400 ರೂ. ಲಂಚ ಪಡೆದ ಪ್ರಕರಣದಲ್ಲಿ ರಾಜ್ಯ ಸರ್ಕಾರದ ಆದೇಶ ಎತ್ತಿ ಹಿಡಿದ ಹೈಕೋರ್ಟ್

ಲಂಚ ಪಡೆದ ಪ್ರಕರಣದಲ್ಲಿ ದ್ವಿತೀಯ ದರ್ಜೆ ಗುಮಾಸ್ತನನ್ನು ಕಡ್ಡಾಯ ನಿವೃತ್ತಿಗೊಳಿಸಿ ಆದೇಶಿಸಿದ್ದ ನಗರಾಭಿವೃದ್ಧಿ ಇಲಾಖೆಯ ಕ್ರಮವನ್ನು ಹೈಕೋರ್ಟ್ ಎತ್ತಿ ಹಿಡಿದಿದೆ. ಇದನ್ನು ರದ್ದುಪಡಿಸಲು ಕೋರಿದ್ದ ಗುಮಾಸ್ತನ ಅರ್ಜಿಯನ್ನು ವಜಾಗೊಳಿಸಲಾಗಿದೆ.
ಪ್ರಕರಣದ ವಿವರ: ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲೂಕಿನ ಬಸವರಾಜ ಸಂಗಪ್ಪ ಗಾಣಿಗೇರಾ ಎಂಬವರು ತಮ್ಮ ನಿವೇಶನದಲ್ಲಿ ಶೆಡ್ ನಿರ್ಮಿಸುವ ಸಲುವಾಗಿ ಅನುಮತಿ ಕೋರಿದ್ದು, ಈ ವೇಳೆ ಕುಷ್ಟಗಿ ಪುರಸಭೆಯಲ್ಲಿ ದ್ವಿತೀಯ ದರ್ಜೆ ಸಹಾಯಕರಾಗಿದ್ದ ನರಸಿಂಹಲು ಅವರಿಂದ 400 ರೂಪಾಯಿ ಲಂಚ ಪಡೆದಿದ್ದರು.
2008ರ ಅಕ್ಟೋಬರ್ 3ರಂದು ಲಂಚ ಪಡೆಯುವಾಗ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಪೊಲೀಸರಿಗೆ ಸಿಕ್ಕಿಬಿದ್ದಿದ್ದು ವಿಚಾರಣೆಯಲ್ಲೂ ಇದು ಸಾಬೀತಾಗಿತ್ತು. ಈ ಹಿನ್ನೆಲೆಯಲ್ಲಿ ಅವರನ್ನು ಕಡ್ಡಾಯವಾಗಿ ನಿವೃತ್ತಿಗೊಳಿಸಿ ಆದೇಶ ಹೊರಡಿಸಲಾಗಿತ್ತು.
ಇದನ್ನು ಪ್ರಶ್ನಿಸಿ ನರಸಿಂಹಲು ಹೈಕೋರ್ಟ್ ಮೆಟ್ಟಿಲೇರಿದ್ದು, ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್.ಜಿ. ಪಂಡಿತ್ ಅವರ ನ್ಯಾಯಪೀಠ ಅರ್ಜಿಯನ್ನು ವಜಾಗೊಳಿಸಿದ್ದು ನಗರಾಭಿವೃದ್ಧಿ ಇಲಾಖೆಯ ಕ್ರಮವನ್ನು ಎತ್ತಿ ಹಿಡಿದಿದೆ.