ದಿವ್ಯ ನಿರ್ಲಕ್ಷ್ಯಕ್ಕೀಡಾಗಿರುವ ಕಲೆಕ್ಟರ್ ಥ್ಯಾಕರೆ ಹಾಗೂ ಬ್ರಿಟಿಷರ ಸಮಾಧಿಗಳು
ಧಾರವಾಡ: ವ್ಯಾಪಾರದ ಉದ್ದೇಶದಿಂದ ಭಾರತಕ್ಕೆ ಬಂದ ಬ್ರಿಟಿಷ್‌ರು ಕ್ರಮೇಣ ಇಲ್ಲಿ ರಾಜಕೀಯ ಅಧಿಪತ್ಯ ಸ್ಥಾಪಿಸಿದರು.ಇಲ್ಲಿನ ಸಂಪತ್ತನ್ನು ಅವರು ತಮ್ಮ ನಾಡಿಗೆ ಕೊಂಡೊಯ್ದಿದ್ದು ನಿಜವಾದರೂ, ಭಾರತದ ಸಾಮಾಜಿಕ,ರಾಜಕೀಯ ಸಮಾನತೆಗೆ, ಎಲ್ಲರ ಶಿಕ್ಷಣ,ಆರೋಗ್ಯ, ಧಾರ್ಮಿಕ ಸ್ವಾತಂತ್ರ‍್ಯಗಳಿಗೆ ಸಮಾನ ಅವಕಾಶಗಳನ್ನು ಕಲ್ಪಿಸಿ ದೇಶದಲ್ಲಿ ಬದಲಾವಣೆಯ ಗಾಳಿ ತಂದದ್ದು ಸುಳ್ಳಲ್ಲ. ಶಿಕ್ಷಣದ ಕಾಶಿ ಎನಿಸಿರುವ ಧಾರವಾಡಕ್ಕೆ ಆ ಹಿರಿಮೆ ಬರಲು ಕ್ರಿಶ್ಚಿಯನ್ ಮಿಶನರಿಗಳ ಕೊಡುಗೆ ಬಹಳ ದೊಡ್ಡದು.ಮುಂಬೈ ಪ್ರಾಂತ್ಯದ ಪ್ರಮುಖ ಆಡಳಿತ ಕೇಂದ್ರವಾಗಿದ್ದ ಧಾರವಾಡ ಸ್ವಾತಂತ್ರ‍್ಯ ಚಳುವಳಿಗೂ ಬೀಜ ಬಿತ್ತಿದ ನೆಲ. ಸಮೀಪದ ಕಿತ್ತೂರಿನ ರಾಣಿ ಚೆನ್ನಮ್ಮ ಹಾಗೂ ಬ್ರಿಟಿಷ್ ಕಲೆಕ್ಟರ್ ಥ್ಯಾಕರೆ ನಡುವಿನ ಕದನ ಸಮಸ್ತ ಕನ್ನಡಿಗರಲ್ಲಿ ಇಂದಿಗೂ ಮೈ ನವಿರೇಳಿಸುತ್ತದೆ. ೧೮೨೪ ರಲ್ಲಿ ಕಿತ್ತೂರು ಚೆನ್ನಮ್ಮನ ಬಲಗೈ ಬಂಟ ,ಶೂರ ಸೈನಿಕ ಅಮಟೂರು ಬಾಳಪ್ಪನಿಂದ ಹತ್ಯೆಯಾದ ಧಾರವಾಡದ ಅಂದಿನ ಕಲೆಕ್ಟರ್ ಜಾನ್ ಥ್ಯಾಕರೆಯ ಸಮಾಧಿ ಧಾರವಾಡದಲ್ಲಿ ಇಂದು ಅತ್ಯಂತ ಶೋಚನೀಯ ಸ್ಥಿತಿಯಲ್ಲಿದೆ.
ನಗರದ ಶಿವಾಜಿ ವೃತ್ತದಿಂದ ನವಲಗುಂದ ರಸ್ತೆಯ ಹೆಬ್ಬಳ್ಳಿ ಅಗಸಿ ಕಡೆ ಸಾಗಿದರೆ ಬ್ರಿಟಿಷ್ ಕಲೆಕ್ಟರ್ ಥ್ಯಾಕರೆ ಸೇರಿದಂತೆ ಅನೇಕ ಕ್ರಿಶ್ಚಿಯನ್ ಸಮಾಧಿಗಳಿವೆ. ನಮ್ಮ ಇತಿಹಾಸದ ಹೆಮ್ಮೆಯ ಸ್ಮಾರಕಗಳಾಗಿ, ಧಾರವಾಡದ ಮಹತ್ವದ ಸ್ಥಳಗಳಾಗಿ ಇರಬೇಕಾಗಿದ್ದ ಈ ಸ್ಥಳ ಇಂದು ಕಾಲಿಡಲೂ ಸಾಧ್ಯವಾಗದ ಹೀನ ಸ್ಥಿತಿ ತಲುಪಿದೆ. ಪಕ್ಕದಲ್ಲಿಯೇ ವಧಾಲಯ ಇರುವ ಕಾರಣದಿಂದ ಪ್ರಾಣಿಗಳ ವಧೆಯ ತ್ಯಾಜ್ಯ, ದುರ್ನಾತದಿಂದ ಇಲ್ಲಿನ ವಾತಾವರಣ ಸಂಪೂರ್ಣ ಕಲುಷಿತವಾಗಿದೆ. ಧಾರವಾಡದ ಶಿಕ್ಷಣ ,ಆಡಳಿತ,ಆರೋಗ್ಯ ಅಭಿವೃದ್ದಿಗೆ ಕೊಡುಗೆ ನೀಡಿದ ಮಹನೀಯರ ಸ್ಮಾರಕಗಳನ್ನು ಗೌರವಿಸಬೇಕಾದ ನಾವು ಅವುಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿರುವುದು ನಮ್ಮ ಅಭಿಮಾನಶೂನ್ಯತೆಗೆ ಹಿಡಿದ ಕನ್ನಡಿಯಾಗಿದೆ.
ಕಿತ್ತೂರು ಸಂಸ್ಥಾನದ ಮಲ್ಲಸರ್ಜ ದೇಸಾಯಿ ಹಾಗೂ ಕಾಕತಿಯ ಚೆನ್ನಮ್ಮ ದಂಪತಿಗಳಿಗೆ ಮಕ್ಕಳಿಲ್ಲದ ಕಾರಣ , ಮಲ್ಲಸರ್ಜ ಅನಾರೋಗ್ಯದಿಂದ ೧೮೨೪ ರಲ್ಲಿ ನಿಧನರಾಗುವ ಮುನ್ನ ಶಿವಲಿಂಗರುದ್ರ ಸರ್ಜ ಎಂಬ ಬಾಲಕನನ್ನು ದತ್ತು ತೆಗೆದುಕೊಳ್ಳುತ್ತಾರೆ. ಈ ದತ್ತು ಪ್ರಕ್ರಿಯೆ ಕಾನೂನು ಬದ್ಧವಾಗಿಲ್ಲ ಎಂಬ ಅನುಮಾನದೊಂದಿಗೆ ಧಾರವಾಡದ ಅಧಿಕಾರಿಗಳ ತಂಡ ಕಿತ್ತೂರಿಗೆ ಭೇಟಿ ನೀಡಿದಾಗ , ಮಲ್ಲಸಜ್ಜ ಆಗಲೇ ಮರಣ ಹೊಂದಿರುತ್ತಾನೆ. ಮಲ್ಲಸಜ್ಜ ಜೀವಂತವಿದ್ದಾಗಲೇ ದತ್ತು ಸ್ವೀಕಾರವಾಗಿದೆ ಎಂಬುದನ್ನು ಸಾಧಿಸುವ ಕಾರಣದಿಂದ ಬ್ರಿಟಿಷ್ ಅಧಿಕಾರಿಗಳು ಮತ್ತು ಕಿತ್ತೂರ ಚೆನ್ನಮ್ಮನ ನಡುವೆ ಭಿನ್ನಾಭಿಪ್ರಾಯ ಶುರುವಾಗುತ್ತದೆ.
ಆ ಸಮಯದಲ್ಲಿ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಗೆ ದಕ್ಷಿಣ ಭಾರತದಲ್ಲಿ ಕಲೆಕ್ಟರ್ ಮತ್ತು ರಾಜಕೀಯ ಏಜೆಂಟ್ ಆಗಿ ಕೆಲಸ ಮಾಡುತ್ತಿದ್ದ ಸೇಂಟ್ ಜಾನ್ ಥ್ಯಾಕರೆ ಕಿತ್ತೂರಿಗೆ ತೆರಳಿ ಅಲ್ಲಿನ ಪ್ರದೇಶ, ನಿಧಿ ಮತ್ತು ಸಂಪತ್ತನ್ನು ವಶಪಡಿಸಿಕೊಳ್ಳುವ ಪ್ರಯತ್ನ ಮಾಡಿದಾಗ, ಕಿತ್ತೂರು ಸಂಸ್ಥಾನದ ಜನ ಪ್ರತಿಭಟಿಸಿ ಕೋಟೆಯ ದ್ವಾರಗಳನ್ನು ತೆಗೆಯದೇ ಬಂಡಾಯ ಸಾರುತ್ತಾರೆ.
ಚೆನ್ನಮ್ಮನ ಬಲಗೈ ಬಂಟ ಅಮಟೂರ ಬಾಳಪ್ಪ ಥ್ಯಾಕರೆಯನ್ನಿ ಹೊಡೆದುರುಳಿಸಿದ. ಆಗ ಧಾರವಾಡದ ಕಲೆಕ್ಟರನಾಗಿದ್ದ ಥ್ಯಾಕರೆಯ ಪಾರ್ಥಿವ ಶರೀರವನ್ನು ಹೆಬ್ಬಳ್ಳಿ ಅಗಸಿ ಹತ್ತಿರದ ಕ್ರಿಶ್ಚಿಯನ್ ರುದ್ರಭೂಮಿಯಲ್ಲಿ ಸಮಾಧಿ ಮಾಡಲಾಯಿತು. ನಮ್ಮ ಸ್ವಾತಂತ್ರ‍್ಯ ಚಳುವಳಿಯ ದ್ಯೋತಕವಾಗಬೇಕಿದ್ದ ಈ ಸ್ಥಳ ಇಂದು ಕಸಾಯಿಖಾನೆಯಾಗಿ ಪರಿವರ್ತನೆಯಾಗಿದೆ, ನಾವೆಲ್ಲ ತಲೆ ತಗ್ಗಿಸಬೇಕಾದ ರೀತಿಯಲ್ಲಿ ಈ ಸಮಾಧಿಗಳನ್ನು ಅಲಕ್ಷಿಸಿದ್ದೇವೆ.
ಥ್ಯಾಕರೆಯದ್ದೂ ಸೇರಿ ಸುಮಾರು ೧೨-೧೫ ಸಮಾಧಿಗಳು ಇಲ್ಲಿವೆ.ದುರಂತವೆAದರೆ ಇದರಲ್ಲಿ ಥ್ಯಾಕರೆಯ ಸಮಾಧಿ ಯಾವುದು ಎಂಬುದನ್ನು ಕೂಡ ಗುರುತಿಸಲು ಸಾಧ್ಯವಾಗುತ್ತಿಲ್ಲ.ಸಂಶೋಧನೆಗಳೇ ಅದರ ಮೇಲೆ ಬೆಳಕು ಚೆಲ್ಲಬೇಕಾಗಿದೆ. ಬಹುತೇಕ ಸಮಾಧಿಗಳ ಮೇಲಿನ ಕಲ್ಲಿನ ಬರಹಗಳು ಕಿತ್ತು ಹೋಗಿವೆ. ಥ್ಯಾಕರೆ ಸಮಾಧಿ ಕುರಿತ ಬರಹವೂ ಅಲ್ಲಿ ಕಾಣುತ್ತಿಲ್ಲ. ಭಾರತದ ಮಣ್ಣಿನಲ್ಲಿ ಮಣ್ಣಾಗಿರುವ ಬ್ರಿಟಿಷ್ ಅಧಿಕಾರಿಗಳನ್ನು ಗೌರವಿಸುವುದೂ ಕೂಡ ಭಾರತೀಯ ಸಂಸ್ಕೃತಿಯೇ ಆಗಿದೆ. ಆಜಾದಿ ಕಾ ಅಮೃತ ಮಹೋತ್ಸವ ಆಚರಣೆಯ ಸಂಭ್ರಮದಲ್ಲಿರುವ ನಾವು ನಮ್ಮಮುಂದಿನ ಪೀಳಿಗೆಗೆ ಇತಿಹಾಸದ ಬಗ್ಗೆ ಐತಿಹಾಸಿಕ ಕಟ್ಟಡ, ಸ್ಮಾರಕ, ದಾಖಲೆಗಳ ಬಗ್ಗೆ ಮಾಹಿತಿ ನೀಡಿ ಜಾಗೃತಿ ಮೂಡಿಸುವದು ಅವಶ್ಯಕವಾಗಿದೆ. ಪಾರಂಪರಿಕ ನಡಿಗೆಯ ಮೂಲಕ ಅವುಗಳ ಮಹತ್ವವನ್ನು ಜನರಿಗೆ ತಲುಪಿಸುವ ಕಾರ್ಯವಾಗಬೇಕು.
ಪುನರ್ವಸತಿ ಕಲ್ಪಿಸಿ:
ಈ ಸಮಾಧಿಗಳ ಸಂರಕ್ಷಣೆಗೆ ಇಲ್ಲಿನ ವಧಾಲಯವನ್ನು ಅವಲಂಬಿಸಿರುವ ಕುಟುಂಬಗಳಿಗೆ ಬೇರೆಡೆ ಸೂಕ್ತ ಜಾಗೆ ನೀಡಿ,ಸ್ಥಳಾಂತರ ಮಾಡಿದರೆ. ಆ ಕುಟುಂಬಗಳಿಗೆ ಪುನರ್ವಸತಿಯೂ ಸಿಗುತ್ತದೆ.ಸಮಾಧಿ ಸ್ಥಳಗಳನ್ನು ಯೋಜಿತವಾಗಿ ಸಂರಕ್ಷಿಸಲು ಕೂಡ ಸಾಧ್ಯವಾಗುತ್ತದೆ.ಈ ನಿಟ್ಟಿನಲ್ಲಿ ಕ್ರಮ ಅಗತ್ಯವಾಗಿದೆ.
-ಗಣೇಶ ಬಡಪ್ಪನವರ, ಧಾರವಾಡ