ಸಿದ್ದರಾಮಯ್ಯಗೆ ಕ್ಷೇತ್ರ ಬಿಟ್ಟುಕೊಟ್ಟ ಶ್ರೀನಿವಾಸಗೌಡ: ಒಂದೇ ಕಲ್ಲಿಗೆ ಎರಡು ಹಕ್ಕಿ ಹೊಡೆಯಲು ಜೆಡಿಎಸ್ ತಂತ್ರ

ಸಿದ್ದರಾಮಯ್ಯಗೆ ಕ್ಷೇತ್ರ ಬಿಟ್ಟುಕೊಟ್ಟ ಶ್ರೀನಿವಾಸಗೌಡ: ಒಂದೇ ಕಲ್ಲಿಗೆ ಎರಡು ಹಕ್ಕಿ ಹೊಡೆಯಲು ಜೆಡಿಎಸ್ ತಂತ್ರ

ಬೆಂಗಳೂರು, ಜನವರಿ 12: ವಿಪಕ್ಷ ನಾಯಕ, ಮಾಜಿ ಮುಖ್ಯಮಂತ್ರಿ, ಅಹಿಂದ ನಾಯಕ ಸಿದ್ದರಾಮಯ್ಯ ಅವರು ಕೋಲಾರದಲ್ಲಿ ಸ್ಪರ್ಧಿಸುವುದಾಗಿ ಘೋಷಣೆ ಮಾಡಿದ ಬಳಿಕ ರಾಜ್ಯ ರಾಜಕೀಯದಲ್ಲಿ ಸಂಚಲನ ಆರಂಭವಾಗಿದೆ. ಎಲ್ಲರ ಚಿತ್ತ ಈಗ ಕೋಲಾರದತ್ತ ನೆಟ್ಟಿದೆ.

ವಿಧಾನಸಭಾ ಚುನಾವಣೆಗೆ ಇನ್ನು ಮೂರು ತಿಂಗಳಷ್ಟೇ ಬಾಕಿಯಿದ್ದು, ರಾಜಕೀಯ ಜಿದ್ದಾಜಿದ್ದಿ ಆರಂಭವಾಗಿದೆ.

ಮುಂದಿನ ದಿನಗಳಲ್ಲಿ ಇದು ತಾರಕಕ್ಕೆ ಹೋಗಲಿದೆ. ಕೆಲವು ಕ್ಷೇತ್ರಗಳಲ್ಲಿ ಜೆಡಿಎಸ್ ಅಭ್ಯರ್ಥಿಗಳನ್ನು ಘೋಷಿಸಿದ್ದರೆ, ಮತ್ತೆ ಕೆಲವು ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಣೆ ಮಾಡಬೇಕಾಗಿದೆ. ಕಾಂಗ್ರೆಸ್‌ನಲ್ಲಿ ಕೆಲವೊಂದು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳು ಬಹುತೇಕ ದೃಢವಾಗಿರುವುದರಿಂದ ಅವರೆಲ್ಲರೂ ಅಖಾಡಕ್ಕಿಳಿದಿದ್ದಾರೆ. ಬಿಜೆಪಿ ಹಲವು ಕ್ಷೇತ್ರಗಳಲ್ಲಿ ಗೆಲ್ಲುವ ಅಭ್ಯರ್ಥಿಗಳ ಹುಡುಕಾಟದಲ್ಲಿ ನಿರತವಾಗಿದೆ. ಹೀಗೆ ಪ್ರಮುಖ ಮೂರು ರಾಜಕೀಯ ಪಕ್ಷಗಳು ಗೆಲುವಿಗೆ ಬೇಕಾದ ತಂತ್ರಗಳನ್ನು ಆರಂಭಿಸಿವೆ.

ಈ ಮೂರು ಪಕ್ಷಗಳು ಚುನಾವಣೆಯಲ್ಲಿ ನಾವೇ ಗೆದ್ದು ಅಧಿಕಾರ ಹಿಡಿಯುವ ಕನಸು ಕಾಣುತ್ತಿವೆ. ಹೀಗಾಗಿ ಭರ್ಜರಿ ತಯಾರಿ ಮಾಡಿಕೊಂಡು ಅಖಾಡಕ್ಕಿಳಿಯುತ್ತಿವೆ. ವಿರೋಧ ಪಕ್ಷಗಳಾದ ಜೆಡಿಎಸ್ ಮತ್ತು ಕಾಂಗ್ರೆಸ್‌ಗೆ ಆಡಳಿತರೂಢ ಬಿಜೆಪಿಯನ್ನು ಬಗ್ಗು ಬಡಿಯಲು ಹಲವು ಅಸ್ತ್ರಗಳು ಸಿಗುತ್ತಿದ್ದರೂ ಅದನ್ನು ಬಳಕೆ ಮಾಡಿ ಯಶಸ್ವಿಯಾಗುವ ವೇಳೆಗೆ ಬಿಜೆಪಿ ಪ್ರತಿತಂತ್ರ ರೂಪಿಸುತ್ತಿರುವುದು ಇದೀಗ ಗೋಚರಿಸುತ್ತಿದೆ. ರಾಜಕೀಯವಾಗಿ ಇನ್ನೊಂದು ತಿಂಗಳಲ್ಲಿ ಹಲವಷ್ಟು ಬೆಳವಣಿಗೆಗಳು ನಡೆಯುವ ಸಾಧ್ಯತೆಗಳು ಕಂಡು ಬರುತ್ತಿವೆ.

ಸಿದ್ದರಾಮಯ್ಯರ ವಿರುದ್ಧ ತಂತ್ರಗಳು ಶುರು

ಇನ್ನು ಈ ಬಾರಿ ಏನೇ ಆಗಲಿ ಸಿದ್ದರಾಮಯ್ಯ ಅವರನ್ನು ಸೋಲಿಸಲೇ ಬೇಕೆಂಬ ಹಠಕ್ಕೆ ಬಿಜೆಪಿ ಮತ್ತು ಜೆಡಿಎಸ್ ಬಿದ್ದಂತಿದೆ. ಸಿದ್ದರಾಮಯ್ಯರವರನ್ನು ಹಿಂದೂ ವಿರೋಧಿಯಂತೆ ಬಿಂಬಿಸುವ ಎಲ್ಲ ಕಾರ್ಯಗಳನ್ನು ಬಿಜೆಪಿ ಮಾಡುತ್ತಿದೆ ಎನ್ನುವ ಮಾತುಗಳು ಕೇಳಿಬರುತ್ತಿದೆ. ಈಗಾಗಲೇ ಇದನ್ನು ಬಿಜೆಪಿ ನಾಯಕರು ಬಹಿರಂಗವಾಗಿಯೇ ಹೇಳುತ್ತಿರುವುದು ಮಾತ್ರವಲ್ಲದೆ, ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವ ಕೆಲಸ ಎಗ್ಗಿಲ್ಲದೆ ನಡೆಯುತ್ತಿದೆ.

ಜೆಡಿಎಸ್‌ನಿಂದ ಗೆದ್ದು ಶಾಸಕರಾಗಿ ಐದು ವರ್ಷಗಳ ಕಾಲ ಜೆಡಿಎಸ್ ನಲ್ಲಿದ್ದು, ಇದೀಗ ಕಾಂಗ್ರೆಸ್ ಏಳಿಗೆ ಬೆಳೆಸಿ ಸಿದ್ದರಾಮಯ್ಯ ಅವರಿಗೆ ಕ್ಷೇತ್ರ ತ್ಯಾಗ ಮಾಡಿರುವ ಶಾಸಕ ಶ್ರೀನಿವಾಸಗೌಡ ವಿರುದ್ಧ ಜೆಡಿಎಸ್ ನಾಯಕರು ಕುದಿಯುತ್ತಿದ್ದಾರೆ. ಇದರ ಸೇಡನ್ನು ತೀರಿಸಿಕೊಳ್ಳಬೇಕಾದರೆ ಸಿದ್ದರಾಮಯ್ಯ ಅವರು ಸೋಲು ಕಾಣಬೇಕು ಎಂಬುದು ಅವರ ಲೆಕ್ಕಾಚಾರವಾಗಿದೆ. ಈಗಾಗಲೇ ಶಾಸಕ ಶ್ರೀನಿವಾಸಗೌಡ ಕ್ಷೇತ್ರವನ್ನು ಬಿಟ್ಟುಕೊಟ್ಟು ಮುಂದೆ ಸಿದ್ದರಾಮಯ್ಯ ಗೆದ್ದರೆ ಎಂಎಲ್ಸಿಯಾಗುವ ಅಷ್ಟೇ ಅಲ್ಲದೆ ಕಾಂಗ್ರೆಸ್ ಅಧಿಕಾರಕ್ಕೆ ಬಂದು ಸಿದ್ದರಾಮಯ್ಯ ಮುಖ್ಯಮಂತ್ರಿಯಾದರೆ ತಾವು ಸಚಿವರಾಗುವ ಒಪ್ಪಂದ ಮಾಡಿಕೊಂಡಿರುವ ಬಗೆಗಿನ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ.