ನಿಷ್ಠೆಯ ನಾಯಕ ಖರ್ಗೆಗೆ ಎಐಸಿಸಿ ಪಟ್ಟ ಫಿಕ್ಸ್

ನಿಷ್ಠೆಯ ನಾಯಕ ಖರ್ಗೆಗೆ ಎಐಸಿಸಿ ಪಟ್ಟ ಫಿಕ್ಸ್

ಬೆಂಗಳೂರು,ಅ.17- ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಇಂದು ದೇಶಾದ್ಯಂತ ಚುನಾವಣೆ ನಡೆದಿದ್ದು, ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಆಯ್ಕೆ ಬಹುತೇಕ ಖಚಿತವಾಗಿದೆ. ಕಳೆದ ಒಂದು ತಿಂಗಳಿನಿಂದ ನಡೆಯುತ್ತಿರುವ ಚುನಾವಣಾ ಪ್ರಕ್ರಿಯೆಯಲ್ಲಿ ರಾಜ್ಯಸಭೆಯ ವಿರೋಧ ಪಕ್ಷದ ನಾಯಕರಾಗಿದ್ದ ಮಲ್ಲಿಕಾರ್ಜುನ ಖರ್ಗೆ ಮತ್ತು ಕೇರಳ ಸಂಸದ ಶಶಿ ತರೂರ್ ನಡುವೆ ಸ್ಪರ್ಧೆ ಏರ್ಪಟ್ಟಿತ್ತು.

ಇಂದು ದೇಶಾದ್ಯಂತ ಸುಮಾರು 9100ಕ್ಕೂ ಹೆಚ್ಚು ಪ್ರತಿನಿಧಿಗಳು ಎಐಸಿಸಿ ಅಧ್ಯಕ್ಷರ ಆಯ್ಕೆಗೆ ಮತದಾನ ಮಾಡಿದ್ದಾರೆ. 22 ವರ್ಷಗಳ ಹಿಂದೆ ಸೋನಿಯಾ ಗಾಂಧಿ ಅವರು ಚುನಾವಣೆ ಮೂಲಕ ಆಯ್ಕೆಯಾಗಿದ್ದರು. ಆನಂತರ ನಿರಂತರವಾಗಿ ಸೋನಿಯಾ ಗಾಂಧಿ ಅವರೇ ಅಧ್ಯಕ್ಷೀಯ ಸ್ಥಾನವನ್ನು ನಿಭಾಯಿಸಿದರು. ಒಂದೆರಡು ವರ್ಷ ಕಾಲ ರಾಹುಲ್ ಗಾಂಧಿ ಅಧ್ಯಕ್ಷರಾಗಿದ್ದರಾದರೂ ಲೋಕಸಭೆಯ ಚುನಾವಣೆಯ ಸೋಲಿನ ನೈತಿಕ ಹೊಣೆ ಹೊತ್ತು ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

ಮತ್ತೆ ಸೋನಿಯಾ ಗಾಂಧಿಯವರೇ ಪ್ರಭಾರಿ ಅಧ್ಯಕ್ಷರಾಗಿ ಮುಂದುವರೆದಿದ್ದರು. ಇತ್ತೀಚೆಗೆ ರಾಜಸ್ಥಾನದ ಉದಯಪುರದಲ್ಲಿ ನಡೆದ ಚಿಂತನ್ ಶಿಬಿರ್‍ನಲ್ಲಿ ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಸುವ ಪ್ರಸ್ತಾವ ಅಂಗೀಕಾರವಾಗಿತ್ತು.

ಅದರಂತೆ ಹಿರಿಯ ನಾಯಕ ಮಧುಸೂದನ್ ಮಿಸ್ತ್ರಿ ನೇತೃತ್ವದಲ್ಲಿ ಸಾಂಸ್ಥಿಕ ಚುನಾವಣೆಯ ಪ್ರಾಧಿಕಾರ ರಚನೆಯಾಗಿದ್ದು, ಅದು ದೇಶಾದ್ಯಂತ ಇಂದು ಚುನಾವಣೆಗಳನ್ನು ಸಂಘಟಿಸಿದೆ. ಮೇಲ್ನೋಟಕ್ಕೆ ಖರ್ಗೆ ಅವರ ಆಯ್ಕೆ ಬಹುತೇಕ ಖಚಿತ ಎಂದು ಹೇಳಲಾಗಿದೆ.

ಶಶಿ ತರೂರ್ ಈ ಹಿಂದೆ ವಿಶ್ವ ಸಂಸ್ಥೆಯಲ್ಲಿ ಪ್ರಭಾರ ಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದರು. ಯುಪಿಎ ಸರ್ಕಾರದಲ್ಲಿ ವಿದೇಶಾಂಗ ಸೇರಿದಂತೆ ಹಲವು ಸಚಿವ ಸ್ಥಾನಗಳನ್ನು ನಿಭಾಯಿಸಿದ್ದರು. ಮಲ್ಲಿಕಾರ್ಜುನ ಖರ್ಗೆ 55 ವರ್ಷಗಳ ರಾಜಕೀಯ ಜೀವನದಲ್ಲಿ ಸುದೀರ್ಘ ಅನುಭವ ಹೊಂದಿದ್ದು, ಪಕ್ಷ ನಿಷ್ಠೆಗೆ ಹೆಸರಾಗಿದ್ದಾರೆ.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನದಿಂದ ಎಐಸಿಸಿ ಹುದ್ದೆಯವರೆಗೂ ಅವರ ರಾಜಕೀಯ ಪಯಣ ರೋಚಕವಾಗಿದೆ. ಕರ್ನಾಟಕದವರೇ ಆದ ಖರ್ಗೆ ಅವರು ಲೋಕಸಭೆ, ರಾಜ್ಯಸಭೆ ಎರಡರಲ್ಲೂ ವಿರೋಧ ಪಕ್ಷದ ನಾಯಕರಾಗಿ, ವಿಧಾನಸಭೆಯ ವಿರೋಧ ಪಕ್ಷದ ನಾಯಕರಾಗಿ ಜವಾಬ್ದಾರಿಗಳನ್ನು ನಿಭಾಯಿಸಿದ್ದಾರೆ.

ಕಳೆದ ಲೋಕಸಭೆಯಲ್ಲಿ ಸೋಲು ಕಂಡರೂ ಕೂಡ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರೇ ಆಸಕ್ತಿ ವಹಿಸಿ ರಾಜ್ಯಸಭೆಗೆ ಆಯ್ಕೆ ಮಾಡುವ ಮೂಲಕ ಮತ್ತೊಂದು ಅವಕಾಶ ಮಾಡಿಕೊಟ್ಟರು. ಈಗ ಗಾಂಧಿ ಕುಟುಂಬದಿಂದ ಬೇರೆ ಯಾರೂ ಸ್ಪರ್ಧೆ ಮಾಡುವುದಿಲ್ಲ ಎಂದಾದಾಗ ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಲ್ಹೋಟ್ ಅವರನ್ನು ಕಣಕ್ಕಿಳಿಸಲು ರಾಹುಲ್ ಗಾಂಧಿ ಬಣ ಆಸಕ್ತಿ ವಹಿಸಿತ್ತು.

ಆದರೆ ಮುಖ್ಯಮಂತ್ರಿ ಸ್ಥಾನ ಬಿಟ್ಟು ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳಲು ಅಶೋಕ್ ಗೆಲ್ಹೋಟ್ ಹಿಂದೇಟು ಹಾಕಿದ್ದು, ತಮ್ಮ ಬೆಂಬಲಿಗರ ಮೂಲಕ ಬಂಡಾಯ ಚಟುವಟಿಕೆ ನಡೆಸಿದರು ಎಂಬ ಆಕ್ಷೇಪ ವ್ಯಕ್ತವಾಗಿತ್ತು.
ಹೀಗಾಗಿ ಕೊನೆಯ ಕ್ಷಣದಲ್ಲಿ ಖರ್ಗೆ ಅವರನ್ನು ಕಣಕ್ಕಿಳಿಸಲು ನಿರ್ಧರಿಸಿತ್ತು. ರಾಜಸಭೆಯ ವಿರೋಧ ಪಕ್ಷದ ನಾಯಕ ಸ್ಥಾನಕ್ಕೆ ರಾಜೀನಾಮೆ ನೀಡಿ ಖರ್ಗೆ ಕಣಕ್ಕಿಳಿದಿದ್ದಾರೆ.

ರಾಜ್ಯದಲ್ಲಿ ಮತದಾನ:
ಎಐಸಿಸಿ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯದಲ್ಲಿಂದು ಎರಡು ಕಡೆ ಮತದಾನ ನಡೆದಿದೆ. ಕೆಪಿಸಿಸಿ ಕಚೇರಿಯಲ್ಲಿ 9 ಬೂತ್‍ಗಳ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಸುಮಾರು 494 ಮಂದಿ ಇಲ್ಲಿ ಮತದಾನ ಮಾಡಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ಬಿ.ಕೆ.ಹರಿಪ್ರಸಾದ, ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ್ ಸೇರಿದಂತೆ ಅನೇಕರು ಪಕ್ಷದ ಕಚೇರಿಯಲ್ಲಿ ಮತದಾನ ಮಾಡಿದರು.

ರಾಹುಲ್ ಗಾಂಧಿಯವರ ಭಾರತ ಐಕ್ಯತಾ ಯಾತ್ರೆ ರಾಜ್ಯದಲ್ಲೇ ಇದ್ದು ಅವರಿಗಾಗಿ ಬಳ್ಳಾರಿ ಸಂಗನಕಲ್ಲು ಗ್ರಾಮದಲ್ಲಿ ಪ್ರತ್ಯೇಕ ಮತಗಟ್ಟೆ ಸ್ಥಾಪಿಸಲಾಗಿತ್ತು. ರಾಷ್ಟ್ರೀಯ ಯಾತ್ರಾರ್ಥಿಗಳು ಸೇರಿದಂತೆ ರಾಜ್ಯದ ಕೆಲವು ನಾಯಕರು ಈ ಮತಗಟ್ಟೆಯಲ್ಲಿ ಮತ ಚಲಾಯಿಸಿದ್ದಾರೆ.

ಬುಧವಾರ ಮತ ಎಣಿಕೆ ನಡೆಯಲಿದ್ದು, 130 ವರ್ಷ ಇತಿಹಾಸವಿರುವ ಕಾಂಗ್ರೆಸ್‍ನ ಅಧಿನಾಯಕ ಆಯ್ಕೆ ಸ್ಪಷ್ಟವಾಗಲಿದೆ.