತಿದ್ದರು. ಕಳೆದ ಮೂರು ವರ್ಷಗಳಿಂದ ಇದೇ ರೀತಿ ಆರೋಪಿಗಳು ಕಳ್ಳತನ ಮಾಡುತ್ತಿದ್ದದ್ದು ವಿಚಾರಣೆಯಿಂದ ಗೊತ್ತಾಗಿದೆ. ದಕ್ಷಿಣ ವಿಭಾಗದ ಉಪ ಪೊಲೀಸ್ ಆಯುಕ್ತ ಹರೀಶ್‍ಪಾಂಡೆ ಅವರ ಮಾರ್ಗದರ್ಶನದಲ್ಲಿ ಜಯನಗರ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಶ್ರೀನಿವಾಸ್ ಅವರ ನೇತೃತ್ವದಲ್ಲಿ ಬಸವನಗುಡಿ ಠಾಣೆ ಇನ್ಸ್‍ಪೆಕ್ಟರ್ ರಮೇಶ್ ಹಾಗೂ ಸಬ್‍ಇನ್ಸ್‍ಪೆಕ್ಟರ್‍ಗಳಾದ ಪ್ರಸನ್ನಕುಮಾರ್, ಪ್ರವೀಣ್ ಹೊಸೂರ ಹಾಗೂ ಸಿಬ್ಬಂದಿಗಳನ್ನೊಳಗೊಂಡ ತಂಡ ಆರೋಪಿಗಳನ್ನು ಬಂಧಿಸಿ ಮಾಲನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಈ ಉತ್ತಮ ಕಾರ್ಯಾಚರಣೆಯನ್ನು ನಗರ ಪೊಲೀಸ್ ಆಯುಕ್ತ ಕಮಲ್‍ಪಂಥ್ ಹಾಗೂ ಹೆಚ್ಚುವರಿ ಪೊಲೀಸ್ ಆಯುಕ್ತರು ಪ್ರಶಂಸಿಸಿದ್ದಾರೆ.