ಜಾರಕಿಹೊಳಿ ಸಹೋದರರು ಒಂದಾಗುತ್ತಾರೆ ಎಂಬ ಮನಸ್ಥಿತಿಯಿಂದ ಹೊರಬನ್ನಿ: ಸತೀಶ

ಜಾರಕಿಹೊಳಿ ಸಹೋದರರು ಒಂದಾಗುತ್ತಾರೆ ಎಂಬ ಮನಸ್ಥಿತಿಯಿಂದ ಹೊರಬನ್ನಿ: ಸತೀಶ

ಬೆಳಗಾವಿ: 'ಅಣ್ಣ-ತಮ್ಮಂದಿರು (ಜಾರಕಿಹೊಳಿ ಸಹೋದರರು) ಕೊನೆಗೆ ಒಂದಾಗುತ್ತಾರೆ ಎಂಬ ಮನಸ್ಥಿತಿಯಿಂದ ಮತದಾರರು ಹೊರಬರಬೇಕು' ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ತಿಳಿಸಿದರು.

ವಿಧಾನ‍ಪರಿಷತ್ ಚುನಾವಣೆ ಕಾಂಗ್ರೆಸ್ ಅಭ್ಯರ್ಥಿ ಚನ್ನರಾಜ ಹಟ್ಟಿಹೊಳಿ ಪರವಾಗಿ ರಾಯಬಾಗದಲ್ಲಿ ಭಾನುವಾರ ನಡೆದ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.

'ಈ ಸಹೋದರರೆಲ್ಲರೂ ಒಂದೇ ಎನ್ನುವ ನಿಮ್ಮ ಮನಸ್ಥಿತಿಗೆ ಜಗತ್ತಿನಲ್ಲಿ ಔಷಧಿ ಇಲ್ಲ; ಕಂಡು ಹಿಡಿಯುವುದಕ್ಕೂ ಆಗುವುದಿಲ್ಲ. ಇವರು ಈಗೇನು ಮತ್ತು ಕೊನೆಗೇನು ಮಾಡುತ್ತಾರೆ ಎಂದೇ ಚರ್ಚಿಸುತ್ತೀದ್ದೀರಿ. ನಾನು ಕಾಂಗ್ರೆಸ್‌ಗೆ ಮಾತ್ರವೇ ಕೆಲಸ ಮಾಡುತ್ತಿದ್ದೇನೆ' ಎಂದು ಸ್ಪಷ್ಟಪಡಿಸಿದರು.

'ಇಲ್ಲಿ ಕುಟುಂಬದ ಪ್ರಶ್ನೆ ಇಲ್ಲ. ಕಾಂಗ್ರೆಸ್‌-ಬಿಜೆಪಿ ನಡುವಿನ ಚುನಾವಣೆ. ಕುಟುಂಬ ನೋಡದೆ ನೀವು ಮತ ಚಲಾಯಿಸಿದರೆ, ನಾವು 4ಸಾವಿರ ಮತಗಳನ್ನು ಪಡೆದು ಗೆಲ್ಲುತ್ತೇವೆ. ಇಲ್ಲವಾದಲ್ಲಿ 3ಸಾವಿರಕ್ಕೆ ಇಳಿಯುತ್ತೇವೆ' ಎಂದು ತಿಳಿಸಿದರು.

'ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಅವರು (ರಮೇಶ ಹಾಗೂ ಲಖನ್ ಜಾರಕಿಹೊಳಿ) ನನ್ನನ್ನು ಮತದಾರರಿಗೆ ಹಣ ಹಂಚಿ ಸೋಲಿಸಿದ್ದಾರೆ. ನಾನು ಈಗ ಅವರನ್ನು ಗೆಲ್ಲಿಸುವ ಪ್ರಶ್ನೆಯೇ ಬರುವುದಿಲ್ಲ' ಎಂದರು.