ಕೋಲಾರದಿಂದಲೂ ಸಿದ್ದರಾಮಯ್ಯ ಓಡುವುದು ನಿಶ್ಚಿತ: ಆರ್.ಅಶೋಕ್

ಕೋಲಾರದಿಂದಲೂ ಸಿದ್ದರಾಮಯ್ಯ ಓಡುವುದು ನಿಶ್ಚಿತ: ಆರ್.ಅಶೋಕ್

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಬಾದಾಮಿ ಕ್ಷೇತ್ರದಂತೆಯೇ ಕೋಲಾರದಿಂದಲೂ ಮತದಾರರು ಅವರನ್ನು ಓಡಿಸುವುದು ನಿಶ್ಚಿತ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದ್ದಾರೆ.

ಸಿದ್ದರಾಮಯ್ಯ ಅವರು ಮುಂಬರುವ ವಿಧಾನಸಭದ ಚುನಾವಣೆಯಲ್ಲಿ ಕೋಲಾರದಿಂದ ಸ್ಪರ್ಧಿಸಲಿದ್ದಾರೆ ಎಂಬ ವಿಚಾರದ ಹಿನ್ನೆಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚಾಮುಂಡೇಶ್ವರಿ ಕ್ಷೇತ್ರದ ಅಭಿವೃದ್ಧಿ ಮಾಡದ ಹಿನ್ನೆಲೆಯಲ್ಲಿ ಹೀನಾಯ ಸೋಲು ಅನುಭವಿಸಿದ್ದರು. ಬಾದಾಮಿಯಲ್ಲಿ ಅಭಿವೃದ್ಧಿ ಕಾರ್ಯ ಮಾಡಿದ್ದರೆ, ಜನರು ಯಾಕೆ ಓಡಿಸುತ್ತಿದ್ದರು ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ಮುಖಂಡ ಚಿಮ್ಮನಕಟ್ಟಿ ಅವರು, ವೇದಿಕೆ ಮೇಲೆಯೇ ಮೋಸ ಮಾಡಿದರು ಅಂತಾ ಹೇಳಿದರು. ಚಿಮ್ಮನ ಕಟ್ಟಿ ಅವರೇ ವೇದಿಕೆ ಮೇಲಿಂದ ಓಡಿಸಿದರು. ಸಿದ್ದರಾಮಯ್ಯ ಕೆಲಸ ಮಾಡಿದ್ದರೆ, ಸವಾಲು ಹಾಕಿ ಬಾದಾಮಿಯಲ್ಲಿ ಸ್ಪರ್ಧೆ ಮಾಡುತ್ತಿದ್ದರು. ಈಗ ಕೋಲಾರಕ್ಕೆ ಬಂದಿದ್ದಾರೆ. ಕ್ಷೇತ್ರಾಂತರ ಮಾಡಿಕೊಂಡು ಓಡಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.
ಮಾಜಿ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಮಾಜಿ ಸಂಸದ ಕೆ.ಎಚ್.ಮುನಿಯಪ್ಪ ಅವರನ್ನು ಚುನಾವಣೆಯಲ್ಲಿ ಸೋಲಿಸಿದರು ಎಂದು ಆರೋಪಿಸಿದ ಅವರು, ಇಬ್ಬರೂ ಸಿದ್ದರಾಮಯ್ಯ ಅವರನ್ನು ಸೋಲಿಸಲು ಕಾಯುತ್ತಿದ್ದಾರೆ ಎಂದು ಅಶೋಕ್ ಹೇಳಿದರು.

ಕಾಂಗ್ರೆಸ್ ಬಸ್ ಯಾತ್ರೆ ಪ್ಯಾಕೇಜ್ ಯಾತ್ರೆಯಾಗಿದೆ. ಕ್ಷೇತ್ರಕ್ಕೆ ಹೋಗೋದು ಪ್ಯಾಕೇಜ್ ಘೋಷಣೆ ಮಾಡೋದು. ಕಾಂಗ್ರೆಸ್ ಕ್ಷೇತ್ರದಲ್ಲಿ ಕಾಣೆಯಾಗಿದೆ. ಭಾರತದಲ್ಲಿ ಕಾಂಗ್ರೆಸ್ ಮುಳುಗುತ್ತಿದೆ. ಚುನಾವಣೆ ಆದ ಬಳಿಕ ಕಾಂಗ್ರೆಸ್ ರಾಜ್ಯದಲ್ಲಿ ಇರೋದಿಲ್ಲ. ಸಿದ್ದರಾಮಯ್ಯ ಅವರಿಗೆ ಹಿತೈಷಿಯಾಗಿ ಅಂತಾದರೂ ತಿಳಿಯಲಿ, ಶತ್ರು ಅಂತಾದರೂ ತಿಳಿಯಲಿ. ನಾವು ಜನರಿಗೆ ಕೆಲಸ ಮಾಡಿದರೆ ಯಾಕೆ ಸೋಲಿಸುತ್ತಾರೆ.